ಮಾಗಡಿ: ತಾಲ್ಲೂಕಿನ ಚಿಕ್ಕತೊರೆಪಾಳ್ಯದ ಸೇತುವೆ ಬಳಿ ಭಾನುವಾರ ರಾತ್ರಿ ಕೆಎಸ್‌ಆರ್‌ಟಿಸಿ ಬಸ್ ನ ಟಯರ್ ಸ್ಪೋಟಗೊಂಡು ರಸ್ತೆ ಪಕ್ಕದ ಜಮೀನಿಗೆ ಉರುಳಿ ಬಿದ್ದಿದ್ದು, ಘಟನೆಯಲ್ಲಿ ಐವರು ಪ್ರಯಾಣಿಕರು ಗಾಯಗೊಂಡಿದ್ದಾರೆ.
ಟಯರ್ ಸ್ಪೋಟಗೊಂಡು ರಸ್ತೆ ಪಕ್ಕದ ಜಮೀನಿಗೆ ಉರುಳಿ ಬಿದ್ದಿರುವ ಬಸ್
ಬಸ್ ಮಾಗಡಿಯಿಂದ ಬೆಂಗಳೂರಿಗೆ ಹೋಗುವಾಗ ರಾತ್ರಿ 8ರ ಸುಮಾರಿಗೆ ಘಟನೆ ನಡೆದಿದೆ. ವೇಗವಾಗಿ ಹೋಗುತ್ತಿದ್ದ ಬಸ್ ನ ಟಯರ್ ಏಕಾಏಕಿ ಸ್ಪೋಟಗೊಂಡಿದ್ದರಿಂದ ಚಾಲಕನ ನಿಯಂತ್ರಣ ಕಳೆದುಕೊಂಡು ಪಕ್ಕದ ಜಮೀನಿಗೆ ಉರುಳಿದೆ.
ಈ ವೇಳೆ ತೆಂಗಿನಮರವು ಅಡ್ಡವಾಗಿ ಸಿಕ್ಕಿದ್ದರಿಂದ ಮುಂದಕ್ಕೆ ಹೋಗಲಾಗದೆ ಅಲ್ಲಿಯೇ ತಗಲಾಕಿಕೊಂಡಿದೆ. ಇದರಿಂದಾಗಿ ಹೆಚ್ಚಿನ ಅನಾಹುತ ಸಂಭವಿಸಿಲ್ಲ. ವಿಷಯ ತಿಳಿದು ಸ್ಥಳಕ್ಕೆ ತೆರಳಿ ಬಸ್ ನಲ್ಲಿ ಸಿಲುಕಿ ಗಾಯಗೊಂಡಿದ್ದವರನ್ನು ಸ್ಥಳೀಯರ ನೆರವಿನಿಂದ ಮಾಗಡಿ ಜಿಲ್ಲಾಸ್ಪತ್ರೆಗೆ ಕಳಿಸಲಾಯಿತು. ಸದ್ಯ ಗಾಯಾಳುಗಳ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ತಾವರೆಕೆರೆ ಠಾಣೆ ಪೊಲೀಸರು ತಿಳಿಸಿದರು.
ವಿಷಯ ತಿಳಿದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಸಹ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನೆಯಿಂದಾಗಿ ಸ್ಥಳದಲ್ಲಿ ಹೆಚ್ಚಿನ ಜನರು ಜಮಾಯಿಸಿದ್ದರಿಂದ ಸಂಚಾರದಟ್ಟಣೆ ಉಂಟಾಯಿತು. ಪೊಲೀಸರು ಜನರನ್ನು ಚದುರಿಸಿ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.