ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನೌಕರರಿಗೆ ಮಾನವೀಯ ಗುಣ ಅಗತ್ಯ’ ವಿಧಾನಪರಿಷತ್ ಸದಸ್ಯ ಪುಟ್ಟಣ್ಣ

ಸರ್ಕಾರಿ ನೌಕರರಿಗೆ ಸೇವಾ ಪ್ರಶಸ್ತಿ ಪ್ರದಾನ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ
Last Updated 30 ಅಕ್ಟೋಬರ್ 2019, 13:08 IST
ಅಕ್ಷರ ಗಾತ್ರ

ರಾಮನಗರ: ‘ಸರ್ಕಾರಿ ನೌಕರರು ಮಾನವೀಯ ಗುಣಗಳನ್ನು ಬೆಳೆಸಿಕೊಳ್ಳಬೇಕು. ಸರ್ಕಾರಿ ಕಚೇರಿಗಳಿಗೆ ಬರುವ ಜನಸಾಮಾನ್ಯರನ್ನು ಅಲೆದಾಡಿಸದೇ ಅವರ ಕಷ್ಟಗಳಿಗೆ ಸ್ಪಂದಿಸಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಹೇಳಿದರು.

ಇಲ್ಲಿನ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ವತಿಯಿಂದ ಬುಧವಾರ ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ, ರಾಜ್ಯ ಸರ್ಕಾರಿ ನೌಕರರ ಸೇವಾರತ್ನ ಪ್ರಶಸ್ತಿ ಪ್ರದಾನ ಮತ್ತು ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸರ್ಕಾರಿ ಸೇವೆ ಸಲ್ಲಿಸಿ ನಿವೃತ್ತರಾದವರು ಪಿಂಚಣಿಗಾಗಿ ಅಲೆದಾಡುವ ಪರಿಸ್ಥಿತಿ ಇದೆ. ಆದ್ದರಿಂದ ಸರ್ಕಾರಿ ನೌಕರರ ಸಂಘ ನೌಕರರು ನಿವೃತ್ತರಾಗುವ ಮುನ್ನವೇ ಪಿಂಚಣಿ ಸುಲಭವಾಗಿ ದೊರಕುವಂತೆ ವ್ಯವಸ್ಥೆ ಮಾಡಬೇಕು. ಇದಕ್ಕಾಗಿ ಸಂಘಕ್ಕೆ ಅಗತ್ಯ ಸಹಕಾರ ನೀಡುತ್ತೇನೆ’ ಎಂದರು.

ವಿದ್ಯಾರ್ಥಿ ಜೀವನದಿಂದ ಹೊರ ಬಂದವರು ಮನುಷ್ಯತ್ವ ತುಂಬಿಕೊಂಡು ಹೊರ ಬರುವಂತಾಗಬೇಕು. ನನ್ನಿಂದ ಸಮಾಜದಲ್ಲಿ ಅನಾಹುತಗಳು ಸಂಭವಿಸಬಾರದು ಎಂಬ ಭಾವನೆ, ನನ್ನಿಂದ ಬೇರೆಯವರಿಗೆ ತೊಂದರೆ ಆಗದಂತೆ ಬದುಕುವ ಹಾಗೂ ಜನರ ಕಷ್ಟಸುಖಗಳಿಗೆ ಸ್ಪಂದಿಸುವ ಮನೋಭಾವನೆ ಬೆಳೆಸಬೇಕು ಎಂದು ತಿಳಿಸಿದರು.

ವಿಧಾನ ಪರಿಷತ್‌ ಸದಸ್ಯ ಅ. ದೇವೇಗೌಡ ಮಾತನಾಡಿ, ಉನ್ನತ ಹುದ್ದೆ ಅಲಂಕರಿಸಲು ವಿದ್ಯಾರ್ಥಿಗಳಿಗೆ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಮುಖ್ಯವಾದ ಕಾಲಘಟ್ಟವಾಗಿದೆ. ಅಧಿಕಾರ ಹಾಗೂ ಹಣ ಸಂಪಾದನೆಯನ್ನೇ ಗುರಿಯಾಗಿಟ್ಟುಕೊಳ್ಳದೇ ನಡತೆ ಚೆನ್ನಾಗಿರಬೇಕು. ಸರ್ಕಾರಿ ಹುದ್ದೆಯಲ್ಲಿರುವ ಐಎಎಸ್ ನಂತಹ ಅಧಿಕಾರಿಗಳು ಜನಸಾಮಾನ್ಯರ ನೋವುಗಳಿಗೆ ಸ್ಪಂದಿಸುವುದಿಲ್ಲ. ಹೀಗಾಗಿಯೇ ಅವರುಗಳು ನಿವೃತ್ತರಾದ ಬಳಿಕ ಗೌರವ ಸಿಗುವುದಿಲ್ಲ. ಓದಿ ಮೆರಿಟ್ ಪಡೆದರೆ ಸಾಲದು, ಜನರೊಂದಿಗೆ ಬೆರೆಯಬೇಕು ಎಂದರು.

ಶಾಸಕ ಎ. ಮಂಜುನಾಥ್ ಮಾತನಾಡಿ, ಸರ್ಕಾರಿ ನೌಕರರು ಹಾಗೂ ಚುನಾಯಿತ ಪ್ರತಿನಿಧಿಗಳು ಒಟ್ಟಿಗೆ ಕೆಲಸ ಮಾಡಿದರೆ ಜನರ ಸಮಸ್ಯೆಗಳು ಬಗೆಹರಿಯುತ್ತವೆ. ಆದರೆ ರಾಜಕಾರಣಿಗಳು ಮತ್ತು ಸರ್ಕಾರಿ ನೌಕರರನ್ನು ಜನಸಾಮಾನ್ಯರು ನೋಡುವ ದೃಷ್ಟಿಕೋನ ಭಿನ್ನವಾಗಿದೆ. ಇದಕ್ಕೆ ಕಾರಣ ಭ್ರಷ್ಟಾಚಾರದಲ್ಲಿ ತೊಡಗಿರುವ ಕೆಲವರಿಂದ ಇಡೀ ವ್ಯವಸ್ಥೆಗೆ ಕೆಟ್ಟ ಹೆಸರು ಬಂದಿದೆ ಎಂದು ತಿಳಿಸಿದರು.

ರಾಜಕಾರಣಿಗಳು ಮತ್ತು ಅಧಿಕಾರಿಗಳು ಸೇವಾ ಮನೋಭಾವನೆ ಬೆಳೆಸಿಕೊಳ್ಳಬೇಕು. ಅಧಿಕಾರವಿದ್ದ ಸಂದರ್ಭದಲ್ಲಿ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿದರೆ ಅವರನ್ನು ಗುರುತಿಸಿ ಗೌರವಿಸುತ್ತಾರೆ. ನೌಕರರು ತಮ್ಮಲ್ಲಿರುವ ನ್ಯೂನತೆಗಳನ್ನು ಸರಿಪಡಿಸಿಕೊಂಡು ಕರ್ತವ್ಯ ನಿರ್ವಹಿಸಬೇಕು. ರೈತರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಬೇಕು ಎಂದರು.

ಇದೇ ಸಂದರ್ಭದಲ್ಲಿ ವಿವಿಧ ಇಲಾಖೆಗಳ 32 ಮಂದಿಗೆ ಸೇವಾ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಸರ್ಕಾರಿ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಜಿ.ಎನ್. ನಟರಾಜ್, ಸದಸ್ಯ ಎಸ್.ಪಿ. ಜಗದೀಶ್, ಬಿಡದಿ ಪುರಸಭೆ ಸದಸ್ಯೆ ಎಲ್.ಎನ್. ಲಕ್ಷ್ಮಿದೇವಿ, ಮುಖಂಡ ಇಕ್ಬಾಲ್ ಹುಸೇನ್, ಡಯಟ್ ಪ್ರಾಚಾರ್ಯ ಎಂ.ಎಚ್. ಗಂಗಮಾರೇಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎನ್. ಮರಿಗೌಡ, ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಕೆ. ಬೈರಲಿಂಗಯ್ಯ, ಪ್ರಧಾನ ಕಾರ್ಯದರ್ಶಿ ಎಂ. ರಾಜೇಗೌಡ, ಉಪಾಧ್ಯಕ್ಷ ಎಂ.ಸಿ. ರಾಜಶೇಖರಮೂರ್ತಿ, ಖಜಾಂಚಿ ಟಿ. ನರಸಯ್ಯ ಇದ್ದರು.

ಮೈಸೂರಿನ ಸಪ್ತಸ್ವರ ಸಿಂಚನ ಕಲಾ ತಂಡದವರು ಸುಗಮ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಶಿಕ್ಷಕ ಶಿವಸ್ವಾಮಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT