ಶುಕ್ರವಾರ, ನವೆಂಬರ್ 15, 2019
22 °C

ಕೃತಿಗಳ ಅನುವಾದಕ್ಕೆ ಬ್ಯುರೋ ರಚನೆ: ಡಿಸಿಎಂ

Published:
Updated:

ರಾಮನಗರ: ಕನ್ನಡ ಭಾಷೆಯನ್ನು ತಂತ್ರಜ್ಞಾನದ ಮೂಲಕ ಇನ್ನಷ್ಟು ಅಭಿವೃದ್ಧಿ ಪಡಿಸುವ ನಿಟ್ಟಿಯಲ್ಲಿ ‘ಟ್ರಾನ್ಸ್‌ಲೇಷನ್‌ ಬ್ಯುರೋ’ ರಚನೆಗೆ ಚಿಂತನೆ ನಡೆದಿದೆ ಎಂದು ಉಪ ಮುಖ್ಯಮಂತ್ರಿ ಡಾ. ಅಶ್ವತ್ಥ್‌ ನಾರಾಯಣ ಹೇಳಿದರು.

ನಗರದಲ್ಲಿ ಶುಕ್ರವಾರ ಪತ್ರಕರ್ತರ ಜೊತೆ ಮಾತನಾಡಿದ ಅವರು ‘ದೇಶ ವಿದೇಶಗಳ ಪ್ರಮುಖ ಕೃತಿಗಳನ್ನು ಕನ್ನಡಕ್ಕೆ ಭಾಷಾಂತರಿಸಿ ಓದುಗರಿಗೆ ನೀಡಬೇಕು ಎನ್ನುವುದು ಸರ್ಕಾರದ ಆಲೋಚನೆ. ನಮ್ಮದೇ ದೇಶದ ವಿವಿಧ ಭಾಷೆಗಳ ಪ್ರಮುಖ ಕೃತಿಗಳು, ವಿದೇಶಗಳ ಪ್ರಮುಖ ಕೃತಿಗಳನ್ನು, ಜರ್ನಲ್‌ಗಳನ್ನು ಕನ್ನಡಕ್ಕೆ ಅನುವಾದಿಸುವ ಹಾಗೂ ಕನ್ನಡದ ಪ್ರಮುಖ ಕೃತಿಗಳನ್ನು ಬೇರೆ ಭಾಷೆಗಳಿಗೂ ಅನುವಾದಿಸಿ ಪ್ರಕಟಿಸುವ ಆಸೆ ನಮ್ಮದು. ಇದಕ್ಕಾಗಿ ಭಾಷೆ ಮತ್ತು ತಂತ್ರಜ್ಞಾನ ತಜ್ಞರ ಸಮಿತಿಯೊಂದನ್ನು ನೇಮಕ ಮಾಡಿ, ತಂತ್ರಾಂಶವನ್ನು ಅಭಿವೃದ್ಧಿ ಪಡಿಸಲಾಗುವುದು. ಈ ತಂತ್ರಾಶದ ಮೂಲಕ ಮೊಬೈಲ್‌ನಲ್ಲೇ ಪ್ರಕಟಣೆಗಳು, ಇತರೆ ಕೃತಿಗಳನ್ನು ಯಾವುದೇ ವ್ಯಾಕರಣ ದೋಷವಿಲ್ಲದಂತೆ ಓದಿಕೊಳ್ಳುವ ಅವಕಾಶವಿರುತ್ತದೆ’ ಎಂದು ವಿವರಿಸಿದರು.

‘ಇಂಗ್ಲಿಷ್‌ ಬಗೆಗಿನ ವ್ಯಾಮೋಹ ಇಂದು ಕನ್ನಡಕ್ಕೆ ಸವಾಲಾಗಿ ಪರಿಣಮಿಸಿದೆ. ಆದರೆ ಜಪಾನ್ ಜರ್ಮನಿಯಂತಹ ದೇಶಗಳು ತಮ್ಮ ಭಾಷೆಯನ್ನು ಎಂದೂ ಬಿಟ್ಟುಕೊಟ್ಟಿಲ್ಲ. ಅದೇ ರೀತಿ ನಮ್ಮ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ನಾಗಾಭರಣ ಅವರು ಕಾರ್ಯನಿರ್ವಹಿಸುತ್ತಿದ್ದು ಅವರ ಮಾರ್ಗದರ್ಶನದಲ್ಲಿ ಕನ್ನಡವನ್ನು ಮತ್ತಷ್ಟು ಅಭಿವೃದ್ಧಿ ಪಡಿಸುವ ಕೆಲಸ ಮಾಡಲಾಗುತ್ತದೆ. ಆನ್‌ಲೈನ್‌ನಲ್ಲೂ ಸಹ ಕನ್ನಡದಲ್ಲಿಯೇ ವ್ಯವಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದರು.

‘ಕನ್ನಡ ಧ್ವಜಕ್ಕೆ ಸಂಬಂಧಿಸಿದಂತೆ ಅನಗತ್ಯವಾಗಿ ವಿವಾದ ಸೃಷ್ಟಿಸಲಾಗುತ್ತಿದೆ. ಹಿಂದಿನ ವರ್ಷಗಳಲ್ಲಿಯೂ ರಾಜ್ಯೋತ್ಸವ ಸಂದರ್ಭದಲ್ಲಿ ಏಕತೆಯ ಸಂಕೇತವಾಗಿ ರಾಷ್ಟ್ರಧ್ವಜವನ್ನೇ ಹಾರಿಸಲಾಗಿದೆ. ಈ ಬಗ್ಗೆ ಸರ್ಕಾರ ಹೊಸ ಆದೇಶವನ್ನೇನು ಹೊರಡಿಸಿಲ್ಲ’ ಎಂದು ಸ್ಪಷ್ಟನೆ ನೀಡಿದರು.

ಟಿಪ್ಪು ಪಠ್ಯ ಬೇಕು: ‘ಟಿಪ್ಪು ಸುಲ್ತಾನ್ ಬಗೆಗಿನ ಪಠ್ಯಗಳು ಇರಬೇಕು. ಅವರು ಮಾಡಿರುವ ಮತಾಂಧ ಕೆಲಸಗಳು, ಕ್ರೌರ್ಯಗಳು, ಮುಗ್ದ ಜನರನ್ನು ಕೊಂದಿರುವುದು ಸೇರಿದಂತೆ ಎಲ್ಲಾ ವಿಚಾರಗಳು ಪಠ್ಯದಲ್ಲಿ ಇರಬೇಕು ಎಂದು ಒತ್ತಾಯ ಮಾಡುತ್ತೇನೆ. ಈ ವಿಚಾರಗಳನ್ನು ಮತ್ತೆ ಮತ್ತೆ ಜನರಿಗೆ ಹೇಳಬಾಕಾದ ಅನಿವಾರ್ಯತೆಯೂ ಸೃಷ್ಟಿಯಾಗುವುದಿಲ್ಲ’ ಎಂದು ಅವರು ಅಭಿಪ್ರಾಯಪಟ್ಟರು.

‘ಸಿದ್ದಗಂಗಾ ಶ್ರೀಗಳು 111 ವರ್ಷ ಬದುಕಿದ್ದರು. ಹೀಗಾಗಿ ಅವರ ಹುಟ್ಟೂರು ವೀರಾಪುರದಲ್ಲಿ 111 ಅಡಿಯ ಪ್ರತಿಮೆ ಸ್ಥಾಪಿಸಲಾಗುವುದು. ಆದಿಚುಂಚನಗಿರಿಯ ಶ್ರೀಗಳ ಹುಟ್ಟೂರು ಬಾನಂದೂರಿನಲ್ಲಿ ಮ್ಯೂಸಿಯಂ ಇಲ್ಲವೇ ಶಾಲೆ ನಿರ್ಮಿಸಬೇಕೆ ಎಂಬ ಬಗ್ಗೆ ಗ್ರಾಮಸ್ಥರ ಸಲಹೆ ಪಡೆದು ಎರಡೂ ಗ್ರಾಮಗಳನ್ನು ಅಭಿವೃದ್ಧಿ ಪಡಿಸಲಾಗುವುದು’ ಎಂದು ಅವರು ವಿವರಿಸಿದರು.

ತಾಲ್ಲೂಕಿಗೊಂದು ಮೆಡಿಕಲ್‌ ಕಾಲೇಜು ಬೇಕಿಲ್ಲ: ಡಿಸಿಎಂ
ರಾಮನಗರ: ‘ಕನಕಪುರದಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆ ವಿಚಾರದಲ್ಲಿ ಸರ್ಕಾರ ಯಾವುದೇ ರಾಜಕೀಯ ಮಾಡುತ್ತಿಲ್ಲ. ಮೊದಲು ಜಿಲ್ಲಾ ಕೇಂದ್ರಗಳಲ್ಲಿ ಆಗಬೇಕು ಎನ್ನುವುದು ನಮ್ಮ ಆಶಯ’ ಎಂದು ಉಪ ಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ ಹೇಳಿದರು.

' ರಾಜ್ಯದಲ್ಲಿ ಮೊದಲು ಜಿಲ್ಲಾ ಕೇಂದ್ರಗಳಲ್ಲಿ ಮೆಡಿಕಲ್ ಕಾಲೇಜು ಆಗಬೇಕು ಎನ್ನುವುದು ಸರ್ಕಾರದ ಉದ್ದೇಶವಾಗಿದೆ. ರಾಮನಗರದಲ್ಲೂ ಆರೋಗ್ಯ ವಿ.ವಿ. ಕ್ಯಾಂಪಸ್ ಹಾಗೂ ಸಾವಿರ ಹಾಸಿಗೆ ಸಾಮರ್ಥ್ಯ ದ ಮೆಡಿಕಲ್ ಕಾಲೇಜು ಸ್ಥಾಪನೆ ಆಗುತ್ತಿದೆ. ಹೀಗಿರುವಾಗ ಕನಕಪುರಕ್ಕೆ ಸದ್ಯ ಮೆಡಿಕಲ್ ಕಾಲೇಜಿನ ಅಗತ್ಯ ಇಲ್ಲ. ಆದರೆ ಡಿ.ಕೆ. ಶಿವಕುಮಾರ್ ಅಧಿಕಾರದಲ್ಲಿ ಇದ್ದಾಗ ತಮ್ಮ ತಾಲ್ಲೂಕಿಗೆ ಮೆಡಿಕಲ್ ಕಾಲೇಜು ನೀಡಿದ್ದರು. ಈಗ ಹೋರಾಟ ಮಾಡಿದರೆ ಅದು ಅವರ ವೈಯಕ್ತಿಕ ಅಷ್ಟೇ ಎಂದು ಸಮಜಾಯಿಷಿ ನೀಡಿದರು.

‘ರಾಜ್ಯದ 24 ಜಿಲ್ಲೆಗಳಲ್ಲಿ ಈಗ ಮೆಡಿಕಲ್ ಕಾಲೇಜುಗಳಿವೆ. ಒಂದು ಕಾಲೇಜು ಸ್ಥಾಪನೆಗೆ ₨600–-800 ಕೋಟಿ ರೂಪಾಯಿ ಅನುದಾನ ಬೇಕು. ಹೀಗಾಗಿ ಸದ್ಯ ತಾಲ್ಲೂಕುಗಳಲ್ಲಿ ಕಾಲೇಜು ತೆರೆಯಲು ಆಗದು ಎಂದರು.

‘ನಾಲ್ಕು ಜಿಲ್ಲಾ ಕೇಂದ್ರಗಳಲ್ಲಿ ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ಅನುಮತಿ ದೊರೆತಿದೆ. ಸುಧಾಕರ್ ಇದ್ದಾರೆ ಎಂಬ ಕಾರಣಕ್ಕೆ ಹೊಸತಾಗಿ ಅನುಮತಿ ನೀಡುತ್ತಿಲ್ಲ’ ಎಂದು ಸಮಜಾಯಿಷಿ ನೀಡಿದರು.

ನಮ್ಮ ಮೇಲೇ ದೌರ್ಜನ್ಯ

‘ಕನಕಪುರದಲ್ಲಿ ಯಾವ ಕಾಂಗ್ರೆಸ್ ಕಾರ್ಯಕರ್ತರ ಮೇಲೂ ಪೊಲೀಸರು ಅನವಶ್ಯಕವಾಗಿ ಪ್ರಕರಣ ದಾಖಲಿಸಿಲ್ಲ. ಕನಕಪುರದಲ್ಲಿ ನಮ್ಮ ಕಾರ್ಯಕರ್ತರಿಗೇ ರಕ್ಷಣೆ ಇಲ್ಲದಂತೆ ಆಗಿದೆ. ಬಿಜೆಪಿ ಜನರ ಮೇಲೆಯೇ ದೌರ್ಜನ್ಯ, ದಬ್ಬಾಳಿಕೆ ನಡೆಯುತ್ತಿದೆ’ ಎಂದು ದೂರಿದರು.

ಪ್ರತಿಕ್ರಿಯಿಸಿ (+)