ಮಂಗಳವಾರ, ಜನವರಿ 26, 2021
28 °C
ಹೊಸ ವರ್ಷದಂದೇ ತೆರೆಯಿತು ಶಾಲೆಗಳ ಬಾಗಿಲು; ಕೋವಿಡ್‌ ನಿಯಮ ಪಾಲನೆ

ರಾಮನಗರ: ಲವಲವಿಕೆಯಿಂದ ಶಾಲೆಗೆ ಬಂದ ಚಿಣ್ಣರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ಸುಮಾರು ಒಂಭತ್ತು ತಿಂಗಳ ಬಳಿಕ ಜಿಲ್ಲೆಯ ಶಾಲೆ–ಪಿಯು ಕಾಲೇಜುಗಳ ಬಾಗಿಲು ತೆರೆದಿದ್ದು, ಹೊಸ ವರ್ಷದ ಮೊದಲ ದಿನದಂದೇ ವಿದ್ಯಾರ್ಥಿಗಳು ಪ್ರವೇಶ ಮಾಡಿದರು.

ಕೋವಿಡ್‌ ವೈರಸ್‌ ಹಾವಳಿ ಭೀತಿಯ ಬಳಿಕ ಮೊದಲ ಬಾರಿಗೆ ತರಗತಿಗಳ ಒಳಗೆ ಕಾಲಿಟ್ಟ ವಿದ್ಯಾರ್ಥಿಗಳನ್ನು ಶಿಕ್ಷಕರು ಆತ್ಮೀಯವಾಗಿ ಬರಮಾಡಿಕೊಂಡರು. ಹಲವು ಕಡೆಗಳಲ್ಲಿ ಶಾಲೆಗಳನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಶಾಲೆಗೆ ಬಂದ ಪ್ರತಿ ವಿದ್ಯಾರ್ಥಿಗೂ ಶಿಕ್ಷಕರು ಗುಲಾಬಿ ಹೂ ನೀಡಿ ಸ್ವಾಗತ ಕೋರಿದರು. ಸರ್ಕಾರಿ ಶಾಲೆಗಳ ಜೊತೆಗೆ ಅನುದಾನಿತ, ಅನುದಾನ ರಹಿತ ಶಾಲೆಗಳಲ್ಲೂ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿತ್ತು. ಕೆಲವು ಖಾಸಗಿ ಶಾಲೆಗಳಲ್ಲಿ ಸೋಂಕು ನಿವಾರಣಾ ಸುರಂಗಗಳನ್ನು ಸಹ ನಿರ್ಮಿಸಲಾಗಿತ್ತು.

ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಮೊದಲ ದಿನದಂದು ತರಗತಿಗಳು ನಡೆದವು. 6ರಿಂದ 9ನೇ ತರಗತಿಯ ಮಕ್ಕಳಿಗೆ ವಿದ್ಯಾಗಮ ಯೋಜನೆ ಅಡಿ ತರಗತಿಗಳು ನಡೆದವು. ಡಿಡಿಪಿಐ. ಬಿಇಒ, ಸಿಆರ್‌ಪಿಗಳ ಸಹಿತ ಶಿಕ್ಷಣ ಇಲಾಖೆ ಅಧಿಕಾರಿಗಳ ತಂಡವು ಶಾಲೆಗಳಿಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳನ್ನು ಖಾತ್ರಿಪಡಿಸಿಕೊಂಡಿತು. ಮೊದಲ ದಿನವೇ ಶೇ 60–70 ವಿದ್ಯಾರ್ಥಿಗಳು ಶಾಲೆಗೆ ಬಂದಿದ್ದಾಗಿ ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದರು.

ಪೂರ್ವ ಸಿದ್ಧತೆ: ಕಳೆದೊಂದು ವಾರದಿಂದಲೂ ಶಾಲೆ ಆರಂಭಕ್ಕೆ ಅಧಿಕಾರಿಗಳು, ಶಿಕ್ಷಕರು ಸಿದ್ಧತೆ ಮಾಡಿಕೊಂಡಿದ್ದರು. ಸಾಕಷ್ಟು ಮುಂಚೆಯೇ ಶಾಲೆಗಳ ಆವರಣವನ್ನು ಸ್ವಚ್ಛಗೊಳಿಸಲಾಗಿತ್ತು. ಬಹುತೇಕ ಕಡೆ ಕೊಠಡಿಗಳನ್ನು ಸ್ಯಾನಿಟೈಸ್‌ ಸಹ ಮಾಡಲಾಗಿತ್ತು. ಶುಕ್ರವಾರ ಶಾಲೆಗೆ ಬಂದ ಪ್ರತಿ ವಿದ್ಯಾರ್ಥಿಯ ದೇಹದ ಉಷ್ಣತೆ ತಪಾಸಣೆ ನಡೆಯಿತು. ಪ್ರವೇಶ ದ್ವಾರದಲ್ಲಿಯೇ ಅವರಿಗೆ ಸ್ಯಾನಿಟೈಸರ್‌ ನೀಡಲಾಯಿತು. ಪ್ರತಿಯೊಬ್ಬರು ಮಾಸ್ಕ್‌ ತೊಟ್ಟು ಒಳಗೆ ಬಂದಿದ್ದರು.

‘ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ತರಗತಿ ಪಾಠಗಳು ಹಾಗೂ 6ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ವಿದ್ಯಾಗಮ ಯೋಜನೆ ಅಡಿ ತರಗತಿಗಳನ್ನು ನಡೆಸಲಾಯಿತು. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚು ಇರುವ ಕಡೆ ಎರಡೆರಡು ತಂಡಗಳನ್ನು ಮಾಡಿಕೊಳ್ಳಲಾಗಿತ್ತು. ಪರಸ್ಪರ ದೈಹಿಕ ಅಂತರ ಕಾಪಾಡಿಕೊಂಡು, ಕೋವಿಡ್ ನಿಯಮಗಳಿಗೆ ಅನುಸಾರವಾಗಿ ತರಗತಿಗಳು ನಡೆದವು’ ಎಂದು ರಾಮನಗರ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎನ್. ಮರಿಗೌಡ ತಿಳಿಸಿದರು.

ಶಿಕ್ಷಕರಿಗೆ ಕೋವಿಡ್‌ ಪರೀಕ್ಷೆ

ತರಗತಿ ಆರಂಭಕ್ಕೂ ಮುನ್ನ ಶಿಕ್ಷಕರು ಕೋವಿಡ್‌ ಪರೀಕ್ಷೆಗೆ ಒಳಗಾಗುವುದನ್ನು ಶಿಕ್ಷಣ ಇಲಾಖೆಯು ಕಡ್ಡಾಯಗೊಳಿಸಿದೆ. ನೆಗೆಟಿವ್‌ ಪ್ರಮಾಣಪತ್ರ ಇದ್ದವರಷ್ಟೇ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚನೆ ನೀಡಿದೆ. ‘ಶೇ 90ರಷ್ಟು ಶಿಕ್ಷಕರು ಈಗಾಗಲೇ ಪರೀಕ್ಷೆಗೆ ಒಳಗಾಗಿದ್ದಾರೆ. ಉಳಿದವರು ಶುಕ್ರವಾರ ಪರೀಕ್ಷೆ ಮಾಡಿಸಿದ್ದಾರೆ. ಎಲ್ಲರ ಫಲಿತಾಂಶಗಳೂ ನೆಗಟಿವ್‌ ಆಗಿವೆ’ ಎಂದು ಬಿಇಒ ಮರಿಗೌಡ ತಿಳಿಸಿದರು.

ಸದ್ಯಕ್ಕಿಲ್ಲ ಬಿಸಿಯೂಟ

ಶಾಲೆಗಳು ಆರಂಭ ಆಗಿದ್ದರೂ ಸರ್ಕಾರಿ, ಅನುದಾನಿತ ಶಾಲೆಗಳ ಮಕ್ಕಳಿಗೆ ಸದ್ಯಕ್ಕೆ ಬಿಸಿಯೂಟ ಪೂರೈಕೆ ಇಲ್ಲ. ಕೋವಿಡ್‌ ಹಿನ್ನಲೆಯಲ್ಲಿ ಶಾಲೆಗಳಲ್ಲಿ ಬಿಸಿಯೂಟ ತಯಾರಿಗೆ ಇನ್ನೂ ಸರ್ಕಾರ ಇನ್ನೂ ಅನುಮತಿ ನೀಡಿಲ್ಲ. ಹೀಗಾಗಿ ಮಕ್ಕಳಿಗೆ ಇನ್ನಷ್ಟು ದಿನ ಕಾಲ ಧಾನ್ಯದ ರೂಪದಲ್ಲಿಯೇ ಆಹಾರ ಸಾಮಗ್ರಿ ಸರಬರಾಜು ಆಗಲಿದೆ.

* ಮೊದಲ ದಿನದಂದು ಶೇ 60–70 ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಕೋವಿಡ್‌ ನಿಯಮ ಅನುಸರಿಸಿಕೊಂಡು ತರಗತಿಗಳು ನಡೆದಿವೆ

–ಮರಿಗೌಡ, ಬಿಇಒ, ರಾಮನಗರ

* ಆನ್‌ಲೈನ್‌ ಕ್ಲಾಸ್‌ನಲ್ಲಿ ಕೆಲವು ಗೊಂದಲ ಇತ್ತು. ಶಾಲೆಯಲ್ಲಿ ಪಾಠ ಕೇಳಿಸಿಕೊಳ್ಳುವುದು ನನಗಿಷ್ಟ. ಹೀಗಾಗಿ ಇಲ್ಲಿಗೆ ಬಂದಿದ್ದೇನೆ.

– ಕುಸುಮಾ, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ

* ಮನೆಯಲ್ಲಿ ಎಷ್ಟೇ ಓದಿದರೂ ಏಕಾಗ್ರತೆ ಇರುವುದಿಲ್ಲ. ಕಲಿಕೆಗೆ ಶಾಲೆ ವಾತಾವರಣವೇ ಉತ್ತಮ.ಹೀಗಾಗಿ ಮೊದಲ ದಿನವೇ ಶಾಲೆಗೆ ಬಂದಿದ್ದೇನೆ.

– ಇಂಪನಾ, 9ನೇ ತರಗತಿ ವಿದ್ಯಾರ್ಥಿನಿ

* ಶಾಲೆಗಳಲ್ಲಿ ಎಲ್ಲ ರೀತಿಯ ಸುರಕ್ಷತಾ ಕ್ರಮಗಳನ್ನು ಅನುರಿಸುತ್ತಿದ್ದೇವೆ. ಮಕ್ಕಳ ಆರೋಗ್ಯದ ಜವಾಬ್ದಾರಿ ನಮ್ಮದು. ದಯವಿಟ್ಟು ಎಲ್ಲರನ್ನೂ ಶಾಲೆಗೆ ಕಳುಹಿಸಿ.

–ಜ್ಯೋತಿ, ಗಣಿತ ಶಿಕ್ಷಕಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು