ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಸೋದ್ಯಮ ಬೆಳವಣಿಗೆಗೆ ಆದ್ಯತೆ ನೀಡಿ: ಸಚಿವ ಎಸ್. ಜೈಶಂಕರ್

ಕೇಂದ್ರ ಪುರಸ್ಕೃತ ಯೋಜನೆಯ ಫಲಾನುಭವಿಗಳ ಜೊತೆ ಸಚಿವರ ಸಂವಾದ
Last Updated 14 ಆಗಸ್ಟ್ 2022, 2:56 IST
ಅಕ್ಷರ ಗಾತ್ರ

ರಾಮನಗರ: ಈಚಿನ ವರ್ಷಗಳಲ್ಲಿ ಭಾರತದ ವಿದೇಶಾಂಗ ನೀತಿಯಲ್ಲಿ ಬದಲಾವಣೆ ಆಗಿದ್ದು, ದೇಶದ ಒಳ ಹಾಗೂ ಹೊರಗೂ ನಾಗರಿಕರ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಹೇಳಿದರು.

ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಕೇಂದ್ರ ಪುರಸ್ಕೃತ ಯೋಜನೆಗಳ ಫಲಾನುಭವಿಗಳೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರಧಾನಿ ನೇತೃತ್ವದಲ್ಲಿ ದೇಶದ ಜನರ ಪ್ರಗತಿಗೆ ಬದ್ಧವಾಗಿರುವ ಸರ್ಕಾರ ಇಂದು ನಮ್ಮ ಜೊತೆಗಿದೆ. ನಾನು ಬಹುತೇಕ ನನ್ನ ಜೀವನವನ್ನು ಅಧಿಕಾರಿಯಾಗಿ ವಿವಿಧ ಸರ್ಕಾರಗಳ ಜೊತೆ ಕಳೆದಿದ್ದೇನೆ. ಆದರೆ ಮೋದಿ ಅಂತಹ ನಾಯಕನನ್ನು ನಾನು ಕಂಡಿಲ್ಲ’ ಎಂದು ಬಣ್ಣಿಸಿದರು.

ದೇಶದಾದ್ಯಂತ ಸಂಚರಿಸಿ ಕೇಂದ್ರದ ಯೋಜನೆಗಳ ಕುರಿತು ಜನರ ಪ್ರತಿಕ್ರಿಯೆ ಪಡೆಯುತ್ತಿದ್ದೇವೆ. ದೇಶದ ಪ್ರತಿ ಜನರಿಗೆ ನೀರು, ವಿದ್ಯುತ್, ಶಿಕ್ಷಣ, ಶೌಚಾಲಯದಂತಹ ಮೂಲ ಸೌಕರ್ಯಗಳು ಸಿಗಬೇಕಿದ್ದು, ಸರ್ಕಾರ ಅದಕ್ಕೆ ಬದ್ಧವಾಗಿದೆ. ಉದ್ಯೋಗ ಸೃಷ್ಟಿಗೆ ಸರ್ಕಾರ ಆದ್ಯತೆ ನೀಡುತ್ತಿದೆ ಎಂದರು.

ಪ್ರವಾಸೋದ್ಯಮ ಬೆಳೆಸಿ: ರಾಮನಗರ ರೇಷ್ಮೆ ಮತ್ತು ಹಾಲಿಗೆ ಹಾಗೆಯೇ ಚನ್ನಪಟ್ಟಣದ ಗೊಂಬೆಗಳಿಗೆ ಪ್ರಸಿದ್ಧಿ. ಚಿಕ್ಕವನಿದ್ದಾಗ ಚನ್ನಪಟ್ಟಣದ ಗೊಂಬೆಗಳ ಬಗ್ಗೆ ಕೇಳಿದ್ದೆ. ಶೋಲೆಯಂತಹ ಚಿತ್ರ ಇಲ್ಲಿಯೇ ಚಿತ್ರೀಕರಣಗೊಂಡಿದ್ದು ಎಂದು ಕೇಳಿ ಸಂತೋಷವಾಗಿದೆ. ಚನ್ನಪಟ್ಟಣ ಕೇವಲ ಗೊಂಬೆ ಮಾತ್ರವಲ್ಲ. ಇದು ದೇಶದ ಹೆಮ್ಮೆ, ನಮ್ಮ ಸಂಸ್ಕೃತಿಯ ‌ಪ್ರತೀಕ. ಇಲ್ಲಿ ಪ್ರವಾಸೋದ್ಯಮಕ್ಕೆ ಸಾಕಷ್ಟು ಅವಕಾಶ ಇದ್ದು, ಅದನ್ನು ಬಳಸಿಕೊಳ್ಳಬೇಕು ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಮಾತನಾಡಿ ‘ ಉಕ್ರೇನ್ ನಿಂದ 20 ಸಾವಿರ ವಿದ್ಯಾರ್ಥಿಗಳನ್ನು ಸ್ವದೇಶಕ್ಕೆ ಸುರಕ್ಷಿತವಾಗಿ ಕರೆತಂದವರು ಇದೇ ಜೈಶಂಕರ್. ಇಂತಹ ವ್ಯಕ್ತಿ ನಮ್ಮ ನಡುವೆ ಇರುವುದು ಹೆಮ್ಮೆಯ ಸಂಗತಿ’ ಎಂದರು.

ನರೇಗಾದಲ್ಲಿ ರಾಮನಗರದ ಸಾಧನೆ ಹೆಮ್ಮೆ ಮೂಡಿಸುವಂತೆ ಇದೆ‌‌‌. ಕೇಂದ್ರ ಪುರಸ್ಕೃತ ಯೋಜನೆಗಳು ಯಶಸ್ವಿಯಾಗಿ ಅನುಷ್ಠಾನಗೊಳ್ಳುತ್ತಿವೆ. 2 ಲಕ್ಷ ಮನೆಗಳಿಗೆ ಜಲಜೀವನ್ ಮಿಷನ್ ಅಡಿ ನೀರು ಸರಬರಾಜು ಆಗಲಿದೆ ಎಂದು ವಿವರಿಸಿದರು.

ವಿಧಾನ ಪರಿಷತ್‌ ಸದಸ್ಯರಾದ ಸಿ.ಪಿ. ಯೋಗೇಶ್ವರ್‌, ಅ. ದೇವೇಗೌಡ, ರೇಷ್ಮೆ ಕೈಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಗೌತಮ್‌ ಗೌಡ, ಜಿಲ್ಲಾಧಿಕಾರಿ ಅವಿನಾಶ್‌ ಮೆನನ್, ಜಿ.ಪಂ. ಸಿಇಒ ದಿಗ್ವಿಜಯ್‌ ಬೋಡ್ಕೆ, ಜಿಲ್ಲಾ ಪೊಲೀಸ್‌ ವರಿಷ್ಟಾಧಿಕಾರಿ ಕೆ. ಸಂತೋಷ್ ಬಾಬು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT