ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಎಫ್‌ಐಗೆ ಹಣ ಸಂದಾಯ ಆಗಿದ್ರೆ ಕ್ರಮ ಕೈಗೊಳ್ಳಿ: ಎಚ್‌ಡಿಕೆ

Last Updated 28 ಜನವರಿ 2020, 15:46 IST
ಅಕ್ಷರ ಗಾತ್ರ

ರಾಮನಗರ: ‘ಪಿಎಫ್‌ಐ ಸಂಘಟನೆಗೆ ಹಣ ಸಂದಾಯ ಆಗಿರುವ ಮಾಹಿತಿ ಇದ್ದಲ್ಲಿ ಸರ್ಕಾರ ತಕ್ಷಣ ಕ್ರಮ ತೆಗೆದುಕೊಳ್ಳಲಿ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ಪ್ರತಿಭಟನೆ ನಡೆಸಲು ಪಿಎಫ್‌ಐಗೆ ಹಣ ಸಂದಾಯವಾಗಿದೆ ಎಂಬ ಆರೋಪಗಳ ಕುರಿತು ಅವರು ಚನ್ನಪಟ್ಟಣದಲ್ಲಿ ಮಂಗಳವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ‘ಈಗ ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಇದೆ. ಎರಡೂ ಸರ್ಕಾರಗಳು ಜೊತೆಗೂಡಿ ಕಪ್ಪು ಹಣವೋ ಮತ್ತೊಂದು ಹಣವೋ, ಸರ್ಕಾರದ ಅಸ್ಥಿರತೆಗೆ ಕಳ್ಳದಾರಿಯಲ್ಲಿ ಯಾವುದೇ ಹಣ ಬಂದಿದ್ದರೂ ಕ್ರಮ ಕೈಗೊಳ್ಳಲಿ. ಬರೀ ಹೇಳಿಕೆ ಕೊಟ್ಟು ಎಲ್ಲಿಂದಲೂ ಹಣ ಬರುತ್ತಿದೆ ಎನ್ನುವುದು ರಾಜಕೀಯಕ್ಕೆ ಸೀಮಿತ ಆಗಬಾರದು. ಬಿಜೆಪಿಯವರು ಸುಳ್ಳನ್ನು ನಿಜ ಮಾಡುವುದರಲ್ಲಿ ಫೇಮಸ್‌’ ಎಂದರು.

‘ಸಿದ್ದರಾಮಯ್ಯ ಪ್ರತಿನಿಧಿಸುವ ಬಾದಾಮಿ ಕ್ಷೇತ್ರಕ್ಕೆ ₨1500 ಕೋಟಿ ಅನುದಾನ ಕೊಟ್ಟಿದ್ದು ನಾನೇ. ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್‌ ಶಾಸಕರ ಕ್ಷೇತ್ರಗಳಿಗೆ ₨19 ಸಾವಿರ ಕೋಟಿ ಅನುದಾನ ನೀಡಿದ್ದೆ. ಅದೆಲ್ಲ ಬಿಜೆಪಿ ಸರ್ಕಾರ ಬಂದ ಮೇಲೆ ಸ್ಥಗಿತವಾಗಿದೆ. ಬಾದಾಮಿ ಕ್ಷೇತ್ರಕ್ಕೆ ನೀಡಿದ್ದ ಅನುದಾನಕ್ಕೆ ಈಗ ಕ್ಲಿಯರೆನ್ಸ್‌ ಕೊಟ್ಟಿರಬಹುದು ಅಷ್ಟೇ’ ಎಂದು ಹೇಳಿದರು.

‘ರಾಜಕಾರಣದಲ್ಲಿ ಯಾರ್ಯಾರ ನಡುವೆಯೋ ಒಳ, ಹೊರ ಒಪ್ಪಂದಗಳು ಆಗಿರುತ್ತವೆ. ಇದರ ಬಗ್ಗೆ ಚರ್ಚೆ ಮಾಡಿದರೆ ಬೇರೆಯದೇ ಬಣ್ಣ ಕಟ್ಟುತ್ತಾರೆ. ಆದರೆ ಇಂತಹ ಒಪ್ಪಂದಗಳು ರಾಜಕೀಯದಲ್ಲಿ ಹೆಚ್ಚು ದಿನ ಉಳಿಯುವುದಿಲ್ಲ’ ಎಂದರು.

‘ನನಗೆ ಬಿಜೆಪಿಯವರ ಮೇಲೆ ಸಿಟ್ಟಿಲ್ಲ. ಅವರು ಇಲ್ಲಸಲ್ಲದ್ದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ವಿಕೃತ ಸಂತೋಷ ಪಡುವುದನ್ನು ಬಿಡಲಿ. ಶಾಂತಿ ವಾತಾವರಣ ಕದಡುವುದನ್ನು ಬಿಟ್ಟು ಜನರ ಸಮಸ್ಯೆಗೆ ಸ್ಪಂದಿಸುವುದಕ್ಕೆ ಗಮನ ಕೊಡಲಿ’ ಎಂದು ಸಲಹೆ ನೀಡಿದರು.

ಯತ್ನಾಳ್‌ಗೆ ತಿರುಗೇಟು: ಗಾಂಧೀಜಿಯವರು ವಲ್ಲಭಾಬಾಯ್‌ ಪಟೇಲರನ್ನು ಪ್ರಧಾನಿ ಮಾಡಲಿಲ್ಲ ಎಂಬ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿಕೆ ಕುರಿತು ಪ್ರತಿಕ್ರಿಯಿಸಿ ‘ಬಿಜೆಪಿ ನಾಯಕರ ಇಂತಹ ಹೇಳಿಕೆಗಳು ಸಮಾಜವನ್ನು ಹಾಳು ಮಾಡುವ ಕೆಲಸ. ಸ್ವಾತಂತ್ರ್ಯ ತರಬೇಕಾದ್ರೆ ಹಿರಿಯರು ಹಲವು ತೀರ್ಮಾನ ಮಾಡಿರುತ್ತಾರೆ. ಅಂದೇ ಹುಟ್ಟೇ ಇರದಿದ್ದವೆಲ್ಲ ಇಂದು ಮಾತನಾಡುತ್ತಿವೆ. ಇವಕ್ಕೆಲ್ಲ ಉತ್ತರ ಕೊಡಲಿಕ್ಕೆ ಆಗುತ್ತ’ ಎಂದರು.

ಕೊಡಗು ನೆರೆ ಸಂತ್ರಸ್ಥರಿಗೆ ನೆರವಿನ ಕುರಿತು ಸಂಸದ ಪ್ರತಾಪ್‌ ಸಿಂಹ ಹೇಳಿಕೆ ಕುರಿತು ಪ್ರತಿಕ್ರಿಯಿಸಿ ‘ ಎಷ್ಟು ಹಣ ಕೊಟ್ಟಿದ್ದೇನೆ. ಮನೆ ಕಟ್ಟಿಸಿಕೊಟ್ಟಿದ್ದೇನೆ ಎಂಬುದನ್ನು ಅಲ್ಲಿಗೆ ಹೋಗಿ ನೋಡಲಿ. ಕೇವಲ ಬರವಣಿಗೆ. ಟ್ವೀಟ್‌ನಲ್ಲಿ ಕೆಟ್ಟ ಭಾವನೆ ವ್ಯಕ್ತಪಡಿಸುತ್ತ ಕೂರುವವನು ನಾನಲ್ಲ’ ಎಂದು ತಿರುಗೇಟು ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT