ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರನ್ನು ತಲುಪದ ಬರ ಪರಿಹಾರ

40 ಸಾವಿರ ಕೃಷಿಕರಿಗೆ ಕಳೆದ ಮುಂಗಾರು, ಹಿಂಗಾರಿನ ಬೆಳೆ ನಷ್ಟ ತುಂಬದ ಸರ್ಕಾರ
Last Updated 21 ಆಗಸ್ಟ್ 2019, 19:45 IST
ಅಕ್ಷರ ಗಾತ್ರ

ರಾಮನಗರ: ಕಳೆದ ವರ್ಷ ಜಿಲ್ಲೆಯ ಮೂರು ತಾಲ್ಲೂಕುಗಳನ್ನು ರಾಜ್ಯ ಸರ್ಕಾರ ಬರಪೀಡಿತ ಎಂದು ಘೋಷಿಸಿದ್ದು, ವರ್ಷವಾದರೂ ಇನ್ನೂ ರೈತರಿಗೆ ಬೆಳೆನಷ್ಟದ ಪರಿಹಾರ ತಲುಪಿಲ್ಲ.

ಕಳೆದ ಸಾಲಿನಲ್ಲಿ ಬರ ರಾಮನಗರ ಜಿಲ್ಲೆಯನ್ನು ಬಾಧಿಸಿತ್ತು. ಮುಂಗಾರು ಹಂಗಾಮಿನಲ್ಲಿ ಕನಕಪುರ ಹಾಗೂ ಚನ್ನಪಟ್ಟಣ ತಾಲ್ಲೂಕಿನಲ್ಲಿ ತೀವ್ರ ಬರದ ಪರಿಸ್ಥಿತಿ ಇದ್ದು, ರಾಜ್ಯ ಸರ್ಕಾರ ಈ ಎರಡೂ ತಾಲ್ಲೂಕನ್ನು ಬರಪೀಡಿತ ಎಂದು ಘೋಷಣೆ ಮಾಡಿತ್ತು. ಹಿಂಗಾರಿನಲ್ಲಿ ಸಹ ನಿರೀಕ್ಷೆಯಷ್ಟು ಮಳೆ ಬಿದ್ದಿರಲಿಲ್ಲ. ವರುಣನ ಬಗ್ಗೆ ನಿರೀಕ್ಷೆ ಇಟ್ಟುಕೊಂಡು ಬಿತ್ತನೆ ಮಾಡಿದ್ದ ರೈತರು ಈ ಬಾರಿಯೂ ನಷ್ಟ ಅನುಭವಿಸಿದ್ದರು. ಪರಿಣಾಮವಾಗಿ ಹಿಂಗಾರಿನಲ್ಲಿ ಬಿತ್ತನೆಯಾಗಿದ್ದ ಅಷ್ಟೂ ಬೆಳೆಯು ನಷ್ಟವಾಗಿತ್ತು. ರಾಜ್ಯ ಸರ್ಕಾರ ರಾಮನಗರ, ಕನಕಪುರ ಹಾಗೂ ಮಾಗಡಿ ತಾಲ್ಲೂಕುಗಳನ್ನು ಹಿಂಗಾರಿನಲ್ಲಿ ಬರ ಎಂದು ಘೋಷಣೆ ಮಾಡಿತ್ತು.

ಈ ಎರಡೂ ಹಂಗಾಮಿನಲ್ಲಿ ಉಂಟಾದ ಬೆಳೆ ನಷ್ಟವನ್ನು ಅಂದಾಜಿಸಿ ಕೃಷಿ ಇಲಾಖೆಯು ರಾಜ್ಯ ಸರ್ಕಾರಕ್ಕೆ ಪರಿಹಾರ ಕೋರಿ ಅರ್ಜಿ ಸಲ್ಲಿಸಿತ್ತು. ಎನ್‌ಡಿಆರ್‌ಎಫ್‌ ನಿಯಮಾವಳಿಯಂತೆ ಮುಂಗಾರಿನಲ್ಲಿ ರಾಗಿ ಬಿತ್ತಿ ಅನುಭವಿಸಿದ ಎರಡು ತಾಲ್ಲೂಕುಗಳ ರೈತರಿಗೆ ಹೆಕ್ಟೇರ್‌ಗೆ ₨6800 ರಂತೆ ಒಟ್ಟು ₨15.66 ಕೋಟಿ ಪರಿಹಾರ ಕೋರಲಾಗಿತ್ತು. ಅಂತೆಯೇ ಹಿಂಗಾರಿನಲ್ಲಿ ₨2.31 ಕೋಟಿ ಪರಿಹಾರದ ನಿರೀಕ್ಷೆ ಹೊಂದಲಾಗಿತ್ತು. ಆದರೆ ಈವರೆಗೂ ಸರ್ಕಾರ ರೈತರಿಗೆ ಬಿಡಿಗಾಸಿನ ಪರಿಹಾರವನ್ನೂ ನೀಡಿಲ್ಲ.

ಕನಕಪುರದಲ್ಲಿ ಅತಿ ಹೆಚ್ಚು: ಕಳೆದ ಸಾಲಿನಲ್ಲಿ ಕನಕಪುರ ಹಾಗೂ ಚನ್ನಪಟ್ಟಣ ತಾಲ್ಲೂಕುಗಳು ಬರ ಪೀಡಿತ ಎಂದು ಘೋಷಣೆಯಾಗಿದ್ದು, ಇಲ್ಲಿನ ರೈತರು ಅತಿ ಹೆಚ್ಚು ನಷ್ಟ ಅನುಭವಿಸಿದ್ದರು. ಈ ವರ್ಷ ಸಹ ಅಲ್ಲಿನ ಪರಿಸ್ಥಿತಿ ಭಿನ್ನವಾಗಿಲ್ಲ. ಈ ಎರಡೂ ತಾಲ್ಲೂಕುಗಳಲ್ಲಿಯೂ ಸದ್ಯ ಶೇ 20–25ರಷ್ಟು ಜಮೀನಿನಲ್ಲಿ ಬಿತ್ತನೆ ಕಾರ್ಯ ನಡೆದಿದೆ.

ಸದ್ಯ ಕಳೆದೊಂದು ವಾರದಿಂದ ಉತ್ತಮ ಮಳೆಯಾಗುತ್ತಿರುವ ಕಾರಣ ಪರಿಸ್ಥಿತಿ ಕೊಂಚ ಬದಲಾಗುತ್ತಿದೆ. ಆದಾಗ್ಯೂ ಮುಂಗಾರು ಅವಧಿ ಮುಗಿಯುತ್ತಿರುವ ಕಾರಣ ಹೆಚ್ಚಿನ ರೈತರು ಬಿತ್ತನೆಗೆ ಮನಸ್ಸು ಮಾಡುತ್ತಿಲ್ಲ. ಮತ್ತೆ ಮಳೆ ಕೈಕೊಟ್ಟಿದ್ದೇ ಆದಲ್ಲಿ ಈ ಬಾರಿಯೂ ಈ ತಾಲ್ಲೂಕುಗಳು ಬರಪೀಡಿತ ಪಟ್ಟಿ ಹೊತ್ತುಕೊಳ್ಳುವ ಸಾಧ್ಯತೆ ಇದೆ.

‘ಕಳೆದೊಂದು ದಶಕದಲ್ಲಿ ಜಿಲ್ಲೆಯು ಏಳೆಂಟು ವರ್ಷ ಬರಪೀಡಿತ ಎಂದು ಘೋಷಣೆಯಾಗಿದೆ. ಆದರೆ ಸರ್ಕಾರ ನೀಡುವ ಪರಿಹಾರ ಮಾತ್ರ ಇಲ್ಲಿನ ರೈತರನ್ನು ತಲುಪುತ್ತಿಲ್ಲ. ಕೃಷಿಯೇ ನಷ್ಟದ ಹಾದಿಯಲ್ಲಿದೆ. ಇನ್ನಾದರೂ ಸರ್ಕಾರಗಳು ನೊಂದ ರೈತರ ಪರವಾಗಿ ನಿಲ್ಲಬೇಕು. ನಷ್ಟ ಅನುಭವಿಸುವ ರೈತರಿಗೆ ವೈಜ್ಞಾನಿಕವಾಗಿ ಪರಿಹಾರ ನೀಡಬೇಕು’ ಎನ್ನುವುದು ರೈತ ಮುಖಂಡರ ಆಗ್ರಹವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT