ಶನಿವಾರ, ಜುಲೈ 2, 2022
20 °C

ಲಿಂಗ ಅಸಮಾನತೆ: ದೇಶಕ್ಕೆ ಹಿನ್ನಡೆ- ಆಸರೆ ಸಂಸ್ಥೆಯ ನಾಗರತ್ನಾ ಬಂಜಗೆರೆ ವಿಷಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕನಕಪುರ: ‘ಪುರುಷ ಮತ್ತು ಸ್ತ್ರೀಯರಲ್ಲಿ ದೇಹ ರಚನೆ ಮಾತ್ರ ಭಿನ್ನವಾಗಿದ್ದರೂ ಇಬ್ಬರ ಆಲೋಚನೆ ಮತ್ತು ಚಿಂತನೆಗಳು ಒಂದೇ ಆಗಿವೆ. ಪುರುಷರಷ್ಟೇ ಮಹಿಳೆಯರು ಎಲ್ಲಾ ಕೆಲಸಗಳಲ್ಲಿ ಸಮರ್ಥರಿದ್ದಾರೆ’ ಎಂದು ಆಸರೆ ಸಂಸ್ಥೆಯ ನಾಗರತ್ನಾ ಬಂಜಗೆರೆ ಅಭಿಪ್ರಾಯಪಟ್ಟರು.

ಇಲ್ಲಿನ ನಾರಾಯಣಪ್ಪನ ಕೆರೆ ಬಳಿಯ ಕೆ.ಪಿ. ಶ್ರೀಕಂಠಯ್ಯ ಮೆಮೋರಿಯಲ್ ಮಲ್ಟಿಪರ್ಪಸ್ ಎಜುಕೇಷನ್ ಟ್ರಸ್ಟ್ ಆವರಣದಲ್ಲಿ ಅಮರ ಜ್ಯೋತಿ ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಘ, ವಿಡಿಡಿ ಇಂಡಿಯಾ ಬೆಂಗಳೂರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಮಂಗಳವಾರ ನಡೆದ ಗ್ರಾಹಕ ಮಹಿಳಾ ಕಾರ್ಯಾಗಾರ ಮತ್ತು ದೌರ್ಜನ್ಯ ಮುಕ್ತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸ್ವಾತಂತ್ರ್ಯ, ಸಮಾನತೆ, ಸಹೋದರತೆ ಸೇರಿದಂತೆ ಉದಾತ್ತವಾದ ಆಸೆಗಳನ್ನು ಸಂವಿಧಾನ ಹೊಂದಿದೆ. ಹೆಣ್ಣುಮಕ್ಕಳಿಗೂ ಸಮಾನವಾದ ಹಕ್ಕುಗಳನ್ನು ಪ್ರತಿಪಾದಿಸಿದೆ. ಕುಟುಂಬದ ಪಾಲನೆ, ಪೋಷಣೆ ಮಹಿಳೆಗೆ ಮಾತ್ರ ಸೀಮಿತ ಎಂಬ ಕಾಲಘಟ್ಟದಿಂದ ನಾವು ತುಂಬಾ ದೂರ ಸಾಗಿ ಬಂದಿದ್ದೇವೆ ಎಂದು ಹೇಳಿದರು.

ಇಂತಹ ಸಂದರ್ಭದಲ್ಲೂ ಮಹಿಳೆ ಸ್ವಾತಂತ್ರ್ಯವಿಲ್ಲದೆ ಕೌಟುಂಬಿಕ ದೌರ್ಜನ್ಯಕ್ಕೆ ಸಿಲುಕಿ ನಲುಗುತ್ತಿದ್ದಾಳೆ. ಆಧುನಿಕ ಯುಗದಲ್ಲಿ ಸಮಾನತೆಯ ಹಕ್ಕು ಸಿಕ್ಕಿದೆ ಎಂದುಕೊಂಡರೂ ಎಲ್ಲೋ ಒಂದು ಕಡೆ ನಾವು ಅಸಮಾನರು ಎಂಬ ದೃಷ್ಟಿಯಲ್ಲಿ ಸಮಾಜ ನೋಡುತ್ತಿದೆ. ಇದೆಲ್ಲದರಿಂದ ಮಹಿಳೆಯರು ಹೊರಬರಬೇಕಾದರೆ ಇನ್ನಷ್ಟು ಶ್ರಮ ಹಾಕಬೇಕು. ಸಮಾಜದ ಕೆಲವು ಕಟ್ಟುಪಾಡುಗಳಿಂದ ಆಚೆ ಬರಬೇಕು ಎಂದು ತಿಳಿಸಿದರು.

ಸಮಾಜದಲ್ಲಿ ಮಹಿಳೆಯರು ಮನೆಯಿಂದ ಹೊರಗೆ ಮತ್ತು ಒಳಗೆ ಎರಡು ಪಾಳಿಯಲ್ಲಿ ದುಡಿಯುತ್ತಿದ್ದರೂ ಇನ್ನೂ ಆರ್ಥಿಕ ಸ್ವಾತಂತ್ರ್ಯ ಸಿಕ್ಕಿಲ್ಲ. ಲಿಂಗ ಸಮಾನತೆಯ ಸೂಚ್ಯಂಕದಲ್ಲಿ 156 ದೇಶಗಳ ಪೈಕಿ 140ನೇ ಸ್ಥಾನದಲ್ಲಿ ಭಾರತ ಇದೆ. ಲಿಂಗ ಸಮಾನತೆ ಸಾಧಿಸುವ ದಾರಿಯಲ್ಲಿ ಬಹಳ ಹಿಂದೆ ಉಳಿದಿದ್ದೇವೆ ಎಂದು ವಿಷಾದಿಸಿದರು. 

ಮಹಿಳೆಯರು ಮತ್ತು ಮಕ್ಕಳು ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ. ಮಹಿಳೆ ಹೋರಾಟ ಮತ್ತಿತರ ರಂಗದಲ್ಲಿ ಗುರುತಿಸಿಕೊಂಡು ವ್ಯಕ್ತಿತ್ವ ರೂಪಿಸಿಕೊಳ್ಳಲು ಹೊರಟಾಗ ಸಮಾಜ ಕಳಂಕದ ಪಟ್ಟ ಕಟ್ಟುತ್ತದೆ. ನಾವು ಸಮಾನತೆಯ ಹಾದಿಯಲ್ಲಿ ನಡೆಯಬೇಕಿದೆ. ಅದಕ್ಕೆ ಮಹಿಳೆಯರು ಜಾಗೃತರಾಗಬೇಕು. ನಮ್ಮ ಸ್ಥಾನವನ್ನು ನಾವು ಪಡೆದುಕೊಳ್ಳಬೇಕೆಂದು ಕರೆ ನೀಡಿದರು.

ತಾಲ್ಲೂಕು ಪಂಚಾಯಿತಿ ಇಒ ಎಲ್‌. ಮಧು ಮಾತನಾಡಿ, ಪ್ರಸ್ತುತ ಸಮಾಜದಲ್ಲಿ ಸ್ತ್ರೀಯರು ಎಲ್ಲಾ ರಂಗದಲ್ಲೂ ಪುರುಷರ ಸರಿಸಮಾನರಾಗಿ ಕೆಲಸ ಮಾಡುತ್ತಿದ್ದಾರೆ. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ ಎಂದರು.

ಸಮಾಜದಲ್ಲಿರುವ ಅಸಮಾನತೆ ಮತ್ತು ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ, ಅತ್ಯಾಚಾರದ ತಡೆಗೆ ಶಿಕ್ಷಣವೇ ಆಯುಧವಾಗಬೇಕು. ಪ್ರತಿಯೊಬ್ಬ ಮಹಿಳೆಯು ಸುಶಿಕ್ಷಿತರಾಗಿ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಬೇಕು ಎಂದು ಸಲಹೆ ನೀಡಿದರು.

ಕೆಪಿಎಸ್‌ಸಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಮಂಜುನಾಥ್ ಮಾತನಾಡಿ, ಆನ್‌ಲೈನ್‌ನಲ್ಲಿ ವಂಚಿಸುವ ಘಟನೆಗಳು ಹೆಚ್ಚಾಗುತ್ತಿವೆ. ಯಾವುದೇ ವಸ್ತು ಖರೀದಿಸಿದರೆ ಅದರ ಉದ್ದೇಶ ಈಡೇ ರದಿದ್ದಾಗ ಅದನ್ನು ಹಿಂದಿರುಗಿಸುವ ಹಕ್ಕು ಗ್ರಾಹಕರಿಗೆ ಇದೆ ಎಂದರು. 

ಆನ್‌ಲೈನ್‌ ಖರೀದಿಯಲ್ಲಿ ಮೋಸ ಹೋಗಬೇಡಿ. ನೇರವಾಗಿ ಮಾರುಕಟ್ಟೆಯಲ್ಲಿ ಖರೀದಿಸಬೇಕು. ಯಾವುದೇ ವಸ್ತು ಖರೀದಿಸಿದರೂ ರಶೀದಿ ಪಡೆಯಬೇಕು ಎಂದು ಸಲಹೆ ನೀಡಿದರು.

ಪ್ಲಾಸ್ಟಿಕ್ ಬಳಕೆ ನಿಲ್ಲಿಸಿ ಮನೆಯಿಂದಲೇ ಕೈಚೀಲ ತರಬೇಕು. ಪ್ಲಾಸ್ಟಿಕ್ ನಿಷೇಧಕ್ಕೆ ಸರ್ಕಾರದೊಂದಿಗೆ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.

ತಾಲ್ಲೂಕು ಯೋಜನಾಧಿಕಾರಿ ಸುನಿಲ್ ಕುಮಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ರಮಾಮಣಿ, ವಕೀಲ ಗೋಪಾಲಗೌಡ, ಅಮರಜ್ಯೋತಿ ಅಂಗವಿಕಲ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕುಮಾರ್, ಕಾರ್ಯದರ್ಶಿ ರಾಮಚಂದ್ರ, ಎಚ್‌.ಎ. ಕಲಾವತಿ, ಶ್ರೀನಿವಾಸ್, ಹಿಮಮಣಿ, ಕಾಲೇಜಿನ ಪ್ರಾಂಶುಪಾಲೆ ಯಾಸ್ಮೀನ್‌, ಮಹಿಳೆಯರು ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು