ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ: ಅಧಿಕಾರಿಗಳಿಗೆ ರೈತರ ತರಾಟೆ

Last Updated 5 ಮೇ 2020, 17:09 IST
ಅಕ್ಷರ ಗಾತ್ರ

ಕನಕಪುರ: ಅಧಿಕಾರಿಗಳು ನಮ್ಮ ಸಮಸ್ಯೆ ಕೇಳಿ ಅವುಗಳನ್ನು ಪರಿಹರಿಸದಿದ್ದ ಮೇಲೆ ಮತ್ತೇಕೆ ಸಭೆಗೆ ಬರುತ್ತೀರಿ ಎಂದು ಇಲ್ಲಿನ ರೈತರು ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡ ಘಟನೆ ಕಾಡಳಿ ಗ್ರಾಮ ಪಂಚಾಯಿತಿಯಲ್ಲಿ ನಡೆಯಿತು.

ತಾಲ್ಲೂಕಿನ ಸಾತನೂರು ಹೋಬಳಿ ಕಾಡಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ಆಯೋಜಿಸಿದ್ದ ವಿಶೇಷ ಗ್ರಾಮ ಸಭೆಯಲ್ಲಿ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡು ರೈತರು ಅಧಿಕಾರಿಗಳ ವಿರುದ್ಧ ಹರಿಹಾಯ್ದರು.

‘ಕಳೆದ ಸಾಲಿನಲ್ಲಿ ನರೇಗಾ ಯೋಜನೆಯಡಿ ಮಾಡಿರುವ ಕೆಲಸಗಳಿಗೆ ಹಣ ಬಂದಿಲ್ಲ. ಬಂದಿದ್ದರೂ ಅದು ಬೇರೆಯವರ ಖಾತೆಗೆ ಹೋಗಿದೆ. ಬೇರೆ ಜಿಲ್ಲೆಗೆ ಹೋಗಿದೆ. ಕೇಳಿದರೆ ಖಾತೆ ಸಂಖ್ಯೆ ತಪ್ಪಾಗಿದೆ‌ ಎಂದು ಹೇಳುತ್ತೀರಿ. ಅದನ್ನು ಮಾಡಿದವರು ಯಾರು. ನಮ್ಮ ಕೂಲಿ ಹಣವನ್ನು ಕೊಡಿಸುವವರು ಯಾರು’ ಎಂದು ಪ್ರಶ್ನಿಸಿದರು.

‘ಅರಣ್ಯ ಇಲಾಖೆ ಅಧಿಕಾರಿಗಳಿಗೆ ನಮ್ಮ ಬೆಳೆ ಹಾನಿಯಾಗಿರುವ ಬಗ್ಗೆ ದೂರು ಕೊಟ್ಟರೆಪ್ರಾದೇಶಿಕ ಅರಣ್ಯ ಮತ್ತು ವನ್ಯಜೀವಿ ಅರಣ್ಯ ಇಲಾಖೆ ಮಧ್ಯೆ ಅಲೆದಾಡಿಸುತ್ತಾರೆ’ ಎಂದರು.

ವ್ಯಾಪ್ತಿ ಯಾರಿಗೆ ಸೇರಿದೆ ಎಂಬುದನ್ನು ಅವರು ತೀರ್ಮಾನ ಮಾಡಿಕೊಂಡು ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಕಾಡನೆಗಳು ವ್ಯಾಪ್ತಿ ನೋಡಿಕೊಂಡು ಬೆಳೆ ನಾಶ ಮಾಡುತ್ತಿವೆಯೇ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ನಮಗೆ ಇಷ್ಟೆಲ್ಲಾ ಸಮಸ್ಯೆಗಳು ಆಗುತ್ತಿದ್ದರೂ, ಯಾವುದೇ ಪರಿಹಾರ ಬಾರದಿದ್ದರೂ ಪಿಡಿಒ ಮಾತ್ರ ಯಾವುದನ್ನೂ ತಲೆಕೆಡಿಸಿಕೊಳ್ಳದೆ ಸುಮ್ಮನಿದ್ದಾರೆ. ನಾವೊಂದು ಕೇಳಿದರೆ ಅವರೊಂದು ಹೇಳುತ್ತಾರೆ. ಪಂಚಾಯ್ತಿಯಲ್ಲಿ ಆಗಿರುವ ಮತ್ತು ಆಗುತ್ತಿರುವ ತಪ್ಪುಗಳನ್ನು ಸರಿಪಡಿಸಿ’ ಎಂದು ಒತ್ತಾಯಿಸಿದರು.

ಪಿಡಿಒ ಮಧುರೇಶ್ವರಿ ಮಾತನಾಡಿ, ‘ನಾವು ವಿಶೇಷ ಸಭೆ ಕರೆದಿರುವುದು ನಿಮ್ಮ ಸಮಸ್ಯೆಗಳ ಬಗ್ಗೆ ಚರ್ಚಿಸಲು ಅಲ್ಲ, ಹೊಸದಾಗಿ ನರೇಗಾ ಯೋಜನೆಯಡಿ ಕೆಲಸ ಮಾಡಲು ಹೊಸ ಕಾಮಗಾರಿಗಳನ್ನು ಸೇರಿಸಲು. ಜತೆಗೆ ಈ ಬಾರಿ ರಾಮನಗರ ಜಿಲ್ಲೆಯಲ್ಲಿ ನರೇಗಾ ಯೋಜನೆಯಡಿ ಕೂಲಿ ವೆಚ್ಚಕ್ಕೆ ಮಾತ್ರ ಅವಕಾಶ ಮಾಡಿಕೊಡಲಾಗಿದೆ. ಕಳೆದ ಸಾಲಿನಲ್ಲಿ ಸಾಮಾಗ್ರಿ ವೆಚ್ಚದ ಕೆಲಸ ಹೆಚ್ಚಾಗಿ ಮಾಡಿರುವುದರಿಂದ ನರೇಗಾ ಯೋಜನೆ ನಿಯಮದಂತೆ 60;40 ಅನುಪಾತ ಆಗದ ಕಾರಣ ಜಿಲ್ಲೆಯಲ್ಲಿ ಸಾಮಾಗ್ರಿ ವೆಚ್ಚವನ್ನು ತಡೆಹಿಡಿಯಲಾಗಿದೆ‘ ಎಂದರು.

‘ಒಂದೊಂದು ಪಂಚಾಯ್ತಿಯಲ್ಲಿ ₹ 2 ರಿಂದ ₹ 3 ಕೋಟಿ ಸಾಮಾಗ್ರಿ ವೆಚ್ಚ ಬಾಕಿ ಉಳಿದೆ. ಅದಕ್ಕಾಗಿ ಎಲ್ಲಾ ಪಂಚಾಯ್ತಿಗಳಲ್ಲೂ ನರೇಗಾ ಅನುಪಾತ ಸರಿಹೋಗುವ ತನಕ ಮಾನವ ದಿನಗಳ ಕೂಲಿ ವೆಚ್ಚದ ಕಾಮಗಾರಿಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ’ ಎಂದರು.

‘ಸಮುದಾಯ ಕಾಮಗಾರಿಗಳಲ್ಲಿ ಕೆರೆ ಹೂಳು ಎತ್ತುವುದು, ಮಣ್ಣಿನ ಕೆಲಸಕ್ಕೆ ಸಂಬಂಧಿಸಿದವುಗಳನ್ನು ಮಾತ್ರ ಮಾಡಬೇಕಿದೆ. ವೈಯಕ್ತಿಕ ಕಾಮಗಾರಿಗಳಲ್ಲಿ ಭೂಮಿ ಸಮತಟ್ಟು, ಬದು ನಿರ್ಮಾಣ, ಕೃಷಿಹೊಂಡ, ದನದ ಕೊಟ್ಟಿಗೆ, ರೇಷ್ಮೆ, ಮಾವು, ತೆಂಗು, ಬಾಳೆ ನಾಟಿಗೆ ಮತ್ತು ಪುನಶ್ಚೇತನಕ್ಕೆ ಅವಕಾಶ ಕಲ್ಪಿಸಲಾಗಿದೆ’ ಎಂದರು.

ಕೃಷಿ, ತೋಟಗಾರಿಕೆ, ಬೆಸ್ಕಾಂ, ಅರಣ್ಯ, ರೇಷ್ಮೆ ಇಲಾಖೆ ಅಧಿಕಾರಿಗಳು ತಮ್ಮ ಇಲಾಖೆಯಿಂದ ನರೇಗಾ ಕಾಮಗಾರಿಗಳನ್ನು ಅನುಷ್ಠಾನ ಮಾಡಿಕೊಡುವ ಬಗ್ಗೆ ವಿವರಿಸಿದರು. ಹೊಸ ನಾಟಿ ಮತ್ತು ಪುನಶ್ಚೇತನಕ್ಕೆ ಅವಕಾಶವಿದೆ. ಆಸಕ್ತಿ ತೋರುವ ರೈತರುಗಳ ಜಮೀನುಗಳಿಗೆ ಭೇಟಿ ಮಾಡಿ ಮಾರ್ಗದರ್ಶನ ನೀಡುವುದಾಗಿ ಹೇಳಿದರು.

ಪಂಚಾಯ್ತಿ ಕಾರ್ಯದರ್ಶಿ ಕೃಷ್ಣಯ್ಯ, ಎಸ್‌ಡಿಎ ನಿರಂಜನ, ಕರವಸೂಲಿಗಾರ ರಮೇಶ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT