ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸಂಘಟಿತರಿಗೆ ನೆರವು ನೀಡಲು ಮನವಿ: ಮಾಜಿ ಶಾಸಕ ಎಚ್.ಸಿ. ಬಾಲಕೃಷ್ಣ

ಅಂಗನವಾಡಿ ಕಾರ್ಯಕರ್ತೆಯರಿಗೆ ಆಹಾರ ಕಿಟ್‌
Last Updated 21 ಜೂನ್ 2021, 3:21 IST
ಅಕ್ಷರ ಗಾತ್ರ

ಬಿಡದಿ: ‘ಕೋವಿಡ್ ಸಂಕಷ್ಟದಲ್ಲಿರುವ ಅಸಂಘಟಿತ ಕಾರ್ಮಿಕ ಕುಟುಂಬಗಳಿಗೆ ಸಮಾಜದ ಸಿರಿವಂತರು ತಮ್ಮ ಕೈಲಾದ ನೆರವು ನೀಡಬೇಕು’ ಎಂದು ಮಾಜಿ ಶಾಸಕ ಎಚ್.ಸಿ. ಬಾಲಕೃಷ್ಣ ಮನವಿ ಮಾಡಿದರು.

ಪುರಸಭೆಯ 13ನೇ ವಾರ್ಡ್ ವ್ಯಾಪ್ತಿಯ ಯೋಗೇಶ್ವರ ಬಡಾವಣೆಯಲ್ಲಿ ಭಾನುವಾರಸಮಾಜ ಸೇವಕರಾದ ನಿತ್ಯಾನಂದ ಶೇಖರ, ಶ್ರೀಧರ ಹಾಗೂ ಶ್ರೀನಿವಾಸ್ ಅವರು ಆಶಾ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಬಡ ಕುಟುಂಬಗಳಿಗೆ ಹಮ್ಮಿಕೊಂಡಿದ್ದ ಆಹಾರ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೋವಿಡ್ ಸಾಮಾಜಿಕ ಹಾಗೂ ಆರ್ಥಿಕವಾಗಿ ಎಲ್ಲರ ಮೇಲೂ ಪರಿಣಾಮ ಬೀರಿದೆ. ಕೂಲಿಕಾರ್ಮಿಕರು, ಖಾಸಗಿ ಶಾಲಾ ಶಿಕ್ಷಕರು, ವಾಹನ ಚಾಲಕರು ಸೇರಿದಂತೆ ಹಲವು ವರ್ಗದವರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು.

ಕೆಲವು ವಲಯಗಳಿಗೆ ರಾಜ್ಯ ಸರ್ಕಾರ ಪರಿಹಾರ ಧನದ ಪ್ಯಾಕೇಜ್ ನೀಡಿರುವುದು ಕೇವಲ ಘೋಷಣೆಯಾಗಿದೆ. ಕಳೆದ ವರ್ಷದ ಕೋವಿಡ್ ಸಂದರ್ಭದಲ್ಲಿ ಘೋಷಿಸಿದ ಪರಿಹಾರ ಧನ ಇನ್ನೂ ಕೆಲವು ವಲಯಗಳಿಗೆ ತಲುಪದಿರುವ ಬಗ್ಗೆ ದೂರುಗಳಿವೆ ಎಂದು ಟೀಕಿಸಿದರು.

ಕೋವಿಡ್ ಎರಡನೇ ಅಲೆಯು ನಿಧಾನವಾಗಿ ಕಡಿಮೆಯಾಗುತ್ತಿದ್ದರೂ ಯಾರು ಎಚ್ಚರ ತಪ್ಪಬಾರದು. ಮೂರನೇ ಅಲೆಯಲ್ಲಿ ಯಾವ ರೀತಿಯಲ್ಲಿ ಇರುತ್ತದೆ ಎಂಬ ಚರ್ಚೆಯಾಗುತ್ತಿದೆ. ಹಣವಂತರು ಕೂಡ ತಮ್ಮ ಪ್ರಾಣ ಉಳಿಸಿಕೊಳ್ಳಲು ಹೆಣಗಾಡಿರುವ ಪರಿಸ್ಥಿತಿ ಬಂದಿದೆ. ಕಾಪಾಡುವ ಮಾತು ಎಲ್ಲಿಂದ ಬರಬೇಕು. ಸಂಕಷ್ಟಕ್ಕೆ ಸಿಲುಕಿದಾಗ ಯಾವ ಸರ್ಕಾರವೂ ನಿಮ್ಮ ನೆರವಿಗೆ ಬಾರದು. ಮುನ್ನೆಚ್ಚರಿಕೆಯಿಂದ ಇದ್ದು ಜೀವ ಉಳಿಸಿಕೊಳ್ಳುವುದು ನಿಮ್ಮ ಕೈಯಲ್ಲಿದೆ ಎಂದು ಕಿವಿಮಾತು ಹೇಳಿದರು.

ರಾಜ್ಯದಲ್ಲಿ 1.60 ಕೋಟಿ ಬಿಪಿಎಲ್‌ ಕುಟುಂಬಗಳಿವೆ ಎಂದು ಸರ್ಕಾರದ ಸಮೀಕ್ಷೆ ಹೇಳುತ್ತಿದೆ. ಕೋವಿಡ್ ಸಂದರ್ಭದಲ್ಲಿ ಬಡಕುಟುಂಬಗಳಿಗೆ ಆಹಾರದ ಕೊರತೆ ಎದುರಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಕೇವಲ ಸರ್ಕಾರಕ್ಕೆ ಸೀಮಿತವಾಗಿಲ್ಲ. ಸಮಾಜದಲ್ಲಿನ ಸಿರಿವಂತರು ಕಷ್ಟದಲ್ಲಿರುವವರ ಕೈಹಿಡಿಯಬೇಕು ಎಂದರು.

ಯುವ ಮುಖಂಡ ನಿತ್ಯಾನಂದ ಹಾಗೂ ಸ್ನೇಹಿತರು ಕಷ್ಟಕಾಲದಲ್ಲಿ ಬಡಕುಟುಂಬಗಳಿಗೆ ದಿನಸಿ ಕಿಟ್ ನೀಡಿ ಸಹಕರಿಸುತ್ತಿರುವುದು ಇತರರಿಗೆ ಪ್ರೇರಣೆಯಾಗಲಿ ಎಂದು ಆಶಿಸಿದರು.

ವಿಧಾನ ಪರಿಷತ್ ಸದಸ್ಯ ಸಿ.ಎಂ. ಲಿಂಗಪ್ಪ ಮಾತನಾಡಿ, ಕೋವಿಡ್ ಜನರ ಜೀವನವನ್ನು ಆರ್ಥಿಕವಾಗಿ ಕುಗ್ಗಿಸಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಇದರಿಂದ ಜನಸಾಮಾನ್ಯರ ಜೀವನ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ ಎಂದರು.

ರಾಜ್ಯ ಸರ್ಕಾರ ವಿದ್ಯುತ್ ದರ ಏರಿಕೆ ಮಾಡಿರುವುದು ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಸಾಂಕ್ರಾಮಿಕ ರೋಗಗಳು ಬಂದಾಗ ಸರ್ಕಾರ ಉಚಿತ ಚಿಕಿತ್ಸೆ ದೊರಕಿಸಿ ಜನರ ಪ್ರಾಣ ಉಳಿಸಬೇಕು. ಆದರೆ, ಈಗಿ ಸರ್ಕಾರ ಖಾಸಗಿ ಆಸ್ಪತ್ರೆಗಳಿಗೆ ವ್ಯಾಕ್ಸಿನ್ ಪೂರೈಕೆ ಮಾಡಿ ಲಾಭ ಮಾಡಿಕೊಳ್ಳುವ ದಾರಿ ಹಿಡಿದಿದೆ ಎಂದು ಕಿಡಿಕಾರಿದರು.

ಪುರಸಭೆ ಸದಸ್ಯ ಸಿ. ಉಮೇಶ್, ರಮೇಶ್, ಬೋರೇಗೌಡ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಗಾಣಕಲ್ ನಟರಾಜ್, ಪ್ರಕಾಶ್, ಮುಖಂಡರಾದ ಕುಮಾರ್, ಮಹೇಶ್, ಎಲ್. ಚಂದ್ರಶೇಖರ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT