ಶನಿವಾರ, ಡಿಸೆಂಬರ್ 7, 2019
25 °C

ಎಸ್ಸೆಸ್ಸೆಲ್ಸಿಯಲ್ಲಿ ಅತ್ಯುತ್ತಮ ಫಲಿತಾಂಶ ಬರಲಿ– ಶಾಸಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಾಗಡಿ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ನಮ್ಮ ವಿದ್ಯಾರ್ಥಿಗಳು ರಾಜ್ಯಕ್ಕೆ ಮೊದಲ ಸ್ಥಾನಗಳಿಸಬೇಕು ಎಂದು ಶಾಸಕ ಎ.ಮಂಜುನಾಥ ತಿಳಿಸಿದರು.

ಚಕ್ರಬಾವಿ ಮೊರಾರ್ಜಿ ವಸತಿ ಶಾಲೆಯಲ್ಲಿ ತಾಲ್ಲೂಕು ಪ್ರೌಢಶಾಲಾ ಮುಖ್ಯಶಿಕ್ಷಕರ ಸಂಘದ ಸಭೆಯಲ್ಲಿ ಅವರು ಮಾತನಾಡಿದರು.

‘ಶಾಸಕರು ಜೈಕಾರಕ್ಕೆ ಸೀಮಿತರಾಗಿಲ್ಲ, ತಾಲ್ಲೂಕಿನ ಶೈಕ್ಷಣಿಕ ರಂಗಸೇರಿದಂತೆ ಸರ್ವಾಂಗೀಣ ಅಭಿವೃದ್ಧಿಗೆ ದುಡಿಯುತ್ತಿದ್ದಾರೆ ಎಂಬುದನ್ನು ಸಾಧನೆ ಮಾಡಿ ತೋರಿಸಬೇಕಿದೆ. ಮುಖ್ಯಶಿಕ್ಷಕರ, ಸಹಶಿಕ್ಷಕರ ಸಲಹೆ ಸೂಚನೆಗಳನ್ನು ಸದಾ ಸ್ವೀಕರಿಸುತ್ತೇನೆ’ ಎಂದರು.

‘ಎಸ್‌.ಎಸ್‌.ಎಲ್‌.ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಪ್ರಾಮಾಣಿಕವಾಗಿ ಪರೀಕ್ಷೆ ಬರೆದು ರಾಜ್ಯಕ್ಕೆ ಮೊದಲ ಸ್ಥಾನಗಳಿಸುವಂತೆ ಪ್ರಯತ್ನ ಮಾಡಿ. ನಕಲು ಮಾಡಿಸಬೇಡಿ. 68 ಪ್ರೌಢಶಾಲೆಗಳಲ್ಲಿನ ಕೊರತೆಗಳನ್ನು ನಿವಾರಣೆ ಮಾಡುವೆ. ಅಸಹಾಯಕತೆ, ಅಸಡ್ಡೆ ದೂರಮಾಡಿ, ಪ್ರತಿಯೊಬ್ಬ ಶಿಕ್ಷಕರು ನಮ್ಮ ಶಾಲೆ, ನಮ್ಮಮಗು ಎಂಬ ಅರ್ಪಣಾ ಭಾವನೆಯಿಂದ ಗುಣಮಟ್ಟದಲ್ಲಿ ಫಲಿತಾಂಶ ತರಬೇಕೆಂದು ಕೈಮುಗಿದು ಬೇಡಿಕೊಳ್ಳುತ್ತೇನೆ. ಅಭಿವೃದ್ದಿಗಿಂತ ಮಗುವಿಗೆ ಕೊಡಿಸುವ ಗುಣಮಟ್ಟದ ಶಿಕ್ಷಕ ಮಹತ್ವದ್ದಾಗಿದೆ. ಸವಲತ್ತು ಕೊಡಿಸುವೆ, ಫಲಿತಾಂಶ ತರಲೇಬೇಕು’ ಎಂದರು.

ಎಸ್ಎಸ್‌ಎಲ್‌ಸಿ ಫಲಿತಾಂಶ ಉತ್ತಮಗೊಳಿಸುವ ಬಗ್ಗೆ ಶಾಸಕರು ಪ್ರತಿಯೊಬ್ಬ ಶಿಕ್ಷಕರಿಗೂ ಸ್ವತಃ ಕೈಬರಹದಲ್ಲಿ ಬರೆದಿರುವ ಪತ್ರವನ್ನು ವಿತರಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದೇಶ್ವರ.ಎಸ್‌.ಮಾತನಾಡಿ, ‘ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಗಳಿಸಲು 20 ಅಂಶಗಳ ಪಟ್ಟಿ ಬಿಡುಗಡೆ ಮಾಡಿದ್ದೇವೆ. ಪೋಷಕರ ಒತ್ತಾಸೆಗಾಗಿ ಮನವಿ ಮಾಡಿದ್ದು, ಗುಂಪು ಅಧ್ಯಯನ, ವಿಶೇಷ ತರಗತಿಗಳನ್ನು ನಡೆಸಲಾಗುತ್ತಿದೆ’ ಎಂದರು.

ತಾಲ್ಲೂಕು ದೈಹಿಕ ಶಿಕ್ಷಣ ಅಧಿಕಾರಿ ಸಿ.ಬಿ.ಅಶೋಕ್‌, ತಾಲ್ಲೂಕು ಮುಖ್ಯಶಿಕ್ಷಕರ ಸಂಘದ ಪದಾಧಿಕಾರಿಗಳಾದ ಗೋಪಾಲ್‌, ಕುದೂರಿನ ಕೇಶವಮೂರ್ತಿ, ವಸಂತಕುಮಾರ್‌, ವೆಂಕಟೇಶ್‌, ನಾರಾಯಣ್‌, ಧನಂಜಯ, ಚನ್ನೇಗೌಡ ಹಾಗು ತಾಲ್ಲೂಕಿನ ವಿವಿದೆಡೆಗಳಿಂದ ಆಗಮಿಸಿದ್ದ ಸರ್ಕಾರಿ, ಅನುದಾನಿತ, ಅನುದಾನ ರಹಿತ 68 ಶಾಲೆಗಳ ಮುಖ್ಯಶಿಕ್ಷಕರು ಇದ್ದರು.

ಅಜ್ಜನಹಳ್ಳಿ ಗ್ರಾಮೀಣ ವಸತಿ ಶಾಲಾ ಮುಖ್ಯಶಿಕ್ಷಕ ನಂಜಪ್ಪ ನಿವೃತ್ತರಾದರು. ಶಾಸಕ ಎ.ಮಂಜುನಾಥ ಸನ್ಮಾನಿಸಿದರು. ಹುಲಿಕಟ್ಟೆ ಪ್ರೌಢಶಾಲೆಯ ಮುಖ್ಯಶಿಕ್ಷಕ ವೆಂಕಟೇಶ್‌, ಮೊರಾರ್ಜಿ ವಸತಿ ಶಾಲೆ ಪ್ರಾಂಶುಪಾಲ ಕೃಷ್ಣಮೂರ್ತಿ ಇದ್ದರು.

ಪ್ರತಿಕ್ರಿಯಿಸಿ (+)