ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಂತ್ರಸ್ತರಿಗೆ ಸ್ಪಂದಿಸದ ಸರ್ಕಾರ’

ಪರಿಹಾರ ವಿಳಂಬ: ವಿಧಾನ ಪರಿಷತ್‌ನಲ್ಲಿ ಎಸ್‌. ರವಿ
Last Updated 17 ಸೆಪ್ಟೆಂಬರ್ 2022, 4:41 IST
ಅಕ್ಷರ ಗಾತ್ರ

ಬೆಂಗಳೂರು: ‘ಪ್ರವಾಹ ಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿ ವಿಳಂಬ ಮಾಡಲಾಗುತ್ತಿದೆ. ಇದು ಅಸಮರ್ಥ ಸರ್ಕಾರ’ ಎಂದು ವಿಧಾನ ಪರಿಷತ್‌ನಲ್ಲಿ ಶುಕ್ರವಾರ ಕಾಂಗ್ರೆಸ್‌ ಸದಸ್ಯ ಎಸ್‌. ರವಿ ಕಿಡಿಕಾರಿದರು.

ನಿಯಮ 68ರ ಅಡಿಯಲ್ಲಿ ರಾಜ್ಯದಲ್ಲಿನ ಪ್ರವಾಹ ಪರಿಸ್ಥಿತಿ ಕುರಿತು ಮಾತನಾಡಿದ ಅವರು, ರಾಮನಗರದಲ್ಲಿ ಇತ್ತೀಚೆಗೆ ಸಂಭವಿಸಿದ ಪ್ರವಾಹದಿಂದ ಜನರು ಎದುರಿಸಿದ ಸಂಕಷ್ಟಗಳನ್ನು ಎಳೆಎಳೆಯಾಗಿ ವಿವರಿಸಿದರು.

‘ರಾಮನಗರದಲ್ಲಿ ಪ್ರವಾಹದಿಂದಾಗಿ ಹಲವರು ಬದುಕು ಸರ್ವನಾಶವಾಗಿದೆ. ಆದರೆ, ಕಲ್ಲು ಹೃದಯದ ಅಧಿಕಾರಿಗಳು ಪರಿಹಾರಕ್ಕೆ ದಾಖಲೆಗಳನ್ನು ಕೇಳುತ್ತಿದ್ದಾರೆ. ನೀರಿನ ಕೆಸರಿನಲ್ಲಿ ದಾಖಲೆಗಳು, ಬಟ್ಟೆ, ಒಡವೆಗಳು ಎಲ್ಲವೂ ಕೊಚ್ಚಿಹೋಗಿರುವಾಗ ಎಲ್ಲಿಂದ ತಂದು ಕೊಡುವುದು? ಡಬಲ್‌ ಎಂಜಿನ್‌ ಸರ್ಕಾರಎಂದು ಹೇಳುತ್ತೀರಿ. ಆದರೆ,ಪರಿಹಾರ ಎಲ್ಲಿದೆ’ ಎಂದು ಕಟುವಾಗಿ ಪ್ರಶ್ನಿಸಿದರು.

‘ಜಿಲ್ಲಾ ಉಸ್ತುವಾರಿ ಸಚಿವರು ಆವಾಜ್‌ ಹಾಕಿದರೆ ಆಗುವುದಿಲ್ಲ. ಅಧಿಕಾರಿಗಳ ಕಿವಿ ಹಿಂಡಿ ಸಂತ್ರಸ್ತರ ನೆರವಿಗೆ ಧಾವಿಸುವಂತೆ ಸೂಚಿಸಬೇಕು.ಜಿಲ್ಲಾ ಉಸ್ತುವಾರಿ ಸಚಿವರು ರಾಮನಗರ ಸ್ವಚ್ಛ ಮಾಡುವುದಾಗಿ ಹೇಳಿದ್ದರು. ಈಗ ಅವರಿಗೆ ಅಂತಹ ಅವಕಾಶ ಒದಗಿ ಬಂದಿದೆ’ ಎಂದು ವ್ಯಂಗ್ಯವಾಡಿದರು.

‘ಮುಖ್ಯಮಂತ್ರಿ, ಸಚಿವರು ಸ್ಥಳಕ್ಕೆ ಭೇಟಿ ನೀಡಿದ್ದು ಶ್ಲಾಘನೀಯ ಕಾರ್ಯ. ಪ್ರವಾಹದ ಗಂಭೀರತೆಯನ್ನು ಅರಿತುಕೊಂಡಿದ್ದರೆ ಯುದ್ಧೋಪಾದಿಯಲ್ಲಿ ಪರಿಹಾರ ಕೈಗೊಳ್ಳಬೇಕಾಗಿತ್ತು. ಆದರೆ, ನಿರೀಕ್ಷಿತ ಮಟ್ಟದಲ್ಲಿ ನಡೆಯಲಿಲ್ಲ. ಹಾಗಿದ್ದರೆ, ಸರ್ಕಾರ ಸ್ಪಂದಿಸಿರುವುದು ಕೇವಲ ತೋರಿಕೆಯ ಅಥವಾ ಬೂಟಾಟಿಕೆಯೇ’ ಎಂದು ಪ್ರಶ್ನಿಸಿದರು.

‘ಪರಿಹಾರ ನೀಡುವಲ್ಲಿ ಏನೂ ತಪ್ಪುಗಳು ನಡೆದಿಲ್ಲ. ಏಕೆಂದರೆ, ಯಾವುದೇ ಕೆಲಸಗಳೇ ನಡೆದಿಲ್ಲ. ನೋ ವರ್ಕ್‌, ನೋ ಮಿಸ್ಟೇಕ್‌. ಕೃಷಿಕರಿಗೆ ಈ ಬಾರಿ ಬಿತ್ತನೆಗೂ ಅವಕಾಶ ಇಲ್ಲದಂತಾಗಿದೆ. ರೈತರ ಬದುಕು ಸಹ ಸಂಕಷ್ಟದಲ್ಲಿದೆ. ಸಹಕಾರ ಸಂಘಗಳಿಂದ ಸಂತ್ರಸ್ತರಿಗೆ ಲಾಭಾಂಶದಲ್ಲಿ ನೆರವು ಒದಗಿಸಲು ಸರ್ಕಾರ ಅವಕಾಶ ನೀಡಬೇಕು. ಇದಕ್ಕೂ ಸರ್ಕಾರದ ಅನುಮತಿ ಕೇಳುವ ಪರಿಸ್ಥಿತಿ ಇದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT