ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಷೇಧಾಜ್ಞೆ ನಡುವೆಯೂ ಜೂಜಿನ ಮೋಜು!

ಪೊಲೀಸರಿಂದ ನಿರಂತರ ದಾಳಿ: ಮೂರೇ ದಿನದಲ್ಲಿ ಹತ್ತಾರು ಮಂದಿ ಜೈಲುಪಾಲು
Last Updated 29 ಮಾರ್ಚ್ 2020, 14:50 IST
ಅಕ್ಷರ ಗಾತ್ರ

ರಾಮನಗರ: ಕೊರೊನಾ ವೈರಸ್ ಹರಡುವುದನ್ನು ತಪ್ಪಿಸಲು ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಯಲ್ಲಿದೆ. ಜನ ಅಗತ್ಯ ವಸ್ತುಗಳಿಗೆ ಪರದಾಡುತ್ತಿದ್ದರೆ, ಜೂಜುಕೋರರು ಮಾತ್ರ ತಮ್ಮ ಮೋಜು ಮುಂದುವರಿಸಿದ್ದಾರೆ.

ಯುಗಾದಿ ಹಬ್ಬದ ಆಸುಪಾಸು ಇಸ್ಪೀಟ್‌ ಆಟದ ಸದ್ದು ಹೆಚ್ಚಾಗಿಯೇ ಇರುತ್ತದೆ. ಆದರೆ, ಈ ವರ್ಷ ಯಾವುದೇ ಕಾರಣಕ್ಕೂ ಈ ಆಟಕ್ಕೆ ಅವಕಾಶ ನೀಡುವುದಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಅನೂಪ್ ಶೆಟ್ಟಿ ಮೊದಲೇ ಎಚ್ಚರಿಸಿದ್ದರು. ಅನೇಕ ಕ್ಲಬ್‌ಗಳಿಗೂ ಅನುಮತಿ ನಿರಾಕರಿಸಲಾಗಿತ್ತು. ಈ ನಡುವೆ ಕೊರೊನಾ ವೈರಸ್‌ನಿಂದ ಲಾಕ್‌ಡೌನ್‌ ನಿಯಮ ಬಂದ್‌ ಆಗಿ ಎಲ್ಲವೂ ಸ್ತಬ್ದಗೊಂಡಿತು. ಆದರೆ, ಜೂಜುಕೋರರ ಉತ್ಸಾಹ ಮಾತ್ರ ಕಡಿಮೆ ಆಗಿಲ್ಲ. ಪೊಲೀಸರು ಕಳೆದ ಕೆಲವು ದಿನಗಳಲ್ಲಿ ನಿರಂತರವಾಗಿ ನಡೆಸಿರುವ ದಾಳಿಗಳೇ ಇದಕ್ಕೆ ಸಾಕ್ಷಿ.

ಎಲ್ಲೆಲ್ಲಿ ದಾಳಿ: ಕಳೆದ ಮೂರು ದಿನಗಳಲ್ಲಿಯೇ ಇಸ್ಪೀಟ್‌ ಆಟ ಆಡುವವರ ವಿರುದ್ಧ ಇಪ್ಪತ್ತಕ್ಕೂ ಹೆಚ್ಚು ಪ್ರಕರಣಗಳು ವಿವಿಧ ಠಾಣೆಗಳಲ್ಲಿ ದಾಖಲಾಗಿವೆ. ಇದೇ 24ರಂದು ಒಟ್ಟು ನಾಲ್ಕು ಪ್ರಕರಣಗಳು ದಾಖಲಾಗಿವೆ. ಚನ್ನಪಟ್ಟಣ ಟೌನ್‌ನಲ್ಲಿ9 ಮಂದಿ, ರಾಮನಗರ ಟೌನ್‌ ವ್ಯಾಪ್ತಿಯಲ್ಲಿ ನಾಲ್ವರು, ರಾಮನಗರ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಮೂವರು, ಅಕ್ಕೂರು ವ್ಯಾಪ್ತಿಯಲ್ಲಿ8 ಮಂದಿಯನ್ನು ಪೊಲೀಸರು ಬಂಧಿಸಿದ್ದರು. 25ರಂದು ಎಂ.ಕೆ.ದೊಡ್ಡಿ ಪೊಲೀಸರು 7ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದರು. 26ರಂದು ಚನ್ನಪಟ್ಟಣ ಠಾಣೆ ಪೊಲೀಸರು ಇದೇ ಕಾರಣಕ್ಕೆ ಆರು ಮಂದಿಯನ್ನು ಬಂಧಿಸಿದ್ದರು. ಇದೇ ದಿನ ಎಂ.ಕೆ. ದೊಡ್ಡಿ ಪೊಲೀಸರು 4ಮಂದಿ ವಿರುದ್ಧ ಹಾಗೂ ಅಕ್ಕೂರು ಪೊಲೀಸರು ಆರು ಮಂದಿ ವಿರುದ್ದ ಪ್ರಕರಣ ದಾಖಲಿಸಿದ್ದರು.

27ರಂದು ಪೊಲೀಸರು ಜಿಲ್ಲೆಯ ವಿವಿಧೆಡೆ ದಾಳಿ ಸಂಘಟಿಸಿದ್ದರು. ಚನ್ನಪಟ್ಟಣ ಗ್ರಾಮೀಣ ಪೊಲೀಸರು ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ತಲಾ6 ಮಂದಿಯನ್ನು, ಅಕ್ಕೂರು ಪೊಲೀಸರು6 ಮಂದಿಯನ್ನು, ಕೋಡಿಹಳ್ಳಿ ಪೊಲೀಸರು ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಒಟ್ಟು10 ಮಂದಿಯನ್ನು ಹಾಗೂ ಚನ್ನಪಟ್ಟಣ ಪೂರ್ವ ಪೊಲೀಸರು ಎರಡು ಪ್ರಕರಣಗಳಲ್ಲಿ9 ಮಂದಿಯನ್ನು, ತಾವರೆಕೆರೆ ಪೊಲೀಸರು9 ಮಂದಿಯನ್ನು ಬಂಧಿಸಿದ್ದರು.

28ರಂದು ಸಹ ಪೊಲೀಸರ ದಾಳಿಗಳು ಮುಂದುವರಿದಿತ್ತು. ಚನ್ನಪಟ್ಟಣ ಗ್ರಾಮೀಣ ಪೊಲೀಸರು ನಾಲ್ವರನ್ನು ಬಂಧಿಸಿದ್ದರು. ಈ ಸಂದರ್ಭ ಸಾಕಷ್ಟು ಪ್ರಮಾಣದ ಹಣ, ದ್ವಿಚಕ್ರ ವಾಹನಗಳನ್ನೂ ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT