ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇತನ ಅನುದಾನ ಬಿಡುಗಡೆಗೆ ಒತ್ತಾಯ

ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದಿಂದ ಪ್ರತಿಭಟನೆ
Last Updated 24 ಫೆಬ್ರುವರಿ 2020, 14:10 IST
ಅಕ್ಷರ ಗಾತ್ರ

ರಾಮನಗರ: ಸಿಬ್ಬಂದಿಯ ವೇತನ ಪಾವತಿಗೆ ಅಗತ್ಯ ಇರುವ ₨382 ಕೋಟಿ ಅನುದಾನವನ್ನು ಮುಂಬರುವ ಬಜೆಟ್‌ನಲ್ಲಿ ಬಿಡುಗಡೆ ಮಾಡುವಂತೆ ಆಗ್ರಹಿಸಿ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ಜಿಲ್ಲಾ ಘಟಕದ ವತಿಯಿಂದ ಇಲ್ಲಿನ ಜಿಲ್ಲಾ ಪಂಚಾಯಿತಿ ಭವನದ ಎದುರು ಸೋಮವಾರ ಪ್ರತಿಭಟನೆ ನಡೆಯಿತು.

‘ಎರಡು ವರ್ಷಗಳಿಂದ ಗ್ರಾಮ ಪಂಚಾಯಿತಿ ನೌಕರರ ವೇತನ ಪಾವತಿಗೆ ಬೇಕಾಗಿರುವ ಹಣವನ್ನು ಸರ್ಕಾರವೇ ಭರಿಸುವ ತೀರ್ಮಾನ ಮಾಡಿರುವುದು ಸ್ವಾಗತಾರ್ಹ. ರಾಜ್ಯದ 6025 ಗ್ರಾಮ ಪಂಚಾಯಿತಿಗಳಲ್ಲಿ ಕೆಲಸ ನಿರ್ವಹಿಸುತ್ತಿರುವ 65 ಸಾವಿರ ಸಿಬ್ಬಂದಿಗೆ ₨900 ಕೋಟಿ ಹಣ ಬೇಕಾಗಿದೆ ಎಂದು ಅಂದಾಜಿಸಲಾಗಿದೆ. ಇದರಲ್ಲಿ ₨518 ಕೋಟಿ ಮಾತ್ರ ಹಣಕಾಸು ಇಲಾಖೆ ಮಂಜೂರಾತಿ ನೀಡಿದೆ’ ಎಂದು ತಿಳಿಸಿದರು.

‘2 ವರ್ಷಗಳಿಂದ ಸಿಬ್ಬಂದಿ ವೇತನ ಬಾಕಿ ಉಳಿದಿದೆ. 3 ತಿಂಗಳಿಗೊಮ್ಮೆ ಬಿಡುಗಡೆಯಾದ ಕಂತಿನ ಹಣದಲ್ಲಿ ಎರಡು ತಿಂಗಳ ವೇತನಕ್ಕಾಗಿ ಹಣ ಮಾತ್ರ ಸಾಕಾಗುತ್ತದೆ. 8 ತಿಂಗಳ ಬಾಕಿಯಿದೆ. ಸಮಯಕ್ಕೆ ಸರಿಯಾಗಿ ವೇತನ ಸಿಗದೇ ಬಾದಾಮಿ ತಾಲ್ಲೂಕಿನಲ್ಲಿ ಒಬ್ಬರು, ಚಿಂತಾಮಣಿ ತಾಲ್ಲೂಕಿನಲ್ಲಿ ಒಬ್ಬರು ಗ್ರಾಮ ಪಂಚಾಯಿತಿ ಸಿಬ್ಬಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಈ ವಿಷಯವನ್ನು ಸರ್ಕಾರದ ಗಮನಕ್ಕೆ ತಂದಾಗ ತುರ್ತು ಸಭೆ ನಡೆಸಿ 14ನೇ ಹಣಕಾಸು ಆಯೋಗದ ಶೇ 10 ರಷ್ಟು ಆಡಳಿತ ವೆಚ್ಚದ ಹಣವನ್ನು ವೇತನಕ್ಕೆ ಬಳಸಿಕೊಳ್ಳಲು ಆದೇಶಿಸಲಾಗಿದೆ. ಬಹುತೇಕ ಜಿಲ್ಲೆಗಳಲ್ಲಿ ವೇತನ ಪಾವತಿ ಮಾಡುತ್ತಿಲ್ಲ. ರಾಮನಗರ ಮತ್ತು ಬೀದರ್ ಜಿಲ್ಲೆಯಲ್ಲಿ ಗ್ರಾಮೀಣಾಭಿವೃದ್ಧಿ ಸಚಿವರು ಸೋಲಾರ್ ದೀಪಗಳಿಗೆ ಹಣ ಬಳಸಿಕೊಳ್ಳಲು ಆದೇಶಿಸಿರುವುದರಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ’ ಎಂದು ತಿಳಿಸಿದರು.

‘ಹಣಕಾಸು ಇಲಾಖೆಯಿಂದ ಹಣ ತರಿಸಿಕೊಳ್ಳಲು ಸರ್ಕಾರ ಈಗಾಗಲೇ ಸಭೆ ನಡೆಸಿ ಹಣಕಾಸು ಇಲಾಖೆಗೆ ಪ್ರಸ್ತಾವ ಸಲ್ಲಿಸಲು ಸೂಚಿಸಲಾಗಿದೆ. ಬೇರೆಬೇರೆ ಕಾರಣಗಳ ನೆಪಗಳನ್ನು ಒಡ್ಡಿ ಇನ್ನು 15 ಸಾವಿರ ಸಿಬ್ಬಂದಿಯನ್ನು ಇಎಫ್ಎಂಎಸ್ ಗೆ ಸೇರಿಸದೇ ಇರುವುದರಿಂದ ತೀವ್ರ ತೊಂದರೆಯಾಗಿದೆ. ಆದ್ದರಿಂದ ಇಎಫ್ಎಂಎಸ್ ಗೆ ಸೇರಿಸಲು ಸೂಕ್ತ ಕ್ರಮ ಕೈಗೊಂಡು ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿ 2020–-2021 ನೇ ಬಜೆಟ್ ನಲ್ಲಿ ₨382 ಕೋಟಿ ಮಂಜೂರು ಮಾಡಬೇಕು’ ಎಂದು ಒತ್ತಾಯಿಸಿದರು.

ಇತರ ಬೇಡಿಕೆಗಳು: ‘ಕಂಪ್ಯೂಟರ್ ಆಪರೇಟರ್ ಗಳಿಗೆ ಬಡ್ತಿ ನೀಡಲು ವೃಂದ ಮತ್ತು ನೇಮಕಾತಿಗಳಿಗೆ ತಿದ್ದುಪಡಿ ಮಾಡಬೇಕು. ಕರ ವಸೂಲಿಗಾರ ಮತ್ತು ಕಂಪ್ಯೂಟರ್ ಆಪರೇಟರ್ ಕೋಟವನ್ನು ಶೇ 70 ರಿಂದ 100ಕ್ಕೆ ಹೆಚ್ಚಿಸಬೇಕು. ಲೆಕ್ಕ ಸಹಾಯಕ ಹುದ್ದೆಗಳ ಕೋಟಾ ಶೇ 30 ರಿಂದ 50ಕ್ಕೆ ಹೆಚ್ಚಿಸಬೇಕು. ಎಲ್ಲಾ ಸಿಬ್ಬಂದಿಗೆ ನಿವೃತ್ತಿ ವೇತನ ಯೋಜನೆ, ವೈದ್ಯಕೀಯ ವೆಚ್ಚ ಸಿಗುವಂತಾಗಬೇಕು ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಇಕ್ರಂ ಅವರಿಗೆ ಮನವಿ ಸಲ್ಲಿಸಲಾಯಿತು. ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಪ್ರದೀಪ, ತಾಲ್ಲೂಕು ಘಟಕದ ಅಧ್ಯಕ್ಷೆ ನಾಗಮ್ಮ, ಕಾರ್ಯದರ್ಶಿ ಜಯಶಂಕರ್, ಪದಾಧಿಕಾರಿಗಳಾದ ರಾಜಶೇಖರ್, ನಾರಾಯಣ, ಶಿವಸ್ವಾಮಿ, ಪರಶಿವಮೂರ್ತಿ, ಸುರೇಶ್, ನಾಗರಾಜು, ದೇವರಾಜು, ಪ್ರವೀಣ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT