ಬುಧವಾರ, ಜುಲೈ 28, 2021
21 °C

ತಂದೆ, ಅಜ್ಜಿ ಸಾವು; ತಾತನೇ ಈ ಕುಟುಂಬಕ್ಕೀಗ ಆಸರೆ- ಹೆಣ್ಣುಮಕ್ಕಳ ಬದುಕು ಅತಂತ್ರ

ಬರಡನಹಳ್ಳಿ ಕೃಷ್ಣಮೂರ್ತಿ Updated:

ಅಕ್ಷರ ಗಾತ್ರ : | |

Prajavani

ಕನಕಪುರ: ಜನ್ಮಕ್ಕೆ ಕಾರಣರಾದ ತಂದೆ, ಮೊಮ್ಮಕ್ಕಳಿಗೆ ಆಸರೆಯಾಗಿದ್ದ ಅಜ್ಜಿ ಒಂದೇ ದಿನದಲ್ಲಿ ಕೋವಿಡ್‌ಗೆ ಬಲಿಯಾಗಿದ್ದು, ಇಬ್ಬರು ಹೆಣ್ಣುಮಕ್ಕಳ ಬದುಕು ಅನಾಥವಾಗಿದೆ. ಸುಂದರವಾಗಿ ಬದುಕು ಕಟ್ಟಿಕೊಳ್ಳಬೇಕಿದ್ದ ಕನಸು ಹೊತ್ತಿದ್ದವರ ಮನೆಯಲ್ಲೀಗ ಕತ್ತಲೆ ಆವರಿಸಿದೆ.

ತಾಲ್ಲೂಕಿನ ಕೋಡಿಹಳ್ಳಿ ಹೋಬಳಿಯ ಹೇರಿಂದ್ಯಾಪನಹಳ್ಳಿ ಗ್ರಾಮದ ಸಣ್ಣಮ್ಮ ಹಾಗೂ ಅವರ ಪುತ್ರ ಪುಟ್ಟರಾಜು ಮೇ 10ರಂದು ಕೋವಿಡ್‌ನಿಂದ ನಿಧನ
ರಾಗಿದ್ದಾರೆ.

ಇದೀಗ ಅವರ ಕುಟುಂಬಕ್ಕೆ ಹಿರಿಯರಾದ ಪುಟ್ಟಯ್ಯ (ತಾತಾ) ಒಬ್ಬರೇ ಆಧಾರವಾಗಿದ್ದಾರೆ. ಅವರಿಗೂ ವಯಸ್ಸಾಗಿದ್ದು, ಹೊರಗೆ ಹೋಗಿ ದುಡಿಯುವಷ್ಟು ಶಕ್ತಿ ಇಲ್ಲ. ಹೀಗಾಗಿ ಮಕ್ಕಳಾದ ಮಾನಸ (17) ಮತ್ತು ಅನುಷಾ (15) ಬದುಕು ಬೀದಿಗೆ ಬೀಳುವ ಹಂತದಲ್ಲಿದೆ.

ಬಾಲ್ಯದಲ್ಲೇ ಈ ಮಕ್ಕಳಿಂದ ತಾಯಿ ದೂರವಾದರು. ನಂತರದಲ್ಲಿ ತಂದೆ ಮತ್ತೊಂದು ವಿವಾಹವಾದ ಕಾರಣ ಮಕ್ಕಳ ಜೊತೆ ಹೆಚ್ಚು ಸಖ್ಯ ಇರಲಿಲ್ಲ. ಹೀಗಾಗಿ, ಅಜ್ಜ–ಅಜ್ಜಿಯೇ ಈ ಮಕ್ಕಳನ್ನು ಸಾಕುತ್ತ ಬಂದಿದ್ದರು. ಹೀಗಿರುವಾಗ ಮೇ ತಿಂಗಳ ಆರಂಭದಲ್ಲಿ ಅಜ್ಜಿಗೆ ಜ್ವರ ಕಾಣಿಸಿಕೊಂಡಿದ್ದು, ನಂತರದಲ್ಲಿ ಕೋವಿಡ್‌ ದೃಢಪಟ್ಟು ಆಸ್ಪತ್ರೆಗೆ ದಾಖಲಾಗಿದ್ದರು. ಬಾಲಕಿಯರ ತಂದೆಗೂ ಸೋಂಕು ದೃಢಪಟ್ಟಿತ್ತು. ಕೇವಲ ಒಂದು ದಿನದ ಅಂತರದಲ್ಲಿ ತಾಯಿ–ಮಗ ಇಬ್ಬರೂ ಸೋಂಕಿನಿಂದ ನಿಧನರಾದರು.

ಈ ಮಕ್ಕಳ ಕುಟುಂಬಕ್ಕೆ ಅಜ್ಜಿಯೇ ಆಧಾರ ಆಗಿದ್ದು, ಕೂಲಿ ಮಾಡಿ ತಮ್ಮ ಇಬ್ಬರು ಮೊಮ್ಮಕ್ಕಳಿಗೆ ಶಿಕ್ಷಣ ಕೊಡಿಸಿದ್ದರು.

ಅನುಷಾ ಎಸ್ಸೆಸ್ಸೆಲ್ಸಿಯಲ್ಲಿ 564 ಅಂಕ ಗಳಿಸಿದ್ದು ಕೋವಿಡ್‌ ಕಾರಣಕ್ಕೆ ಕಾಲೇಜಿಗೆ ದಾಖಲಾಗಿರಲಿಲ್ಲ. ಮಾನಸ ಎಸ್ಸೆಸ್ಸೆಲ್ಸಿಯಲ್ಲಿ 419 ಅಂಕ ಗಳಿಸಿ ಕೋಡಿಹಳ್ಳಿ ಗೌರಮ್ಮ ಕೆಂಪೇಗೌಡ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯು ಉತ್ತೀರ್ಣರಾಗಿದ್ದು, ದ್ವಿತಿಯ ಪಿಯುಗೆ ದಾಖಲಾಗಬೇಕಿದೆ.

ಕಡು ಬಡತನ: ಈ ಕುಟುಂಬಕ್ಕೆ ಸ್ವಂತ ಜಮೀನು ಇಲ್ಲ. ಕುಟುಂಬಕ್ಕೆ ಸೇರಿದ 30 ಅಡಿ ನಿವೇಶನದಲ್ಲಿ ನಾಲ್ಕು ಭಾಗ ಮಾಡಿದ್ದು ಸದ್ಯ ಅಜ್ಜಿ ತಾತನಿಗೆ ಬಂದಿದ್ದ 8X10 ಅಡಿ ಜಾಗದಲ್ಲಿ ಪುಟ್ಟ ಶೀಟಿನ ಮನೆಯನ್ನು ನಿರ್ಮಾಣ ಮಾಡಿಕೊಂಡಿದ್ದು ಈ ಕುಟುಂಬ ಇಲ್ಲಿಯೇ ಜೀವನ ನಡೆಸುತ್ತಿದೆ.

ಕೋವಿಡ್‌ ಸೋಂಕಿನಿಂದ ಅಜ್ಜಿಯನ್ನು ಕಳೆದುಕೊಂಡಿರುವ ಮೊಮ್ಮಕ್ಕಳು ಮುಂದಿನ ದಾರಿ ಕಾಣದೆ ತಮ್ಮ ವಿದ್ಯಾಭ್ಯಾಸವನ್ನು ಸದ್ಯಕ್ಕೆ ನಿಲ್ಲಿಸಿದ್ದಾರೆ. ಯಾರಾದರೂ ಮುಂದೆ ಸಹಾಯ ಮಾಡಿದರೆ ತಮ್ಮ ಶಿಕ್ಷಣವನ್ನು ಮುಂದುವರಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.

‘ಅಜ್ಜಿಯ ಸಾವು ಈ ಮುದ್ದಾದ ಮೊಮ್ಮಕ್ಕಳ ಬದುಕನ್ನು ಅತಂತ್ರ ಆಗಿಸಿದೆ. ದಾನಿಗಳಾಗಲಿ, ಸರ್ಕಾರವಾಗಲಿ ಈ ಮಕ್ಕಳ ಜವಾಬ್ದಾರಿ ತೆಗೆದುಕೊಂಡು, ಶಿಕ್ಷಣ ಕೊಡಿಸಿ ಉತ್ತಮ ಭವಿಷ್ಯ ರೂಪಿಸಬೇಕು ಎಂಬುದು ಗ್ರಾಮದ ಅಂಗವನಾಡಿ ಕಾರ್ಯಕರ್ತೆ ಮುನಿರತ್ನಮ್ಮ ಅವರ ಮನವಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು