ಸೋಮವಾರ, ಆಗಸ್ಟ್ 19, 2019
24 °C
ಕೆ.ಪಿ. ದೊಡ್ಡಿ ಸರ್ಕಾರಿ ಶಾಲೆ ದತ್ತು ಸ್ವೀಕಾರ ಕಾರ್ಯಕ್ರಮ

‘ಸರ್ಕಾರಿ ಶಾಲೆ ಬಗೆಗಿನ ಕೀಳರಿಮೆ ಬಿಡಿ’

Published:
Updated:
Prajavani

ರಾಮನಗರ: ಪೋಷಕರು ಸರ್ಕಾರಿ ಶಾಲೆಗಳ ಬಗ್ಗೆ ಕೀಳರಿಮೆಯನ್ನು ಬಿಡಬೇಕು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ.ಎನ್. ನಾಗರಾಜ್ ಹೇಳಿದರು.

ಶಾಂತಲಾ ಚಾರಿಟಬಲ್ ಟ್ರಸ್ಟ್ 'ನಮ್ಮೂರ ಶಾಲೆ- ನಮ್ಮ ಶಕ್ತಿ' ಎಂಬ ಧ್ಯೇಯ ವಾಕ್ಯದಡಿಯಲ್ಲಿ ಇಲ್ಲಿನ ಕೃಷ್ಣಾಪುರದೊಡ್ಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ದತ್ತು ತೆಗೆದುಕೊಂಡ ಸಮಾರಂಭವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು. ಖಾಸಗಿ ವಿದ್ಯಾಸಂಸ್ಥೆಗಳು ಪೋಷಕರ ರಕ್ತವನ್ನು ಅವರಿಗೆ ಗೊತ್ತಾಗದ ರೀತಿಯಲ್ಲಿ ಹೀರುತ್ತಿವೆ. ಪೋಷಕರು ಇನ್ನು ಮುಂದಾದರೂ ಎಚ್ಚೆತ್ತುಕೊಂಡು ಗುಣಾತ್ಮಕ ಶಿಕ್ಷಣ ನೀಡುತ್ತಿರುವ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ದಾಖಲಿಸಬೇಕು ಎಂದು ತಿಳಿಸಿದರು.

ಹಿರಿಯ ಗಾಂಧಿವಾದಿ ಎಲ್. ನರಸಿಂಹಯ್ಯ ಮಾತನಾಡಿ, 1 ರಿಂದ 10ನೇ ತರಗತಿವರೆಗೂ ಮಕ್ಕಳಿಗೆ ಮಾತೃಭಾಷೆಯಲ್ಲಿಯೇ ಶಿಕ್ಷಣ ನೀಡಬೇಕು. ಇದರಿಂದ ಅವರಲ್ಲಿನ ಸೃಜನಾತ್ಮಕ ಶಕ್ತಿ ಬೆಳೆಯಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.

ಶಿಕ್ಷಣ ಪಡೆದವರು ಸಮಾಜಮುಖಿಗಳಾಗಿ ಚಿಂತಿಸಿ, ಕಾರ್ಯ ನಿರ್ವಹಿಸಬೇಕು. ಇಂದು ವಿದ್ಯೆ ಕಲಿತವರು ಅನಕ್ಷರಸ್ಥರಿಗಿಂತ ಕಡೆಯಾಗಿ ನಡೆದುಕೊಳ್ಳುತ್ತಿದ್ದಾರೆ. ಅವರು ತಾನು, ತನ್ನದು ಎಂಬಂತೆ ಜೀವಿಸುತ್ತಿದ್ದ ಸಾಮಾಜಿಕ ಕಳಕಳಿಯನ್ನು ಮರೆಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಶಾಂತಲಾ ಚಾರಿಟಬಲ್ ಟ್ರಸ್ಟ್ ಸರ್ಕಾರಿ ಶಾಲೆಯನ್ನು ದತ್ತು ತೆಗೆದಕೊಂಡ ಅಭಿವೃದ್ಧಿಪಡಿಸುವ ಮೂಲಕ ಇತರೆ ಸಂಘಸಂಸ್ಥೆಗಳಿಗೆ ಮಾದರಿಯಾಗಿದೆ ಎಂದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಗಾಣಕಲ್ ನಟರಾಜ್ ಮಾತನಾಡಿ, ಪ್ರಸ್ತುತ ಸಂದರ್ಭದಲ್ಲಿ ಸೇವಾಮನೋಭಾವ ಕಡಿಮೆಯಾಗುತ್ತಿರುವುದು ಶೋಚನೀಯ ಸಂಗತಿಯಾಗಿದೆ. ಅಧಿಕಾರಿಗಳು ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು ಇಲಾಖೆಯ ಜತೆ ಸೇರಿ ಸಮಾಜಮುಖಿ ಕೆಲಸಗಳನ್ನು ಮಾಡಲು ಮುಂದಾದಾಗ ಸಮರ್ಪಕವಾಗಿ ಸ್ಪಂದಿಸಬೇಕು. ಶಾಲೆಗಳಲ್ಲಿ ಪ್ಲಾಸ್ಟಿಕ್ ವಸ್ತುಗಳನ್ನು ಬಳಸಬಾರದು ಎಂದು ತಿಳಿಸಿದರು.

ಶಾಂತಲಾ ಚಾರಿಟಬಲ್ ಟ್ರಸ್ಟಿನ ಸಂಸ್ಥಾಪಕ ಕಾರ್ಯದರ್ಶಿ ಕವಿತಾ ರಾವ್ ಮಾತನಾಡಿ ಟ್ರಸ್ಟಿನ ಮೂಲಕ 14 ವರ್ಷಗಳಿಂದ ಸಾಂಸ್ಕೃತಿಕ, ಸೇವಾ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರಲಾಗುತ್ತಿದೆ. ಈಗ ಸರ್ಕಾರಿ ಶಾಲೆಯನ್ನು ದತ್ತು ತೆಗೆದುಕೊಂದು ₨5 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ, ಮುಂದೆಯೂ ಅಭಿವೃದ್ಧಿ ಪಡಿಸಲಾಗುತ್ತದೆ. ಈ ಶಾಲೆಗೆ ನಾಲ್ಕು ವರ್ಷಗಳಿಂದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪರಿಕರಗಳನ್ನು ಉಚಿತವಾಗಿ ನೀಡಲಾಗುತ್ತಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ವಿದ್ಯಾರ್ಥಿನಿಯರಾದ ಬಿ.ಆರ್. ಜ್ಞಾನವಿ ರಾಜ್, ಆರ್. ನಿತ್ಯಶ್ರೀ ಭರತನಾಟ್ಯ ಪ್ರದರ್ಶಿಸಿದರು. ಗಾಯಕರಾದ ಹೊನ್ನಿಗಾನಹಳ್ಳಿ ಸಿದ್ದರಾಜು, ರಘು ಮತ್ತು ತಂಡದವರು ಗೀತಗಾಯನ ನಡೆಸಿಕೊಟ್ಟರು. ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪರಿಕರಗಳನ್ನು ವಿತರಿಸಲಾಯಿತು.

ಜಿಲ್ಲಾ ಪಂಚಾಯಿತಿ ಸದಸ್ಯ ಎಚ್.ಕೆ. ನಾಗರಾಜು, ಶಿಕ್ಷಣ ಇಲಾಖೆಯ ಕ್ಷೇತ್ರ ಸಮನ್ವಯಾಧಿಕಾರಿ ಜಿ.ಎಸ್. ಸಂಪತ್ ಕುಮಾರ್, ಶಿಕ್ಷಣ ಸಂಯೋಜಕ ಗೋವಿಂದಸ್ವಾಮಿ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸಿಂ.ಲಿಂ. ನಾಗರಾಜ್, ರೈತಪರ ಹೋರಾಟಗಾರ್ತಿ ಅನಸೂಯಮ್ಮ, ಬರಹಗಾರ ತ್ಯಾಗರಾಜ, ಎಸ್‌ಡಿಎಂಸಿ ಸಮನ್ವಯ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಬಿ. ಗೋಪಾಲ್, ಲಂಚಮುಕ್ತ ಕರ್ನಾಟಕ ವೇದಿಕೆಯ ಸಂಚಾಲಕ ಅರುಣ್ ಕುಮಾರ್, ಶಾಂತಲಾ ಚಾರಿಟಬಲ್ ಟ್ರಸ್ಟಿನ ಅಧ್ಯಕ್ಷ ಶಿವಾಜಿ ರಾವ್, ನಾಗೇಂದ್ರರಾವ್, ದತ್ತು ಶಾಲೆಯ ಸಂಯೋಜಕಿ ಚಿತ್ರಾ ರಾವ್, ಶಾಲೆಯ ಮುಖ್ಯಶಿಕ್ಷಕಿ ನಾಗರತ್ನಮ್ಮ ಇದ್ದರು.

**
ಸರ್ಕಾರಿ ಶಾಲೆಗಳನ್ನು ಮುಚ್ಚಲು ಪೋಷಕರೇ ಕಾರಣ. ಭ್ರಮೆಗೆ ಒಳಗಾಗಿ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುತ್ತಿದ್ದಾರೆ
- ಎಲ್‌. ನರಸಿಂಹಯ್ಯ, ಗಾಂಧಿವಾದಿ

Post Comments (+)