ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ನಿರ್ವಹಣೆಯಲ್ಲಿ ಸರ್ಕಾರ ವಿಫಲ: ಸಂಸದ ಡಿ.ಕೆ. ಸುರೇಶ್ ಟೀಕೆ

ಬಿಜೆಪಿ ಸರ್ಕಾರ ನಂಬಿದರೆ ಜೀವ ಉಳಿಯುವುದಿಲ್ಲ
Last Updated 24 ಏಪ್ರಿಲ್ 2021, 4:18 IST
ಅಕ್ಷರ ಗಾತ್ರ

ಚನ್ನಪಟ್ಟಣ: ಕೊರೊನಾ ನಿರ್ವಹಣೆಯಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಸಂಸದ ಡಿ.ಕೆ.ಸುರೇಶ್ ಟೀಕಿಸಿದರು.

ಪಟ್ಟಣದ ನಗರಸಭೆ ಚುನಾವಣೆಯ ಹಿನ್ನೆಲೆಯಲ್ಲಿ ವಿವಿಧ ವಾರ್ಡ್‌ಗಳಲ್ಲಿ ಶುಕ್ರವಾರ ಪ್ರಚಾರ ನಡೆಸಿ, ನಂತರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ಕೊರೊನಾ ಎರಡನೇ ಅಲೆಯ ಭೀತಿ ಇದ್ದರೂ ಉದಾಸೀನ ಮಾಡಿದ ಸರ್ಕಾರ, ಈಗ ಕೋವಿಡ್ ಪ್ರಕರಣಗಳು ಹೆಚ್ಚಾದ ನಂತರ ನಿಯಂತ್ರಣಕ್ಕಾಗಿ ಪರದಾಡುತ್ತಿದೆ. ಸರ್ಕಾರ ಮೈಮರೆತಿದ್ದರಿಂದಲೇ ಇಂದು ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಈಗ ಆಗುತ್ತಿರುವ ತೊಂದರೆಗಳಿಗೆ ಸರ್ಕಾರವೇ ಹೊಣೆ ಎಂದು ಕಿಡಿಕಾರಿದರು.

ಈ ಸರ್ಕಾರವನ್ನು ನಂಬಿಕೊಂಡು ಕುಳಿತುಕೊಂಡರೆ ನಿಮ್ಮ ಜೀವ ಉಳಿಯುವುದಿಲ್ಲ. ಕೊವಿಡ್ ನಿಯಮಗಳನ್ನು ಪಾಲಿಸುವ ಜೊತೆಗೆ ನಿಮ್ಮ ಎಚ್ಚರಿಕೆಯಲ್ಲಿ ನೀವು ಇರುವುದು ಒಳ್ಳೆಯದು. ಸರ್ಕಾರ ಯಾವುದಕ್ಕೂ ಸಜ್ಜಾಗಿಲ್ಲ. ಮೊದಲೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದರೆ ಇಷ್ಟೊಂದು ಅನಾಹುತಗಳು ಆಗುತ್ತಿರಲಿಲ್ಲ. ಕೊರೊನಾ ವೈರಸ್ ಗೆ ಲಸಿಕೆ ಬಂತೆಂದು ಸರ್ಕಾರ ಮೈಮರೆಯಿತು. ಕಟ್ಟುಪಾಡುಗಳನ್ನು ಸಡಿಲಿಸಿತು ಎಂದು ಆರೋಪಿಸಿದರು.

ಪರಿಸ್ಥಿತಿಯನ್ನು ಸೂಕ್ತವಾಗಿ ನಿಭಾಯಿಸದ ಹಿನ್ನೆಲೆಯಲ್ಲಿ ಇಂದು ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಇನ್ನಾದರೂ ಸರಕಾರ ಎಚ್ಚೆತ್ತುಕೊಳ್ಳದಿದ್ದಲ್ಲಿ ಮುಂದೆ ಭಾರಿ ಅಪಾಯ ಕಾದಿದೆ ಎಂದು ಎಚ್ಚರಿಕೆ ನೀಡಿದರು.

ಔಷಧದ ವಿಚಾರದಲ್ಲಿ ಕೇಂದ್ರ ಸರ್ಕಾರ ಸುಳ್ಳು ಹೇಳುತ್ತಿದ್ದು, ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ. ಕೇಂದ್ರ ಸರ್ಕಾರದಿಂದ ಒಳ್ಳೆಯ ಭಾಷಣಗಳು ಬರುತ್ತಿವೆಯೇ ಹೊರತು ಉತ್ತಮ ಆಡಳಿತ ಬರುತ್ತಿಲ್ಲ. ಕೊರೊನಾ ನಿಯಂತ್ರಣಕ್ಕೆ ಸರಿಯಾದ ಕ್ರಮಗಳನ್ನು ಕೈಗೊಳ್ಳುವುದನ್ನು ಬಿಟ್ಟು ಬರೀ ಭಾಷಣ ಮಾಡುವುದರಲ್ಲೇ ಕಾಲ ಕಳೆಯುತ್ತಿದೆ ಎಂದು ಲೇವಡಿ ಮಾಡಿದರು.

ಕಳೆದ ವರ್ಷದ ಪರಿಸ್ಥಿತಿಯೇ ಬೇರೆ, ಈ ವರ್ಷದ ಪರಿಸ್ಥಿತಿಯೇ ಬೇರೆ. ಈ ವರ್ಷ ಯುವಕರು, ಮಕ್ಕಳು ಸಹ ಕೊರೊನಾ ದಾಳಿಗೆ ತುತ್ತಾಗುತ್ತಿದ್ದಾರೆ. ಸಾಕಷ್ಟು ಯುವಕರು ಕೊರೊನಾಗೆ ಬಲಿಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದರು.

ವಿಧಾನ ಪರಿಷತ್ ಸದಸ್ಯ ಎಸ್.ರವಿ, ಕೆಪಿಸಿಸಿ ಸದಸ್ಯ ಟಿ.ಕೆ. ಯೋಗೀಶ್, ಜಿ.ಪಂ. ಸದಸ್ಯ ಗಂಗಾಧರ್, ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ಪ್ರಮೋದ್, ನಗರ ಘಟಕದ ಅಧ್ಯಕ್ಷ ಸುನೀಲ್, ಮುಖಂಡರಾದ ಶಿವಮಾದು, ಕುಮಾರ್, ಮುದ್ದುಕೃಷ್ಣ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT