ಭಾನುವಾರ, ನವೆಂಬರ್ 17, 2019
28 °C
ವೀರಾಪುರ ಗ್ರಾಮಕ್ಕೆ ಪಾರಂಪರಿಕ ಸ್ಪರ್ಶ: ಅಭಿವೃದ್ಧಿ ಕಾರ್ಯಕ್ಕೆ ಮುಖ್ಯಮಂತ್ರಿಗಳಿಂದ ಇಂದು ಚಾಲನೆ

ತಲೆ ಎತ್ತಲಿದೆ ಶ್ರೀಗಳ 111 ಅಡಿ ಪ್ರತಿಮೆ

Published:
Updated:
Prajavani

ಮಾಗಡಿ (ರಾಮನಗರ): ಪುಣ್ಯಪುರುಷರ ಗ್ರಾಮವಾದ ಮಾಗಡಿ ತಾಲ್ಲೂಕಿನ ವೀರಾಪುರವು ಮುಂದೆ ನಾಡಿನ ಬಹು ಪ್ರೇಕ್ಷಣೀಯ, ಧಾರ್ಮಿಕ ಸ್ಥಳಗಳಲ್ಲಿ ಒಂದಾಗಿ ಬೆಳೆಯಲಿದೆ. ಅಂತಹ ಸತ್ಕಾರ್ಯಕ್ಕೆ ಇಂದು (ಶುಕ್ರವಾರ) ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ತುಮಕೂರು ಸಿದ್ಧಗಂಗಾ ಮಠದ ಶಿವಕುಮಾರ ಶ್ರೀಗಳ ಹುಟ್ಟೂರಾದ ವೀರಾಪುರದ ಗ್ರಾಮವನ್ನು ಪಾರಂಪರಿಕ ಹಾಗೂ ವಿಶ್ವ ದರ್ಜೆಯ ಸಾಂಸ್ಕೃತಿಕ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ಈಗಾಗಲೇ ₹25 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಶ್ರೀಗಳು 111 ವರ್ಷ ಜೀವಿಸಿ ಸಮಾಜದ ಒಳಿತಿಗೆ ತಮ್ಮ ಬದುಕನ್ನು ಸಮರ್ಪಿಸಿಕೊಂಡವರು. ಅದರ ಸವಿನೆನಪಿಗಾಗಿ ಇಲ್ಲಿ ಶ್ರೀಗಳ 111 ಅಡಿ ಎತ್ತರದ ಮೂರ್ತಿಯನ್ನು ಇಲ್ಲಿ ಸ್ಥಾಪಿಸಲಾಗುತ್ತಿದೆ. ಇದರೊಟ್ಟಿಗೆ ಗ್ರಾಮದಲ್ಲಿ ಇನ್ನೂ ಹತ್ತು ಹಲವು ಯೋಜನೆಗಳಿಗೆ ಇದೇ ಸಂದರ್ಭ ಚಾಲನೆ ದೊರೆಯಲಿದೆ.

ಶಿವಗಂಗೆ ಬೆಟ್ಟವು ಶಿವಕುಮಾರ ಶ್ರೀಗಳ ನೆಚ್ಚಿನ ತಾಣ. ಅದಕ್ಕೆ ಅಭಿಮುಖವಾಗಿಯೇ ಅವರು ತಪಸ್ಸು ಮಾಡುತ್ತಿದ್ದರು ಎನ್ನುವ ಪ್ರತೀತಿ ಇದೆ. ಹೀಗಾಗಿ ಬೆಟ್ಟಕ್ಕೆ ಅಭಿಮುಖವಾಗಿಯೇ ಶ್ರೀಗಳ ಪ್ರತಿಮೆ ತಲೆ ಎತ್ತಲಿದೆ. ಇಲ್ಲಿ ನಿರ್ಮಾಣ ಆಗಲಿರುವ 111 ಅಡಿ ಎತ್ತರದ ಪ್ರತಿಮೆಯು ರಾಜ್ಯದಲ್ಲಿಯೇ ಎರಡನೇ ಅತಿ ಎತ್ತರದ ಪ್ರತಿಮೆ ಆಗಲಿದೆ. ಗದಗದ ಭೀಷ್ಮ ಕೆರೆ ಅಂಗಳದಲ್ಲಿ ಬಸವೇಶ್ವರರ 116 ಅಡಿ ಎತ್ತರದ ಪ್ರತಿಮೆಯು ಈಗಾಗಲೇ ನಿರ್ಮಾಣ ಆಗಿದೆ.

ವೀರಾಪುರದಲ್ಲಿ ನಿರ್ಮಾಣ ಆಗಲಿರುವ ಪ್ರತಿಮೆಗೆ 30 ಅಡಿ ಎತ್ತರದ ಬಂಡೆಯಾಕಾರದ ತಳಪಾಯ ಕಟ್ಟಲಾಗುತ್ತದೆ. ಅದರ ಮೇಲೆ ಊರುಗೋಲು ಹಿಡಿದುಕೊಂಡಿರುವ ಖಾವಿದಾರಿ ಶ್ರೀಗಳ ಬೃಹತ್ ಪ್ರತಿಮೆ ಇರಲಿದೆ. ತಳಪಾಯದಲ್ಲಿ ಸಭಾಭವನ, ವಸ್ತು ಸಂಗ್ರಹಾಲಯ, ಧ್ಯಾನ ಕೊಠಡಿ ಇರಲಿವೆ.

ವಸ್ತು ಸಂಗ್ರಹಾಲಯದಲ್ಲಿ ಶ್ರೀಗಳ ಜೀವನವನ್ನು ತೋರಿಸುವ ಧ್ವನಿ ಬೆಳಕಿನ ಪ್ರಚಾರ ಇರಲಿದೆ. ಭಕ್ತರ ವಿಶ್ರಾಂತಿಗೆ ಆಸನಗಳು ಇರಲಿವೆ.

ಸಂಪೂರ್ಣವಾಗಿ ಕಾಂಕ್ರೀಟ್‌ ನಿರ್ಮಿತವಾಗುವ ಪ್ರತಿಮೆಯು ಮಳೆ, ಬಿರುಗಾಳಿ, ಭೂಕಂಪನದಂತಹ ಪ್ರಕೃತಿ ವಿಕೋಪಗಳನ್ನು ತಾಳಿಕೊಳ್ಳುವ ಶಕ್ತಿ ಹೊಂದಿದೆ. ಶ್ರೀಗಳ ಪ್ರತಿಮೆ ನಿರ್ಮಾಣ ಜವಾಬ್ದಾರಿಯನ್ನು ಪಿಎಸ್‍ಎಪಿ ಆರ್ಕಿಟೆಕ್ಟ್ ಕಂಪನಿಗೆ ನೀಡಲಾಗಿದೆ. ಈ ಸಂಸ್ಥೆಯು ಹಿಂದೆ ಗದಗದಲ್ಲಿ ಬಸವೇಶ್ವರರ ಪ್ರತಿಮೆ ಹಾಗೂ ಮಹದೇಶ್ವರ ಬೆಟ್ಟದಲ್ಲಿನ ಮಹದೇಶ್ವರ ಪ್ರತಿಮೆಯನ್ನು ನಿರ್ಮಾಣ ಮಾಡಿದ ಅನುಭವ ಹೊಂದಿದೆ. ಎರಡೂವರೆ ವರ್ಷದ ಒಳಗೆ ಕಾಮಗಾರಿಯನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.

ವೀರಾಪುರ ಗ್ರಾಮದಲ್ಲಿ ಶ್ರೀಗಳ ಪೂರ್ವಾಶ್ರಮದ ತಂದೆ ಮತ್ತು ತಾಯಿ ಸಮಾಧಿ ಇದ್ದು, ಇದರ ಬಳಿಯೇ ಶ್ರೀಗಳ ದೇವಾಲಯವನ್ನು ಸಹ ನಿರ್ಮಾಣ ಮಾಡಲಾಗುತ್ತದೆ. ಇದರೊಟ್ಟಿಗೆ ಮತ್ತೆ ಎರಡು ದೇಗುಲಗಳು ತಲೆ ಎತ್ತಲಿವೆ.

ಒಟ್ಟು 17 ಎಕರೆ ಪ್ರದೇಶದಲ್ಲಿ ವಿವಿಧ ಅಭಿವೃದ್ದಿ ಯೋಜನೆಗಳಿಗೆ ಸರ್ಕಾರ ಆಸಕ್ತಿ ತೋರಿದೆ. ಧ್ಯಾನ ಕೇಂದ್ರ, ಸಭಾಂಗಣ, ಮ್ಯೂಸಿಯಂ, ಉದ್ಯಾನ, ದಾಸೋಹ ಭವನ, ಯಾತ್ರಿಗಳಿಗಾಗಿ ಭವನಗಳು ಮೊದಲಾದ ಕಾಮಗಾರಿಗಳನ್ನು ಹಂತಹಂತವಾಗಿ ಕೈಗೊಳ್ಳಲು ಸರ್ಕಾರವು ಉದ್ದೇಶಿಸಿದೆ. ಕೆಇಬಿ ವತಿಯಿಂದ ಮಾದರಿ ಗ್ರಾಮ ನಿರ್ಮಾಣ, ಶ್ರೀಗಳ ಹೆಸರಿನಲ್ಲಿ ಅಧ್ಯಯನ ಪೀಠ ನಿರ್ಮಾಣಕ್ಕೂ ಯೋಜಿಸಲಾಗುತ್ತಿದೆ.

ಮನವಿಗೆ ಸರ್ಕಾರದ ಸ್ಪಂದನೆ

‘ವೀರಾಪುರ ಗ್ರಾಮದಲ್ಲಿ ಶ್ರೀಗಳ ನೆನಪಿಗೆ 111 ಅಡಿ ಎತ್ತರದ ಪ್ರತಿಮೆಯನ್ನು ನಿರ್ಮಾಣ ಮಾಡಬೇಕು. ಜೊತೆಗೆ ವಸ್ತು ಸಂಗ್ರಹಾಲಯ, ಧ್ಯಾನ ಮಂದಿರ, ದಾಸೋಹ ಭವನ, ಯಾತ್ರಿ ಗೃಹಗಳ ನಿರ್ಮಾಣಕ್ಕೂ ಅನುದಾನ ನೀಡುವಂತೆ ಶ್ರೀಗಳ ಅಭಿಮಾನಿಗಳು ಸರ್ಕಾರಕ್ಕೆ ಮನವಿ ಸಲ್ಲಿಸುತ್ತಾ ಬಂದಿದ್ದೆವು. ನಮ್ಮ ಮನವಿಗೆ ಸ್ಪಂದಿಸಿ ಸರ್ಕಾರ ಅನುದಾನ ನೀಡಿದ್ದು, ಇಡೀ ವೀರಾಪುರವೇ ಮಾದರಿ ಗ್ರಾಮವಾಗಿ ಬದಲಾಗಲಿದೆ’ ಎನ್ನುತ್ತಾರೆ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಂ. ರುದ್ರೇಶ್.

‘ಕಾರ್ಯಕ್ರಮದ ಅಂಗವಾಗಿ ಈಗಾಗಲೇ ವೀರಾಪುರದಲ್ಲಿ ಭವ್ಯ ವೇದಿಕೆ ನಿರ್ಮಾಣ ಆಗಿದೆ. ಇಡೀ ಗ್ರಾಮವನ್ನು ಸರ್ಕಾರವೇ ದತ್ತು ತೆಗೆದುಕೊಂಡು ಸಮಗ್ರ ಅಭಿವೃದ್ಧಿ ಪಡಿಸಬೇಕು ಎನ್ನುವುದು ನಮ್ಮೆಲ್ಲರ ಅಪೇಕ್ಷೆ. ಮುಖ್ಯಮಂತ್ರಿಗಳು ಈ ಬಗ್ಗೆ ಕಾರ್ಯಕ್ರಮದಲ್ಲಿ ಘೋಷಣೆ ಮಾಡುವ ನಿರೀಕ್ಷೆ ಇದೆ’ ಎನ್ನುತ್ತಾರೆ ಅವರು.

ವೀರಾಪುರದಲ್ಲಿ ಇಂದು

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ: ಪಾರಂಪರಿಕ, ಸಾಂಸ್ಕೃತಿಕ ಕೇಂದ್ರವಾಗಿ ವೀರಾಪುರದ ಅಭಿವೃದ್ಧಿ, ಶಿವಕುಮಾರ ಶ್ರೀಗಳ ಪ್ರತಿಮೆ ನಿರ್ಮಾಣಕ್ಕೆ ಶಂಕುಸ್ಥಾಪನೆ. ಉದ್ಘಾಟಕರು–ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಅತಿಥಿಗಳು–ಉಪ ಮುಖ್ಯಮಂತ್ರಿ ಡಾ. ಅಶ್ವತ್ಥ್‌ ನಾರಾಯಣ, ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ, ಸಂಸದ ಡಿ.ಕೆ. ಸುರೇಶ್‌, ಶಾಸಕ ಎ.ಮಂಜುನಾಥ್‌. ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಸಪ್ಪ. ಸ್ಥಳ–ವೀರಾಪುರ. ಬೆಳಿಗ್ಗೆ 11.30

***

ಶಿವಕುಮಾರ ಶ್ರೀಗಳ ಹುಟ್ಟೂರಿನಲ್ಲಿ ಅವರ ಪ್ರತಿಮೆ ನಿರ್ಮಾಣ ಆಗುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮೆ. ಇದೊಂದು ವಿಶ್ವ ದರ್ಜೆಯ ಪಾರಂಪರಿಕ ತಾಣವಾಗಬೇಕು
–ಎಂ. ರುದ್ರೇಶ್, ಶಿವಕುಮಾರ ಶ್ರೀಗಳ ಸಂಬಂಧಿ

 

ಪ್ರತಿಕ್ರಿಯಿಸಿ (+)