ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲ ಕಲಾವಿದರನ್ನೂ ಸಮಾನವಾಗಿ ಗೌರವಿಸಿ: ಟಿ. ತಿಮ್ಮೇಗೌಡ

ಜಾನಪದ ಲೋಕದಲ್ಲಿ ವಿಶ್ವ ಜಾನಪದ ದಿನಾಚರಣೆ ಸಂಭ್ರಮ
Last Updated 23 ಆಗಸ್ಟ್ 2020, 12:53 IST
ಅಕ್ಷರ ಗಾತ್ರ

ರಾಮನಗರ: ‘ಕಲಾವಿದರನ್ನು ಗೌರವಯುತವಾಗಿ ನಡೆಸಿಕೊಳ್ಳುವುದು ನಮ್ಮ ಕರ್ತವ್ಯ. ಶಿಷ್ಟ ಕಲಾವಿದರಂತೆ ಜನಪದ ಕಲಾವಿದರಿಗೂ ಗೌರವ, ಮಾನ್ಯತೆ ಸಿಗುವಂತೆ ಮಾಡುವುದು ನಮ್ಮ ಮೊದಲ ಆದ್ಯತೆಯಾಗಬೇಕು’ ಎಂದು ಕರ್ನಾಟಕ ಜಾನಪದ ಪರಿಷತ್‌ ಅಧ್ಯಕ್ಷ ಟಿ. ತಿಮ್ಮೇಗೌಡ ಹೇಳಿದರು.

ಜಾನಪದ ಲೋಕದ ಅಂಗಳದಲ್ಲಿ ಭಾನುವಾರ ವಿಶ್ವ ಜಾನಪದ ದಿನಾಚರಣೆ ಅಂಗವಾಗಿ ಭಾನುವಾರ ನಡೆದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ‘ ಸರ್ಕಾರ ಹಾಗೂ ಕೆಲವು ಸಂಘ-ಸಂಸ್ಥೆಗಳು ಹಿಂದಿನಿಂದಲೂ ಶಿಷ್ಟ ಕಲಾವಿದರನ್ನು ಅತ್ಯಂತ ಗೌರವವಾಗಿ ಹಾಗೂ ಜಾನಪದರನ್ನು ಮಾತ್ರ ನಿರ್ಲಕ್ಷ್ಯದಿಂದ ನಡೆಸಿಕೊಂಡು ಬಂದಿದ್ದು ವಿಷಾದಕರ. ನಮ್ಮೆಲ್ಲ ಕಲೆಗೂ ಜಾನಪದವೇ ಬೇರು ಎಂಬುದನ್ನು ಯಾರೂ ಮರೆಯಬಾರದು. ಎಲ್ಲರಿಗೂ ಸಮಾನ ಗೌರವ ಸಿಗಬೇಕು’ ಎಂದು ಆಶಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮಹಮ್ಮದ್‌ ಇಕ್ರಂ ಮಾತನಾಡಿ "‘ಜನಪದ ಕಲೆ ಮತ್ತು ಸಂಸ್ಕೃತಿ ಲಿಪಿಯಲ್ಲಿಲ್ಲ, ಮೌಖಿಕವಾಗಿ ಹರಿದು ಬಂದಿದೆ. ಈ ಮೌಖಿಕ ಸಂಸ್ಕøತಿಗೆ 1846ರಲ್ಲಿ ವಿಲಿಯಂ ಜಾನ್ ಥಾಮ್ಸ್ ‘ಪೋಕ್ಲರ್‌’ (ಜಾನಪದ) ಶಬ್ದವನ್ನು ಸೃಷ್ಟಿಸಿದ. ಈ ದಿನವನ್ನು ಜನಪದ ದಿನಾಚರಣೆಯಾಗಿ ಆಚರಿಸಲಾಗುತ್ತಿದೆ. ಜನಪದ ಕಲೆ ಸಂಸ್ಕತಿಯನ್ನು ಉಳಿಸಿ ಬೆಳೆಸಿದ ಎಚ್.ಎಲ್. ನಾಗೇಗೌಡರು ಮತ್ತು ಟಿ. ತಿಮ್ಮೇಗೌಡರು ನಮ್ಮಂತ ಯುವ ಅಧಿಕಾರಿಗಳಿಗೆ ಮಾದರಿಯಾಗಿದ್ದಾರೆ’ ಎಂದು ಸ್ಮರಿಸಿದರು. ಜಾನಪದ ಲೋಕದ ಬೆಳವಣಿಗೆಗೆ ಅವಶ್ಯವಾದ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಚನ್ನಪಟ್ಟಣ ಉಪವಿಭಾಗದ ಸಹಾಯಕ ಪೊಲೀಸ್‌ ಆಯುಕ್ತ ಕೆ. ರಾಮರಾಜನ್ ಮಾತನಾಡಿ ‘ ಜನರ ಹುಟ್ಟಿನಿಂದಲೇ ಜನಪದವೂ ಹುಟ್ಟಿ ಬೆಳೆಯುತ್ತಾ ಬಂದಿದೆ. ಕಾಲ ಕಳೆದಂತೆ ಅದರ ಸ್ವರೂಪ ಬದಲಾಗಿದೆ ಅಷ್ಟೇ. ಪ್ರತಿ ಹಳ್ಳಿ, ನಗರ, ಜಿಲ್ಲೆ, ರಾಜ್ಯಕ್ಕೆ ಒಂದೊಂದು ವಿಶೇಷ ಕಲೆಗಳು ಹುಟ್ಟಿಕೊಂಡಿವೆ. ನಾನೂ ಒಬ್ಬ ಕಲಾವಿದನ ಮಗವಾಗಿ ಕಲಾವಿದರಿಗೆ ಕಲೆಗೆ ನನ್ನಿಂದ ಆಗುವ ಸಹಾಯ ಮಾಡುವೆ’ ಎಂದರು.

ಕಾರ್ಯಕ್ರಮವನ್ನು ಹಿರಿಯ ಜನಪದ ಕಲಾವಿದ ತಮಟೆ ಚಿಕ್ಕನರಸಯ್ಯ ಉದ್ಘಾಟಿಸಿದರು. ‘ಜಾನಪದ ಲೋಕ ನಮ್ಮ ತವರು ಮನೆಯಾಗಿದೆ. ಇದರ ಅಧ್ಯಕ್ಷರು ನಮ್ಮಂಥ ಕಲಾವಿದರ ರಕ್ಷಣೆಗೆ ಸದಾ ದುಡಿಯುತ್ತಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಬಿ. ವಿ. ವಿನಯ್‍ಕುಮಾರ್ ಇದ್ದರು. ಜಾನಪದ ಲೋಕದ ಮುಖ್ಯಆಡಳಿತಾಧಿಕಾರಿ ಸಿ.ಎನ್. ರುದ್ರಪ್ಪ ಸ್ವಾಗತಿಸಿದರು. ಕರ್ನಾಟಕ ಜಾನಪದ ಕಲಾವಿದರ ಒಕ್ಕೂಟದ ಅಧ್ಯಕ್ಷ ಜೋಗಿಲ ಸಿದ್ಧರಾಜು ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭ ವಿವಿಧ ಕಲಾವಿದರರಿಂದ ವಿಶೇಷ ಜನಪದ ಕಲಾಪ್ರದರ್ಶನ ಏರ್ಪಡಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT