ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣ್ವ ಬಳಿ ತ್ಯಾಜ್ಯ ಘಟಕ: ಸ್ಥಳೀಯರ ವಿರೋಧ

ಜಿ.ಪಂ. ಸಿಇಒ ನೇತೃತ್ವದಲ್ಲಿ ಸಭೆ: ಮತ್ತೊಮ್ಮೆ ಮನವೊಲಿಕೆಗೆ ಅಧಿಕಾರಿಗಳ ನಿರ್ಧಾರ
Last Updated 7 ಜೂನ್ 2019, 12:42 IST
ಅಕ್ಷರ ಗಾತ್ರ

ಮುಖ್ಯಾಂಶಗಳು
* ನಗರ ಪ್ರದೇಶದಲ್ಲೇ ಘಟಕ ಸ್ಥಾಪನೆಗೆ ಆಗ್ರಹ
* ಕಸದಿಂದ ನದಿ ನೀರು ಮಲಿನ: ಆತಂಕ
* ಈ ಹಿಂದೆಯೇ ಜಾಗ ಗುರುತು: ಅಧಿಕಾರಿಗಳ ಸಮಜಾಯಿಷಿ


ರಾಮನಗರ: ‘ಕಣ್ವ ಬಳಿ ತ್ಯಾಜ್ಯ ವಿಲೇವಾರಿ ಘಟಕವನ್ನು ಸ್ಥಾಪಿಸಬಾರದು, ಘಟಕ ನಿರ್ಮಾಣಕ್ಕೆ ಸುತ್ತುಮುತ್ತಲಿನ ಗ್ರಾಮಗಳ ಜನರ ಒಪ್ಪಿಗೆಯಿಲ್ಲ’ ಎಂದು ಸ್ಥಳೀಯರು ಆಗ್ರಹಿಸಿದರು.

ಇಲ್ಲಿನ ಜಿಲ್ಲಾ ಕಚೇರಿಗಳ ಸಂಕೀರ್ಣದ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಕಣ್ವ ಗ್ರಾಮದ ದೀಪು, ಸತ್ಯನಾರಾಯಣ, ಚಂದ್ರಶೇಖರ್, ಶಿವರಾಮು ಮೊದಲಾದವರು ಮಾತನಾಡಿ ‘ಜಿಲ್ಲಾಡಳಿತ ಗುರುತಿಸಲಾದ ಗೋಮಾಳ ಪ್ರದೇಶ ಇಳಿಜಾರಾಗಿದೆ. ಆ ಪ್ರದೇಶದಲ್ಲಿ ಘಟಕ ಸ್ಥಾಪಿಸಿದರೆ ತ್ಯಾಜ್ಯಗಳ ಕಲುಷಿತ ನೀರು, ಜನವಸತಿ ಪ್ರದೇಶಗಳಿಗೆ ಹರಿದುಬರುತ್ತದೆ. ಜತೆಗೆ ಕಣ್ವ ನದಿ ಮಲಿನಗೊಳ್ಳುತ್ತದೆ. ಇದನ್ನೆಲ್ಲ ಅರಿತುಕೊಂಡು ನಾವು ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿದ್ದೇವೆ’ ಎಂದರು.

‘ನಮ್ಮ ಗ್ರಾಮದಲ್ಲಿರುವ ಏಕೈಕ ಗೋಮಾಳ ಜಮೀನನ್ನು ರಕ್ಷಿಸಿಕೊಳ್ಳುವುದು ಎಲ್ಲರ ಜವಾಬ್ದಾರಿಯಾಗಿದೆ. ಹಾಗಾಗಿ ಘಟಕ ಸ್ಥಾಪಿಸಲು ಅನುಮತಿ ನೀಡಿ, ಸ್ಥಳೀಯ ವಾತಾವರಣವನ್ನು ಕೆಡಿಸಿಕೊಳ್ಳಲು ಇಚ್ಛಿಸುವುದಿಲ್ಲ. ಜಿಲ್ಲಾಡಳಿತ ಈ ಘಟಕವನ್ನು ಬೇರೆಡೆಗೆ ಸ್ಥಳಾಂತರಿಸಬೇಕು. ಅಧಿಕಾರಿಗಳು ಇಚ್ಛಾಶಕ್ತಿಯಿಂದ ಕೆಲಸ ಮಾಡಿದರೆ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ಸ್ಥಳ ಹುಡುಕುವುದು ಕಷ್ಟವಲ್ಲ’ ಎಂದರು.

ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್. ಲಕ್ಷ್ಮಣಸ್ವಾಮಿ ಮಾತನಾಡಿ ‘ಆರೇಳು ವರ್ಷಗಳ ಹಿಂದೆ ಕಣ್ಣ ನದಿ ಸಮೀಪದಲ್ಲಿ ಅವೈಜ್ಞಾನಿಕವಾಗಿ ಕಸ ಸುರಿಯಲಾಗಿದೆ. ಮಳೆಗಾಲದಲ್ಲಿ ಈ ತ್ಯಾಜ್ಯಗಳೊಂದಿಗೆ ಹರಿದುಬರುವ ಕಲುಷಿತ ತ್ಯಾಜ್ಯ ಮಿಶ್ರಿತ ನೀರು ನದಿಗೆ ಸೇರಿ, ಆ ಭಾಗದ ಜನರಿಗೆ ತೊಂದರೆಯಾಗಿದೆ’ ಎಂದು ತಿಳಿಸಿದರು.

‘ಈ ಬಗ್ಗೆ ಜನ ಜಾಗೃತಗೊಂಡ ಬಳಿಕ ಪ್ರತಿಭಟನೆ ನಡೆದು, ತ್ಯಾಜ್ಯಗಳನ್ನು ಡಂಪ್ ಮಾಡುವುದನ್ನು ತಡೆಹಿಡಿಯಲಾಗಿದೆ. ಇದಕ್ಕೆ ಕಾರಣ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯಾಗಿದೆ. ಆಗಲೇ ವೈಜ್ಞಾನಿಕವಾಗಿ ತ್ಯಾಜ್ಯಗಳ ವಿಲೇವಾರಿ ಮಾಡಿದ್ದರೆ ಇಂಥ ಸಮಸ್ಯೆ ಉದ್ಭವಿಸುತ್ತಿರಲಿಲ್ಲ. ಅಲ್ಲದೆ ಪಟ್ಟಣಗಳ ತ್ಯಾಜ್ಯವನ್ನು ನಮ್ಮ ಹಳ್ಳಿಗೆ ತಂದು ಹಾಕುವುದು ಯಾವ ನ್ಯಾಯ’ ಎಂದು ಪ್ರಶ್ನಿಸಿದರು.

‘ಚನ್ನಪಟ್ಟಣ ನಗರಸಭೆ ವ್ಯಾಪ್ತಿಯಲ್ಲಿ ಸಾಕಷ್ಟು ಸರ್ಕಾರಿ ಜಮೀನಿದೆ. ಆ ಜಮೀನು ಇವತ್ತು ಖಾಸಗಿಯವರ ಪಾಲಾಗುತ್ತಿದೆ. ಅಂಥ ಜಮೀನನ್ನು ತ್ಯಾಜ್ಯ ವಿಲೇವಾರಿ ಘಟಕಕ್ಕೆ ಬಳಸಿಕೊಳ್ಳಿ. ಇಲ್ಲವೇ ಆ ಗ್ರಾಮದಲ್ಲಿ ಎಲ್ಲಾ ಜನಪ್ರತಿನಿಧಿಗಳ ಮತ್ತು ಊರಿನ ಪ್ರಮುಖರನ್ನು ವಿಶ್ವಾಸಕ್ಕೆ ಪಡೆದು ಸಭೆ ನಡೆಸಿ. ಅಲ್ಲಿ ತೆಗೆದುಕೊಳ್ಳುವ ತೀರ್ಮಾನದಂತೆ ಕ್ರಮ ಕೈಗೊಳ್ಳಿ’ ಎಂದು ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸಿಂ.ಲಿಂ. ನಾಗರಾಜ್ ಮಾತನಾಡಿ ‘ತ್ಯಾಜ್ಯ ವಿಲೇವಾರಿ ಘಟಕದ ಬಗ್ಗೆ ಆ ಭಾಗದ ಜನರಲ್ಲಿ ಕೆಲ ತಪ್ಪು ಕಲ್ಪನೆ ಮತ್ತು ಅಪನಂಬಿಕೆಗಳಿವೆ. ಅದನ್ನು ಹೋಗಲಾಡಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು. ಮೈಸೂರಿನಲ್ಲಿ ನಿರ್ಮಿಸಲಾದ ತ್ಯಾಜ್ಯ ವಿಲೇವಾರಿ ಘಟಕ ಅತ್ಯಂತ ವೈಜ್ಞಾನಿಕ ಮತ್ತು ಆಧುನಿಕವಾಗಿದೆ. ಕಡಿಮೆ ಸ್ಥಳಾವಕಾಶ ಸಾಕಾಗುತ್ತದೆ. ಆ ಬಗ್ಗೆ ವರದಿ ಪಡೆದು, ನಮ್ಮ ಭಾಗದ ಜನರಿಗೆ ಮನವರಿಕೆ ಮಾಡಿಕೊಡಬೇಕು. ಆ ಮೂಲಕ ಜನರನ್ನು ವಿಶ್ವಾಸಕ್ಕೆ ಪಡೆದುಕೊಂಡು ಯೋಜನೆ ಜಾರಿ ಮಾಡಲು ಕ್ರಮ ಕೈಗೊಳ್ಳಿ’ ಎಂದು ತಿಳಿಸಿದರು.

ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ಎಲ್. ರಮೇಶ್ ಗೌಡ, ಜಿಲ್ಲಾ ಘಟಕದ ಯೋಗೇಶ್ ಗೌಡ ಪ್ಲಾಸ್ಟಿಕ್ ತ್ಯಾಜ್ಯದ ಮಾಲೆಯನ್ನು ಸಭೆಗೆ ಹಾಕಿಕೊಂಡು ಬಂದು, ಪ್ಲಾಸ್ಟಿಕ್ ಬಳಕೆಯನ್ನು ನಿಯಂತ್ರಿಸಿ ಎಂದು ಮನವಿ ಮಾಡಿದರು.

ಬಾಕ್ಸ್‌
‘ಘಟಕ ಸ್ಥಾಪನೆ ಅನಿವಾರ್ಯ’
ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಎಂ.ಪಿ. ಮುಲ್ಲೈಮುಹಿಲನ್ ಮಾತನಾಡಿ ‘ಕಣ್ವದಲ್ಲಿ ಉದ್ದೇಶಿಸಲಾಗಿರುವ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಸಂಬಂಧ ಆ ಭಾಗದ ಜನಪ್ರತಿನಿಧಿಗಳು ಮತ್ತು ಗ್ರಾಮದ ಪ್ರಮುಖರ ಮನವೊಲಿಸಲಾಗುವುದು’ ಎಂದರು.

‘ಬೆಳೆಯುತ್ತಿರುವ ಪಟ್ಟಣಗಳಲ್ಲಿ ಕಸ ನಿರ್ವಹಣೆ ದೊಡ್ಡ ಸಮಸ್ಯೆಯಾಗಿದೆ. ಇದನ್ನು ಪರಿಹರಿಸಿಕೊಳ್ಳುವುದು ಅನಿವಾರ್ಯ. ರಾಮನಗರ ಮತ್ತು ಚನ್ನಪಟ್ಟಣ ನಗರಸಭೆ ವ್ಯಾಪ್ತಿಯ ತ್ಯಾಜ್ಯಗಳನ್ನು ನಿರ್ವಹಣೆ ಮಾಡುವ ಘಟಕವನ್ನು ಕಣ್ವ ನದಿಯ ಸಮೀಪದ 50 ಎಕರೆ ಗೋಮಾಳ ಜಾಗದಲ್ಲಿ ಸ್ಥಾಪಿಸಲು ಐದಾರು ವರ್ಷಗಳ ಹಿಂದೆ ಉದ್ದೇಶಿಸಲಾಗಿದೆ’ ಎಂದು ತಿಳಿಸಿದರು.

‘ಆದರೆ ಸ್ಥಳೀಯರ ವಿರೋಧದಿಂದ ಯೋಜನೆ ನನೆಗುದಿಗೆ ಬೀಳುವಂತಾಗಿದೆ. ಕಸ ನಿರ್ವಹಣೆಗೆ ಇಂಥ ಘಟಕ ಅನಿವಾರ್ಯ. ಹಾಗಾಗಿ ಆ ಭಾಗದ ರೈತ ಮುಖಂಡರು, ಹೋರಾಟಗಾರರು, ಎರಡು ನಗರಸಭೆ ಆಯುಕ್ತರು ಸಮರ್ಪಕವಾಗಿ ಚರ್ಚಿಸಿ ಸೂಕ್ತ ನಿರ್ಣಯಕ್ಕೆ ಬರೋಣ. ಅಲ್ಲಿನ ಜನರಿಗೆ, ಪರಿಸರಕ್ಕೆ ಯಾವುದೇ ರೀತಿಯ ಹಾನಿಯಾಗದಂತೆ ವೈಜ್ಞಾನಿಕವಾಗಿ ಕಸ ನಿರ್ವಹಣೆ ಮಾಡುತ್ತೇವೆ’ ಎಂದರು.

‘ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿರುವ ಘಟಕವನ್ನೆ ಸ್ಥಾಪಿಸುವುದರಿಂದ ಕಣ್ವ ನದಿ ಮೂಲಕ್ಕೂ ಯಾವುದೇ ತೊಂದರೆಯಾಗುವುದಿಲ್ಲ. ಆ ಭಾಗದ ಜನರು ಜಿಲ್ಲಾಡಳಿತದ ಯೋಜನೆಗೆ ಸಹಕಾರ ನೀಡಬೇಕು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT