ಭಾನುವಾರ, ಸೆಪ್ಟೆಂಬರ್ 19, 2021
31 °C

ರಾಮನಗರ| ಕಣ್ಣೀರಿಟ್ಟ ಮಹಿಳೆ ಮೇಲೆ ಸಿಟ್ಟಾದ ಕುಮಾರಸ್ವಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ಕೊಳೆಗೇರಿ ಅಭಿವೃದ್ಧಿ ಮಂಡಳಿಯಿಂದ ನಿರ್ಮಾಣ ಆಗುತ್ತಿರುವ ಮನೆಗಳ ಶಂಕುಸ್ಥಾಪನೆಗೆ ಬಂದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಎದುರು ಇಬ್ಬರು ಮಹಿಳೆಯರು ಕೂಗಾಡುತ್ತ ಅಳಲು ತೋಡಿಕೊಂಡ ಘಟನೆ ಸೋಮವಾರ ಕೊತ್ತಿಪುರದಲ್ಲಿ ನಡೆಯಿತು. ಇದರಿಂದ ಸಿಟ್ಟಾದ ಕುಮಾರಸ್ವಾಮಿ 'ಮಾಧ್ಯಮದವರ ಮುಂದೆ ಕೂಗಾಡಿ ನಾಟಕ‌ ಮಾಡಬೇಡಿ' ಎಂದು ಮಹಿಳೆಯರನ್ನು ಗದರಿದರು.

ವಸತಿರಹಿತ ಬಡಜನರಿಗೆ‌ ಮನೆ ನಿರ್ಮಿಸಿಕೊಡಲು ಇಲ್ಲಿ 2010ರಲ್ಲಿ ಜಮೀನನ್ನು ಜಮೀನನ್ನು ವಶಪಡಿಸಿಕೊಳ್ಳಲಾಗಿತ್ತು. ಆದರೆ ಪರಿಹಾರ ನೀಡಿಕೆಯಲ್ಲಿ ಅನ್ಯಾಯ‌ ಆಗಿದೆ ಎಂದು ಆರೋಪಿಸಿದ ಇಬ್ಬರು‌ ಮಹಿಳೆಯರು, ಸೋಮವಾರ ಶಂಕುಸ್ಥಾಪನೆ ಕಾರ್ಯಕ್ರಮದ ಸಂದರ್ಭ ಕೂಗಾಡುತ್ತ ಗಮನ ಸೆಳೆಯಲು ಪ್ರಯತ್ನಿಸಿದರು.

ಇದರಿಂದ ಅಸಮಾಧಾನಗೊಂಡ ಕುಮಾರಸ್ವಾಮಿ ‘ಅಂದು ನಿಮ್ಮ ತಂದೆ ಜಮೀನನ್ನು ಬರೆದುಕೊಟ್ಟಾಗ ನೀವು ಎಲ್ಲಿ ಹೋಗಿದ್ದೀರಿ’ ಎಂದು ಮಹಿಳೆಯರನ್ನು ತರಾಟೆಗೆ ತೆಗೆದುಕೊಂಡರು. ಅನ್ಯಾಯ ಆಗಿದ್ದರೆ ದಾಖಲೆ ಸಮೇತ ಬನ್ನಿ. ನ್ಯಾಯ ಕೊಡಿಸುತ್ತೇನೆ. ಆದರೆ ಸುಮ್ಮನೆ ಕೂಗಾಡಬೇಡಿ ಎಂದು ಮಹಿಳೆಯರನ್ನು ಕಳುಹಿಸಿದರು.

ಪ್ರಮೀಳಾ ಎಂಬ ಮಹಿಳೆ ಮಾತನಾಡಿ, ‘ನಗರಸಭೆಯು ನಮ್ಮ ಭೂಮಿ ಖರೀದಿ ಮಾಡಿದೆ. ಆದರೆ ತಮ್ಮ ಕುಟುಂಬಕ್ಕೆ ದುಡ್ಡು ಬಂದಿಲ್ಲ’ ಎಂದು ಮತ್ತೆ ಕಣ್ಣೀರಿಟ್ಟರು.

ಇದಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ ‘10 ವರ್ಷಗಳ ಹಿಂದೆ ಭೂಮಿ ಮಾರಾಟವಾಗಿದೆ. ಇದೀಗ ನಗರಸಭೆ ಸ್ವತ್ತಾಗಿದೆ. ಹಣ ಬಂದಿಲ್ಲ ಎಂದು ಈಗೇಕೆ ಗೋಳಾಡುತ್ತಿದ್ದೀರಿ’ ಎಂದು ಪ್ರಶ್ನಿಸಿದರು. ‘ನಿಮಗೆ ಅನ್ಯಾಯವಾಗಿದ್ದರೆ ಮಾನವೀಯತಾ ದೃಷ್ಠಿಯಿಂದ ತಾವು ಬೇರೆ ವ್ಯವಸ್ಥೆಯ ಮೂಲಕ ಅಲ್ಪಸ್ವಲ್ಪ ಸಹಕಾರ ನೀಡುತ್ತೇನೆ’ ಎಂದು ಭರವಸೆ ಕೊಟ್ಟರು.

‘2011ನೇ ಸಾಲಿನಲ್ಲೇ ಸರ್ವೆ ಸಂಖ್ಯೆ 96, 97ರ ಭೂಮಿಗೆ ಎಕರೆಗೆ ₹30 ಲಕ್ಷ ಪಾವತಿಯಾಗಿದೆ. ಹೀಗೆ ಮಾರಾಟದ ಹಣ ಪಡೆದುಕೊಂಡ ಚೆಕ್ ಬ್ಯಾಂಕ್‍ವೊಂದರಲ್ಲಿನ ಖಾತೆಗೆ ಜಮೆ ಆಗಿದೆ. ಸದರಿ ಖಾತೆ ತೆರೆದ ದಿನವೇ ಹಣ ಜಮೆ ಆಗಿದೆ, ಹಣವನ್ನು ಡ್ರಾ ಮಾಡಲಾಗಿದೆ. ಅದೇ ದಿನ ಬ್ಯಾಂಕ್ ಖಾತೆ ಕ್ಲೋಸ್ ಆಗಿದೆ’ ಎಂದು ಭ್ರಷ್ಟಾಚಾರ ನಡೆದಿರುವ ಕುರಿತು ಪರೋಕ್ಷವಾಗಿ ಆರೋಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು