ಶುಕ್ರವಾರ, ಆಗಸ್ಟ್ 6, 2021
22 °C
ಕೇಂದ್ರ ಬಿಜೆಪಿ ಸರ್ಕಾರಕ್ಕೆ ಒಂದು ವರ್ಷ: ಪಕ್ಷದ ನಾಯಕರಿಂದ ಸಾಧನೆಗಳ ಅನಾವರಣ

ರಾಮನಗರ | ’ವರ್ಷದಲ್ಲೇ ಜನ ಮೆಚ್ಚುವ ಸಾಧನೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ಕಳೆದ 70ವರ್ಷಗಳಲ್ಲಿ ಆಗದ ಎಷ್ಟೋ ಅಭಿವೃದ್ಧಿ ಕಾರ್ಯಗಳನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಎರಡನೇ ಅವಧಿಯ ಮೊದಲ ವರ್ಷದಲ್ಲೇ ಸಾಧಿಸಿದೆ. ದೇಶದಲ್ಲಿ ದೊಡ್ಡ ಮಟ್ಟದ ಸುಧಾರಣೆ ತರಲು ಕಾರಣವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಅಶ್ವತ್ಥನಾರಾಯಣ ಅಭಿಪ್ರಾಯಪಟ್ಟರು.

ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಎರಡನೇ ಬಾರಿಗೆ ಅಧಿಕಾರಕ್ಕೇರಿ ಒಂದು ವರ್ಷ ಪೂರ್ಣಗೊಂಡ ಅಂಗವಾಗಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

’ಮೊದಲ ಅವಧಿಯಲ್ಲಿ ಜಾರಿ ತಂದ ಜನಧನ್, ವಿಮೆ, ಪಿಂಚಣಿ, ಮೇಕ್ ಇನ್ ಇಂಡಿಯಾ, ಡಿಜಿಟಲ್ ಇಂಡಿಯಾ, ಸ್ವಚ್ಛ ಭಾರತ, ಉಜಾಲಾ, ಉಜ್ವಲಾ, ಜನೌಷಧಿ ಮುಂತಾದ ಜನಪರ ಯೋಜನೆಗಳು ಹಾಗೂ ನೋಟ್ ಬ್ಯಾನ್, ಹಣಕಾಸು ವಹಿವಾಟಿಗೆ ಆಧಾರ್ ಕಡ್ಡಾಯಗೊಳಿಸುವ ಕಠಿಣ ನಿರ್ಧಾರಗಳು ದೇಶಕ್ಕೆ ಭದ್ರ ಬುನಾದಿಯಾಗಿವೆ. 30 ಕೋಟಿ ಜನರನ್ನು ಹೊಸದಾಗಿ ಬ್ಯಾಂಕಿಂಗ್ ವ್ಯವಸ್ಥೆಗೆ ತಂದ ಸರ್ಕಾರ, ಯೋಜನೆಯ ಲಾಭವನ್ನು ಅವರ ಖಾತೆಗೆ ನೇರವಾಗಿ ಜಮೆಯಾಗುವಂತೆ ನೋಡಿಕೊಂಡು ಆಡಳಿತದಲ್ಲಿ ಪಾರದರ್ಶಕತೆ ತಂದಿತು. ಮುಖ್ಯವಾಗಿ, ಪುಲ್ವಾಮಾ ಉಗ್ರರ ದಾಳಿಗೆ ಪ್ರತಿಯಾಗಿ ಸರ್ಜಿಕಲ್ ಸ್ಟ್ರೈಕ್ ನಡೆಸುವಂಥ ಮಹತ್ವದ ನಿರ್ಣಯಗಳೇ ಎರಡನೇ ಅವಧಿಗೂ ಜನ ಮೋದಿ ಸರ್ಕಾರವನ್ನು ಆಯ್ಕೆ ಮಾಡಲು ಕಾರಣವಾಯಿತು‘ಎಂದರು.

ಸಿಎಎ ಜಾರಿ, 370ವಿಧಿ ರದ್ದು; ’ಸಂವಿಧಾನದ 370ನೇ ವಿಧಿರದ್ದು ಹಾಗೂ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿ ಮೋದಿ ಸರ್ಕಾರದ ಐತಿಹಾಸಿಕ ನಿರ್ಣಯ. ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಲು ತಾತ್ಕಲಿಕವಾಗಿ ಜಾರಿ ತಂದ 370ನೇ ವಿಧಿ ಶಾಶ್ವತವಾಗಿ ಉಳಿದುಕೊಂಡಿತ್ತು. ಅದನ್ನು ರದ್ದುಗೊಳಿಸಿದ ಮೋದಿ ಸರ್ಕಾರ, ಜಮ್ಮು ಕಾಶ್ಮೀರದಲ್ಲಿ ಶಾಂತಿ ಸುವ್ಯವಸ್ಥೆ ನೆಲೆಸುವಂತೆ ಮಾಡಿತು. ರಾಷ್ಟ್ರ ವಿಭಜನೆ ನಂತರ ನೆರೆ ರಾಷ್ಟ್ರಗಳಲ್ಲಿ ಉಳಿದ ಭಾರತೀಯ ಮೂಲದವರು ಧರ್ಮದ ವಿಚಾರವಾಗಿ ಅಲ್ಲಿ ದೌರ್ಜನ್ಯ ಎದುರಿಸಿ ದೇಶಕ್ಕೆ ವಾಪಸಾದಾಗ ಅವರಿಗೆ ಪೌರತ್ವ ದೊರೆಯದೇ ಒದ್ದಾಡುವ ಪರಿಸ್ಥಿತಿ ಇತ್ತು. ಅಂಥವರ ರಕ್ಷಣೆಗಾಗಿ 'ಪೌರತ್ವ ತಿದ್ದುಪಡಿ ಕಾಯಿದೆ ಜಾರಿ ಮಾಡಿತು. ಪ್ರತಿಪಕ್ಷಗಳ ವಿರೋಧದ ನಡುವೆಯೂ ಈ ವಿಧೇಯಕಗಳಿಗೆ ಅಂಗೀಕಾರ ಪಡೆದದ್ದು ಅಮೋಘ ಸಾಧನೆ‘ ಎಂದರು.

ತ್ರಿವಳಿ ತಲಾಖ್‌ ನಿಷೇಧ, ರಾಮಮಂದಿರ ತೀರ್ಪು ಸುಖಾಂತ್ಯ ಈ ಅವಧಿಯಲ್ಲಿ ನೆನಪಿಡುವ ಸಂಗತಿಗಳು. ಕೋವಿಡ್‌ ಪರಿಸ್ಥಿತಿ ನಿರ್ವಹಣೆ ಮೂಲಕ ಇಡೀ ವಿಶ್ವಕ್ಕೆ ಪ್ರಧಾನಿ ಮೋದಿ ಮಾದರಿಯಾಗಿದ್ದಾರೆ ಎಂದು ಬಣ್ಣಿಸಿದರು. ಆತ್ಮ ನಿರ್ಭರ ಭಾರತ ನಿರ್ಮಾಣಕ್ಕೆ ಮುಂದಾಗಿರುವ ಪ್ರಧಾನಿ ಮೋದಿ, ಕೋವಿಡ್ ಸಂಕಷ್ಟವನ್ನೇ ಭವಿಷ್ಯದ ಆರ್ಥಿಕ ಮತ್ತು ಉದ್ಯೋಗ ಬೆಳವಣಿಗೆಗೆ ಒಂದು ಅವಕಾಶವಾಗಿ ಪರಿವರ್ತಿಸುವ ಪ್ರಯತ್ನ ಮಾಡಿದ್ದಾರೆ. ವೆಂಟಿಲೇಟರ್, ಪಿಪಿಇ ಕಿಟ್, ಎನ್95 ಮಾಸ್ಕ್, ಟೆಸ್ಟಿಂಗ್ ಕಿಟ್ ಮುಂತಾದ ಪರಿಕರಗಳನ್ನು ದೇಶದಲ್ಲೇ ಉತ್ಪಾದಿಸಿ ಬೇರೆ ರಾಷ್ಟ್ರಗಳಿಗೂ ರಫ್ತು ಮಾಡುವ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗಿದೆ. ಲಾಕ್‍ಡೌನ್ ಸಂಕಷ್ಟದಿಂದ ದೇಶವನ್ನು ಪಾರುಮಾಡಲು ಪ್ರಧಾನಿ ನರೇಂದ್ರ ಮೋದಿ ₹20 ಲಕ್ಷ ಕೋಟಿ ರೂಪಾಯಿಗಳ ವಿಶೇಷ ಪ್ಯಾಕೇಜ್ ಘೋಷಿಸಿದ್ದಾರೆ,‘ ಎಂದು ವಿವರಿಸಿದರು.

ಬಿಜೆಪಿ ವಕ್ತಾರ ಅಶ್ವತ್ಥ್ ನಾರಾಯಣಗೌಡ ಮಾತನಾಡಿ, ಕೇಂದ್ರದಿಂದ ರಾಜ್ಯಕ್ಕೆ ಬಂದಿರುವ ಅನುದಾನಗಳ ಕುರಿತು ವಿವರ ನೀಡಿದರು. ಬೆಂಗಳೂರು ಮೈಸೂರು ಹೆದ್ದಾರಿಗೆ ₹6200 ಕೋಟಿ ಹಣ ಬಂದಿದೆ. ಬೆಂಗಳೂರು ಕನಕಪುರ ಮಾರ್ಗವಾಗಿ ಕೊಯಮತ್ತೂರು ರಸ್ತೆ ನಿರ್ಮಾಣ, ಬೆಂಗಳೂರು ಮಾಗಡಿ ಮೂಲಕ ಮಡಿಕೇರಿ ಹೆದ್ದಾರಿ ನಿರ್ಮಾಣಕ್ಕೂ ಕೇಂದ್ರ ಅನುದಾನ ನೀಡಿದೆ. ಜಿಲ್ಲೆಯಲ್ಲಿ 2,99,684 ಪಡಿತರ ಕಾರ್ಡುದಾರರಿದ್ದು, ಬಹುತೇಕರು ಬಿಪಿಎಲ್‌ ಕಾರ್ಡ್‌ ಹೊಂದಿದ್ದಾರೆ. ಇವರಿಗೆ 500 ನೀಡಲಾಗಿದೆ.

2018 ಡಿಸೆಂಬರ್ ನಿಂದ 2019 ರ ಮಾರ್ಚ್ ವರೆಗೂ 89,443 ಮಂದಿ ರೈತರು ಪ್ರಯೋಜನ ಪಡೆದಿದ್ದಾರೆ. 1.18 ಲಕ್ಷ ರೈತರಿಗೆ ಕಿಸಾನ್‌ ಸಮ್ಮಾನ್‌ ಹಣ ಸಂದಾಯವಾಗಿದೆ. ಲಾಕ್‌ಡೌನ್‌ ಅವಧಿಯಲ್ಲಿ 19 ಸಾವಿರ ಟನ್‌ನಷ್ಟು ಅಕ್ಕಿ ಕೇಂದ್ರದಿಂದ ಜಿಲ್ಲೆಗೆ ಬಂದಿದೆ ಎಂದು ಮಾಹಿತಿ ನೀಡಿದರು.

ವಿಧಾನ ಪರಿಷತ್‌ ಸದಸ್ಯ ಅ.ದೇವೇಗೌಡ, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುರಳೀಧರ್‌, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರುದ್ರೇಶ್‌ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು