ಮಂಗಳವಾರ, ಅಕ್ಟೋಬರ್ 26, 2021
21 °C

ಮಾಗಡಿ: ಗಾಂಧೀಜಿ ಹೆಜ್ಜೆಗುರುತು ಉಳಿಸಲು ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಾಗಡಿ: ‘ಅಹಿಂಸೆ ಜಗತ್ತಿನ ಜನರೆಲ್ಲರ ಧರ್ಮವಾಗಬೇಕು ಎಂದು ನಂಬಿದ್ದ ಗಾಂಧೀಜಿ ಸತ್ಯತೆಯ ಪ್ರತೀಕವಾಗಿದ್ದರು’ ಎಂದು ಶಾಸಕ ಎ. ಮಂಜುನಾಥ್ ಹೇಳಿದರು.

ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಪಟ್ಟಣದ ಎನ್ಇಎಸ್ ಸರ್ಕಲ್‌ನಲ್ಲಿ ಶನಿವಾರ ನಡೆದ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯಲ್ಲಿ ಅವರು ಮಾತನಾಡಿದರು.

ಶಿಕ್ಷಣ, ಸಾಮಾಜಿಕ, ಅರ್ಥಿಕತೆ ಸೇರಿದಂತೆ ಇತರೆ ಎಲ್ಲಾ ರಂಗಗಳಲ್ಲಿ ನಗರ ನಿವಾಸಿಗಳಂತೆ ಗ್ರಾಮೀಣ ಜನತೆ ಅಭಿವೃದ್ಧಿಯಾಗಬೇಕು. ಗ್ರಾಮ ರಾಜ್ಯ ರಾಮರಾಜ್ಯವಾಗಬೇಕು. ಸರ್ವರಿಗೆ ಸಮಬಾಳು, ಸರ್ವರಿಗೆ ಸಮಪಾಲು ದೊರೆಯಬೇಕು ಎಂದರು.

ಜನನಾಯಕರಾಗಿದ್ದ ಬಾಪೂಜಿ ಸಿರಿವಂತಿಕೆಯನ್ನು ಕಡೆಗಣಿಸಿ ಋಷಿಮುನಿಯಂತೆ ಸರಳವಾಗಿ ಬದುಕಿದರು. ಗಾಂಧೀಜಿ ಅವರ ಕನಸು ನನಸು ಮಾಡಲು ನರೇಗಾ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ಗಾಂಧೀಜಿ ಅವರ ತತ್ವಾದರ್ಶಗಳಿಂದ ನಾವೆಲ್ಲರೂ ಪ್ರಭಾವಿತರಾಗಬೇಕಿದೆ ಎಂದು ತಿಳಿಸಿದರು.

ನಮ್ಮ ಶೌಚಾಲಯವನ್ನು ನಾವೇ ಸ್ವಚ್ಛಗೊಳಿಸುವುದನ್ನು ಮಕ್ಕಳಿಗೆ ಬಾಲ್ಯದಲ್ಲಿಯೇ ಕಲಿಸಿ ಕೊಡಬೇಕು. ಗಾಂಧೀಜಿ ಅವರ ಸರಳತೆಯ ಸತ್ಯ ಸಂದೇಶಗಳನ್ನೂ ಕಲಿಸಿಕೊಡುವ ಅಗತ್ಯವಿದೆ ಎಂದು ಹೇಳಿದರು.

ತಹಶೀಲ್ದಾರ್ ಬಿ.ಜಿ. ಶ್ರೀನಿವಾಸಪ್ರಸಾದ್ ಮಾತನಾಡಿ, ಆಂಗ್ಲರ ಕಪಿಮುಷ್ಠಿಯಿಂದ ಭಾರತವನ್ನು ಬಂಧಮುಕ್ತಗೊಳಿಸಿದ ಜಗತ್ತು ಕಂಡ ಯುಗಪುರುಷ ಬಾಪೂಜಿ ಸ್ಮರಣೆಯು ನಿತ್ಯ ನಡೆಯಬೇಕು ಎಂದು ಸಲಹೆ ನೀಡಿದರು.

ಪ್ರಗತಿಪರ ಹೋರಾಟಗಾರ ಕಲ್ಕೆರೆ ಶಿವಣ್ಣ ಮಾತನಾಡಿ, ನಾಥೂರಾಂ ಗೂಡ್ಸೆ ಗಾಂಧೀಜಿಯನ್ನು ಗುಂಡಿಕ್ಕಿ ಕೊಂದದ್ದು ದೇಶಕ್ಕೆ ವಿಶ್ವಮಟ್ಟದಲ್ಲಿ ಕಪ್ಪುಚುಕ್ಕೆಯಾಗಿ ಉಳಿದಿದೆ. ಸ್ವಾತಂತ್ರ್ಯ ಎಂದರೆ ಸಮಾನತೆ, ವರ್ಣಭೇದ ನೀತಿ ವಿರುದ್ಧ ಸೆಟೆದು ನಿಂತ ಗಾಂಧೀಜಿ ಅವರು ಮಾರ್ಟಿನ್ ಲೂಥರ್ ಕಿಂಗ್, ನೆಲ್ಸನ್ ಮಂಡೇಲಾ ಅವರಂತಹ ನಾಯಕರ ಹೋರಾಟಕ್ಕೆ ಸ್ಫೂರ್ತಿಯಾಗಿದ್ದರು ಎಂದರು.

ತಾಲ್ಲೂಕು ಕಸಾಪ ಮಾಜಿ ಅಧ್ಯಕ್ಷೆ ಕಲ್ಪನಾ ಶಿವಣ್ಣ ಮಾತನಾಡಿದರು.‌

ಎಪಿಎಂಸಿ ಸದಸ್ಯ ಕೆಂಪಸಾಗರ ಮಂಜುನಾಥ್, ತಾ.ಪಂ. ಇಒ ಟಿ. ಪ್ರದೀಪ್, ಬಿಇಒ ಯತಿಕುಮಾರ್, ಪುರಸಭೆ ಅಧ್ಯಕ್ಷೆ ಭಾಗ್ಯಮ್ಮ, ಸ್ಥಾಯಿಸಮಿತಿ ಅಧ್ಯಕ್ಷ ಕೆ.ಕೆ. ಕಾಂತರಾಜ್, ಉಪಾಧ್ಯಕ್ಷ ರಹಮತ್, ಸದಸ್ಯರಾದ ನಾಗರತ್ನಮ್ಮ, ಎಂ.ಎನ್. ಮಂಜುನಾಥ್, ರೇಖಾ, ಅಶ್ವತ್ಥ, ಹೇಮಲತಾ, ಆಶುಕವಿ ತೋಟದ ಮನೆ ಗಿರೀಶ್, ಜೆಡಿಎಸ್ ಮುಖಂಡ ಬಿ.ಆರ್. ಗುಡ್ಡೇಗೌಡ, ಜೆಡಿಎಸ್ ಯುವ ಘಟಕದ ಅಧ್ಯಕ್ಷ ವಿಜಯ ಕುಮಾರ್, ತಾಲ್ಲೂಕು ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಲ್. ನಂಜಯ್ಯ, ದೈಹಿಕ ಶಿಕ್ಷಣ ಅಧಿಕಾರಿ ಸಿ.ಬಿ. ಅಶೋಕ್, ಶಿಕ್ಷಕರಾದ ಪೋಲೋಹಳ್ಳಿ ಲೋಕೇಶ್, ರಾಜಶೇಖರ್ ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.