ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಕಪುರ: ಉತ್ತಮ ರಸ್ತೆ ಅಗೆಸಿದ ನಗರಸಭೆ, ಟೀಕೆ

Last Updated 26 ಜನವರಿ 2020, 13:54 IST
ಅಕ್ಷರ ಗಾತ್ರ

ಕನಕಪುರ: ಇಲ್ಲಿನ ಸಬ್‌ ರಿಜಿಸ್ಟ್ರಾರ್‌ ಕಚೇರಿ ಪಕ್ಕದ ಸಾರಾಯಿ ರಾಮಣ್ಣ ರಸ್ತೆ ಚೆನ್ನಾಗಿದ್ದು, ಅದನ್ನು ಅಗೆದು ನಗರಸಭೆಯವರು ಹೊಸದಾಗಿ ಕಾಂಕ್ರೀಟ್‌ ರಸ್ತೆ ಮಾಡುತ್ತಿದ್ದಾರೆಂದು ಆರೋಪಿಸಿ ಸ್ಥಳೀಯರು ಭಾನುವಾರ ಕಾಮಗಾರಿ ತಡೆದು ಸ್ಥಗಿತಗೊಳಿಸಿದರು.

ಕೃಷ್ಣ ಮಾತನಾಡಿ, ಒಂದು ವರ್ಷದ ಹಿಂದೆ ಈ ರಸ್ತೆಗೆ ಕಾಂಕ್ರೀಟ್‌ ಮತ್ತು ರಸ್ತೆಯ ಉತ್ತರ ಭಾಗಕ್ಕೆ ಕಾಂಕ್ರೀಟ್‌ ಬಾಕ್ಸ್‌ ಚರಂಡಿ ಮಾಡಿದ್ದಾರೆ. ಆ ಚರಂಡಿಯಲ್ಲಿ ನೀರು ಮುಂದೆ ಹೋಗದೆ ಅಲ್ಲಿಯೇ ನಿಂತು ಕೊಳೆಯುತ್ತಿದೆ. ಅದನ್ನು ಸರಿಪಡಿಸದೆ ಕಮಿಷನ್‌ ಆಸೆಗಾಗಿ ಹೊಸದಾಗಿ ಕಾಂಕ್ರೀಟ್‌ ಕಾಮಗಾರಿ ಮಾಡುತ್ತಿದ್ದಾರೆ ಎಂದು ದೂರಿದರು.

ರಾಮಣ್ಣ ನಗರಸಭೆಗೆ ನಿರಂತರವಾಗಿ ಈ ಸಂಬಂಧ ದೂರು ಕೊಟ್ಟು ದೊಡ್ಡ ಮೋರಿಯನ್ನು ಸರಿಪಡಿಸಿಕೊಡಿ ಎಂದು ಒತ್ತಾಯಿಸುತ್ತಾ ಬಂದಿದ್ದಾರೆ. ಅದಕ್ಕೆ ಅಧಿಕಾರಿಗಳು ಈವರೆಗೂ ಸ್ಪಂದಿಸಿಲ್ಲ, ನಮ್ಮ ರಸ್ತೆಯ ಚರಂಡಿ ನೀರು ಮಾತ್ರ ಮುಂದೆ ಹೋಗದೆ ಕೊಳೆತು ವಾಸನೆ ಬರುತ್ತಿದೆ ಎಂದು ಆರೋಪಿಸಿದರು.

ಆನಂದ, ಬಾಬಣ್ಣ ಮಾತನಾಡಿ, ಸಮಸ್ಯೆ ಇರುವುದು ಒಂದು ಕಡೆಯಾದರೆ ಅದನ್ನು ಬಿಟ್ಟು ಚೆನ್ನಾಗಿರುವ ರಸ್ತೆಯನ್ನೇ ಅಗೆಯುತ್ತಿದ್ದಾರೆ. ನಗರಸಭೆಯವರು ಯಾವ ಯೋಜನೆಯಲ್ಲಿ ಈ ಕಾಮಗಾರಿ ಮಾಡುತ್ತಿದ್ದಾರೆ. ಕಾಮಗಾರಿಯ ವೆಚ್ಚವೆಷ್ಟು ಎಂಬುದನ್ನು ತಿಳಿಸದೆ, ಕೆಲಸ ಮಾಡುವವರನ್ನು ಶನಿವಾರ ರಾತ್ರಿ ಕರೆದುಕೊಂಡು ಬಂದು ತೋರಿಸಿ ಹೋಗಿದ್ದಾರೆ ಎಂದು ಟೀಕಿಸಿದರು.

ಭಾನುವಾರ ಬೆಳಿಗ್ಗೆ ಎದ್ದು ನೋಡುವುದರಲ್ಲಿ ಜೆಸಿಬಿಯಿಂದ ರಸ್ತೆಯನ್ನು ಅಗೆಯಲಾಗುತ್ತಿತ್ತು, ಯಾಕಯ್ಯ ಚೆನ್ನಾಗಿದ್ದ ರಸ್ತೆಯನ್ನು ಅಗೆಯುತ್ತಿದ್ದೀಯ ಎಂದು ಕೇಳಿದರೆ ಕೆಲಸಗಾರ ನನಗೇನು ಗೊತ್ತಿಲ್ಲ, ನಗರಸಭೆಯವರು ಅಗೆಯಿರಿ ಎಂದು ಹೇಳಿದ್ದಾರೆ. ಅದಕ್ಕೆ ಅಗೆಯುತ್ತಿದ್ದೇವೆ ಎಂದು ತಿಳಿಸಿದ್ದಾಗಿ ಹೇಳಿದರು.

‘ಕೂಡಲೇ ರ‍ಸ್ತೆಯ ನಿವಾಸಿಗಳೆಲ್ಲಾ ಸೇರಿ ಜೆಸಿಬಿ ಕೆಲಸ ಮಾಡುವುದನ್ನು ನಿಲ್ಲಿಸಿದ್ದೇವೆ. ಸಂಬಂಧಪಟ್ಟ ಎಂಜಿನಿಯರ್‌ ಪವಿತ್ರ ಎಂಬುವರಿಗೆ ಕರೆಮಾಡಿದಾಗ ಅವರು ಕರೆ ಸ್ವೀಕರಿಸಲಿಲ್ಲ. ಭಾನುವಾರ ರಜೆ ಇದ್ದುದರಿಂದ ಸೋಮವಾರ ನಗರಸಭೆಗೆ ಹೋಗಿ ವಿಚಾರಿಸುತ್ತೇವೆ. ನಮ್ಮ ಸಮಸ್ಯೆಯಾದ ದೊಡ್ಡ ಮೋರಿಯನ್ನು ಸರಿಪಡಿಸಿ, ಚರಂಡಿಯಾಗದೆ ಇರುವ ರಸ್ತೆಯ ಪಶ್ಚಿಮಭಾಗದಲ್ಲಿ ಚರಂಡಿ ಮಾಡಬೇಕು’ ಎಂದು ತಿಳಿಸಿದರು.

ಈ ಕುರಿತು ಪ್ರತಿಕ್ರಿಯೆ ಪಡೆಯಲು ಪವಿತ್ರ ಅವರು ದೂರವಾಣಿ ಕರೆ ಸ್ವೀಕರಿಸಲಿಲ್ಲ. ನಿವಾಸಿಗಳಾದ ಕೆ.ಎಂ.ವಾಸುಮೂರ್ತಿ, ರಾಮಣ್ಣ, ಶಿವಕುಮಾರ್‌, ಸುನಿಲ್‌, ಗಂಗಾಧರ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT