ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರಾಥಮಿಕ ಶಿಕ್ಷಣ ಭವಿಷ್ಯಕ್ಕೆ ಆಧಾರ’

Last Updated 8 ಜೂನ್ 2019, 13:11 IST
ಅಕ್ಷರ ಗಾತ್ರ

ಚನ್ನಪಟ್ಟಣ: ‘ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವ ಸಂದರ್ಭದಲ್ಲಿ ಹೆಚ್ಚು ಮಕ್ಕಳು ದಾಖಲಾತಿಯಾಗುತ್ತಿರುವುದು ಸಂತಸದ ಸಂಗತಿ’ ಎಂದು ಮಾತೃಶ್ರೀ ಸೇವಾ ಟ್ರಸ್ಟ್ ಕಾರ್ಯದರ್ಶಿ ಹರೀಶ್ ಹೆಗ್ಗಡೆ ಪ್ರಶಂಸಿದರು.

ತಾಲ್ಲೂಕಿನ ಮತ್ತೀಕೆರೆ ಶೆಟ್ಟಿಹಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ತಮ್ಮ ಟ್ರಸ್ಟ್ ವತಿಯಿಂದ ಮಕ್ಕಳಿಗೆ ಉಚಿತ ನೋಟ್ ಬುಕ್ ಮತ್ತು ಲೇಖನ ಸಾಮಗ್ರಿ ವಿತರಿಸಿ ಮಾತನಾಡಿದರು.

‘ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುವ ಮಕ್ಕಳಿಗೆ ನೆರವಾಗುವುದು ಖುಷಿ ವಿಚಾರ. ಪೋಷಕರು ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವ ಮೂಲಕ ಸರ್ಕಾರಿ ಶಾಲೆಗಳನ್ನು ಉಳಿಸಬೇಕು. ಗುಣಮಟ್ಟದ ಶಿಕ್ಷಣ ದೊರೆಯುತ್ತಿರುವ ಕಾರಣ ಮಕ್ಕಳನ್ನು ಸೇರಿಸಿ, ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು’ ಎಂದರು.

ಅಧ್ಯಕ್ಷತೆ ವಹಿಸಿದ್ದ ಜಾನಪದ ಪರಿಷತ್ತು ತಾಲ್ಲೂಕು ಘಟಕದ ಅಧ್ಯಕ್ಷ ಗೋ.ರಾ.ಶ್ರೀನಿವಾಸ ಮಾತನಾಡಿ ‘ಮಕ್ಕಳ ಕಲಿಕೆ ಪ್ರಾರಂಭವಾಗುವುದೆ ಪ್ರಾಥಮಿಕ ಶಾಲೆಯಲ್ಲಿ. ಇಲ್ಲಿ ಏನು ಕಲಿಯುತ್ತಾರೋ ಅದು ಉನ್ನತ ಶಿಕ್ಷಣದಲ್ಲಿಯೂ ಮುಂದುವರಿಯುತ್ತದೆ. ಪ್ರಾಥಮಿಕ ಶಾಲೆಯ ಶಿಕ್ಷಕರೇ ಭವಿಷ್ಯದ ಪ್ರಜೆಗಳ ಶಾಶ್ವತ ಸ್ತಂಭಗಳು. ಶಿಕ್ಷಕರು ಮತ್ತು ಪೋಷಕರು ಇಬ್ಬರೂ ಮಕ್ಕಳಿಗೆ ಯಾವುದರಲ್ಲಿ ಆಸಕ್ತಿ ಇದೆಯೋ ಅದನ್ನೇ ಕಲಿಸಿದರೆ ಭವಿಷ್ಯದಲ್ಲಿ ಮಕ್ಕಳು ಉತ್ತಮ ಹೆಸರು ಗಳಿಸಲು ಸಾಧ್ಯ’ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜೀವರಕ್ಷಾ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷೆ ಆಶಾ ‘ತಂದೆತಾಯಿಗಳನ್ನು ಪ್ರೀತಿಯಿಂದ ನೋಡಿಕೊಂಡರೆ ಅನಾಥಾಶ್ರಮ ಮತ್ತು ವೃದ್ಧಾಶ್ರಮಗಳ ಅವಶ್ಯಕತೆ ಇರುವುದಿಲ್ಲ. ಸಮಾಜ ನಮಗೇನು ಕೊಟ್ಟಿದೆ ಎನ್ನುವುದಕ್ಕಿಂತ, ಸಮಾಜಕ್ಕೆ ನಮ್ಮ ಕೊಡುಗೆ ಏನು ಎಂದು ಪ್ರಶ್ನೆ ಮಾಡಿಕೊಂಡರೆ ಉತ್ತಮ ಜೀವನ ನಡೆಸಬಹುದು’ ಎಂದರು.

ಪ್ರಾಥಮಿಕ ಶಾಲೆಯ ಎಲ್ಲ ಮಕ್ಕಳಿಗೂ ಲೇಖನ ಸಾಮಗ್ರಿ ವಿತರಿಸಲಾಯಿತು.ಮುಖ್ಯಶಿಕ್ಷಕ ಕರಿಯಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾತೃಶ್ರೀ ಸೇವಾ ಟ್ರಸ್ಟ್‌ನ ಅಧ್ಯಕ್ಷ ನಾಗೇಶ್, ಸಂತೋಷ, ಕೃಷ್ಣಪ್ಪ, ಮನೋಜ್ ಮತ್ತು ಶಾಲಾ ಶಿಕ್ಷಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT