ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ | ಮಾದಕ ವಸ್ತು ಸೇವನೆಯಿಂದ ಭವಿಷ್ಯ ಹಾಳು: ಕಿಶೋರ್

ಬನ್ನಿಕುಪ್ಪೆ ಸರ್ಕಾರಿ ಪ್ರೌಢಶಾಲೆಯಲ್ಲಿ ಮಾದಕ ವಸ್ತು ವ್ಯಸನ ಜಾಗೃತಿ ಕಾರ್ಯಕ್ರಮ
Published 19 ಜುಲೈ 2023, 3:57 IST
Last Updated 19 ಜುಲೈ 2023, 3:57 IST
ಅಕ್ಷರ ಗಾತ್ರ

ರಾಮನಗರ: ‘ಇತ್ತೀಚೆಗೆ ಯುವಜನರಲ್ಲಿ ಮಾದಕ ವಸ್ತುಗಳ ಸೇವನೆ ಹೆಚ್ಚಾಗುತ್ತಿದೆ. ಭವಿಷ್ಯವನ್ನು ಉಜ್ವಲವಾಗಿ ರೂಪಿಸಿಕೊಳ್ಳಬೇಕಾದ ವಯಸ್ಸಿನಲ್ಲಿ ವಿದ್ಯಾರ್ಥಿಗಳು ಹಾಳು ಮಾಡಿಕೊಳ್ಳುತ್ತಿದ್ದಾರೆ. ವಿದ್ಯಾರ್ಥಿಗಳು ಮಾದಕ ವಸ್ತುಗಳಿಂದ ದೂರವಿರಬೇಕು’ ಎಂದು ಸತ್ಕೃತಿ ಫೌಂಡೇಷನ್ ಅಧ್ಯಕ್ಷ ಕಿಶೋರ್ ಕೆ.ಸಿ. ಹೇಳಿದರು.

ತಾಲ್ಲೂಕಿನ ಪಿ. ಬನ್ನಿಕುಪ್ಪೆಯ ಸರ್ಕಾರಿ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ಫೌಂಡೇಷನ್ ವತಿಯಿಂದ ಹಮ್ಮಿಕೊಂಡಿದ್ದ ಮಾದಕ ವಸ್ತುಗಳ ವ್ಯಸನದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಕುತೂಹಲದ ಕಾರಣಕ್ಕಾಗಿ ಒಮ್ಮೆ ಮಾದಕ ವಸ್ತು ಸೇವನೆ ಆರಂಭಿಸುವ ವಿದ್ಯಾರ್ಥಿಗಳು ಮುಂದೆ ಅದರ ದಾಸರಾಗುವ ಸಾಧ್ಯತೆಯೇ ಹೆಚ್ಚು’ ಎಂದರು.

‘ದೇಶದಲ್ಲಿ ಮಾದಕವಸ್ತು ಬಳಕೆಯು ಕಳೆದ ಎಂಟು ವರ್ಷಗಳಲ್ಲಿ ಶೇ 70ರಷ್ಟು ಹೆಚ್ಚಳವಾಗಿದೆ. ವಿಶ್ವಸಂಸ್ಥೆಯ ಅಂದಾಜಿನ ಪ್ರಕಾರ, ದೇಶದಲ್ಲಿ ಮಾದಕ ವ್ಯಸನಕ್ಕೆ ಬಲಿಯಾಗುವ ನೂರು ಮಂದಿ ಪೈಕಿ 13ರಷ್ಟು ಮಂದಿ 20 ವರ್ಷಕ್ಕಿಂತ ಕಡಿಮೆ ವಯಸ್ಸಿನವರು’ ಎಂದರು.

‘ಮಾದಕ ವಸ್ತು ಸೇವನೆಯು ಅಪರಾಧಗಳ ಹೆಚ್ಚಳಕ್ಕೂ ಕಾರಣವಾಗಿದೆ. ಅತ್ಯಾಚಾರ, ಅಪಹರಣ, ಮಕ್ಕಳ ವಿರುದ್ಧದ ಅಪರಾಧಗಳು, ಕೊಲೆ, ದರೋಡೆಯಂತಹ ಹಿಂಸಾತ್ಮಕ ಅಪರಾಧಗಳ ದಾಖಲೆಗಳು ಹೆಚ್ಚುತ್ತಲೇ ಇವೆ. ಮಾದಕ ವಸ್ತುವಿನಿಂದ ಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಅದನ್ನು ಸೇವಿಸಿದವರು ಮಾನಸಿಕವಾಗಿ ದುರ್ಬಲರಾಗಿ ವಿವಿಧ ರೀತಿಯ ಸಮಸ್ಯೆಗಳಿಗೆ ತುತ್ತಾಗುತ್ತಾರೆ’ ಎಂದು ಹೇಳಿದರು.

‘ತಮ್ಮ ಆರೋಗ್ಯದ ಜೊತೆಗೆ, ಸಮಾಜದ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುವ ಮಾದಕ ವಸ್ತುವಿನ ಬಗ್ಗೆ ವಿದ್ಯಾರ್ಥಿಗಳು ಜಾಗೃತರಾಗುವ ಜೊತೆಗೆ, ತಮ್ಮ ಸುತ್ತಮುತ್ತ ಇರುವವರಿಗೆ ಅದರ ದುಷ್ಪರಿಣಾಮದ ಬಗ್ಗೆ ಅರಿವು ಮೂಡಿಸಬೇಕು. ಪುಸ್ತಕ ಓದುವುದು, ಕ್ರೀಡೆ, ನೃತ್ಯ, ಪ್ರವಾಸ ಸೇರಿದಂತೆ ಹಲವು ರೀತಿಯ ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

‘ನಮ್ಮ ಫೌಂಡೇಷನ್ ಮಾದಕ ವ್ಯಸನದ ತಡೆಗಟ್ಟುವಿಕೆ ಯೋಜನೆಯೊಂದಿಗೆ 8ರಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಾ ಬರುತ್ತಿದೆ. ಸೇವನೆಯಿಂದಾಗುವ ಸಮಸ್ಯೆಗಳು ಮತ್ತು ಅದರಿಂದ ಹೊರಬರಬೇಕಾದ ಮಾರ್ಗೋಪಾಯಗಳ ಬಗ್ಗೆ ಅರಿವೂ ಮೂಡಿಸುತ್ತಿದೆ’ ಎಂದರು.

ಫೌಂಡೇಷನ್ ಕಾರ್ಯದರ್ಶಿ ಶ್ರೀನಿವಾಸ್, ಸದಸ್ಯರಾದ ಪ್ರವೀಣ್, ಕಿಶೋರ್, ಶಾಲೆಯ ಪ್ರಾಂಶುಪಾಲ ರುದ್ರೇಶ್ ಹಾಗೂ ಶಿಕ್ಷಕರು ಇದ್ದರು.

ಕುತೂಹಲದ ಕಾರಣಕ್ಕಾಗಿ ಸೇವನೆ ಆರಂಭ ಮಾದಕ ವಸ್ತು ಸೇವೆನೆ ಶೇ 70ರಷ್ಟು ಹೆಚ್ಚಳ ಆರೋಗ್ಯಕರ ಹವ್ಯಾಸ ಬೆಳೆಸಿಕೊಳ್ಳಲು ಸಲಹೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT