ಮಾಗಡಿ: ‘ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ದೊರೆಯಬೇಕಾದರೆ ಸರ್ಕಾರಿ ಶಾಲೆಗಳನ್ನು ಸಬಲೀಕರಣಗೊಳಿಸಬೇಕಿದೆ’ ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಟಿ.ಎನ್.ಪದ್ಮನಾಭ ತಿಳಿಸಿದರು.
ತಾಲ್ಲೂಕಿನ ವೀರೇಗೌಡನ ದೊಡ್ಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಮಾಡಬಾಳ್ ಹೋಬಳಿಯ ಕ್ಲಸ್ಟರ್ ಮಟ್ಟದ ಶಾಲಾ ಅಭಿವೃದ್ಧಿ ಸಮಿತಿ ಮತ್ತು ಮುಖ್ಯ ಶಿಕ್ಷಕರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ‘ಸರ್ಕಾರಿ ನೌಕರರು ಮತ್ತು ಶಿಕ್ಷಕರೆಲ್ಲರೂ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಿ ಶಿಕ್ಷಣ ಕೊಡಿಸಬೇಕು’ ಎಂದರು.
‘ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಕುಸಿತವಾಗುವುದನ್ನು ತಡೆಯಲು ಮೌಲ್ಯಯುತ ವೈಜ್ಞಾನಿಕ ಕಲಿಕೆಗೆ ಸರ್ಕಾರ ಪ್ರೋತ್ಸಾಹ ನೀಡಬೇಕು. 1ರಿಂದ 10ನೇ ತರಗತಿವರೆಗೆ ಮಾತೃಭಾಷೆ ಕನ್ನಡವನ್ನು ಕಡ್ಡಾಯಗೊಳಿಸಬೇಕು. ಕನ್ನಡದಲ್ಲಿಯೇ ವೈದ್ಯಕೀಯ, ಎಂಜಿನಿಯರಿಂಗ್, ವಾಣಿಜ್ಯ ಪದವಿಯ ಶಿಕ್ಷಣ ನೀಡುವಂತಾಗಬೇಕು’ ಎಂದು ಆಗ್ರಹಿಸಿದರು.
‘ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡಿದವರಿಗೆ ಮಾತ್ರ ಸರ್ಕಾರಿ ಹುದ್ದೆ ನೀಡುವ ಬಗ್ಗೆ ಕಾನೂನು ರಚಿಸಬೇಕು. ಶಾಲಾ ಅಭಿವೃದ್ಧಿ ನಿರ್ವಹಣೆಗೆ ಸರ್ಕಾರ ಹೆಚ್ಚಿನ ಅನುದಾನ ನೀಡಿ, ತಂತ್ರಜ್ಞಾನ ಆಧಾರಿತ ಬೋಧನಾ ವಿಧಾನಗಳನ್ನು ಅಳವಡಿಸಿಕೊಂಡರೆ ಶಿಕ್ಷಣದಲ್ಲಿ ಗುಣಮಟ್ಟ ಹೆಚ್ಚಾಗಲಿದೆ. ಖಾಸಗಿ ಶಾಲೆಗಳಿಗೆ ಸರಿಸಮನಾಗಿ ಸರ್ಕಾರವು ಸರ್ಕಾರಿ ಶಾಲೆಗಳಿಗೆ ಮೂಲಸೌಲಭ್ಯ ಒದಗಿಸಬೇಕು’ ಎಂದರು.
ತಾಲ್ಲೂಕು ಶಾಲಾಭಿವೃದ್ಧಿ ಸಮನ್ವಯ ವೇದಿಕೆ ಅಧ್ಯಕ್ಷ ಅಶೋಕ್, ಮುಖ್ಯ ಶಿಕ್ಷಕಿ ಮಂಗಳಮ್ಮ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.