ಮಂಗಳವಾರ, ನವೆಂಬರ್ 19, 2019
23 °C
ಸರ್ಕಾರದಿಂದ ಮಹಿಳೆಯರಿಗೆ ಕಾನೂನು ನೆರವು: ಸಮಾಲೋಚನೆ ಮೂಲಕ ಪ್ರಕರಣ ಇತ್ಯರ್ಥ

ರಾಮನಗರ: ಕೌಟುಂಬಿಕ ದೌರ್ಜನ್ಯ ಪ್ರಕರಣಗಳ ಹೆಚ್ಚಳ

Published:
Updated:

ರಾಮನಗರ: ಜಿಲ್ಲೆಯಲ್ಲಿ ಮಹಿಳೆಯರ ಮೇಲಿನ ಕೌಟುಂಬಿಕ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿದ್ದು, ನೆರವು ಕೇಳಿ ಬರುವ ಸ್ತ್ರೀಯರ ಸಂಖ್ಯೆಯೂ ಹೆಚ್ಚಾಗಿದೆ.

ಜಿಲ್ಲೆಯಲ್ಲಿ ಕಳೆದ ನಾಲ್ಕು ತಿಂಗಳ ಅವಧಿಯಲ್ಲಿಯೇ ಇಂತಹ 34 ಪ್ರಕರಣಗಳು ದಾಖಲಾಗಿವೆ. ಇವುಗಳಲ್ಲಿ 6 ಪ್ರಕರಣಗಳು ಸಮಾಲೋಚನೆ ಮೂಲಕ ಇತ್ಯರ್ಥಗೊಂಡಿವೆ. ಇನ್ನುಳಿದವು ವಿಚಾರಣೆ ಹಂತದಲ್ಲಿ ಇವೆ. 2018ರ ಸೆಪ್ಟೆಂಬರ್‌ನಿಂದ 2019ರ ಮೇವರೆಗೆ ಇಂತಹ 53 ಪ್ರಕರಣಗಳು ದಾಖಲಾಗಿದ್ದವು. ಇವುಗಳಲ್ಲಿ 4 ಪ್ರಕರಣಗಳು ಮಾತ್ರ ನ್ಯಾಯಾಲಯದ ಮೆಟ್ಟಿಲೇರಿವೆ.

ಕಾಯ್ದೆ ಅಡಿ ನೆರವು: ಮಹಿಳೆಯರು ತಮ್ಮ ಕುಟುಂಬದವರಿಂದ ದೌರ್ಜನ್ಯಕ್ಕೆ ಒಳಗಾಗುವುದನ್ನು ತಡೆದು ಅವರಿಗೆ ರಕ್ಷಣೆ ನೀಡುವ ಸಲುವಾಗಿ ಸರ್ಕಾರವು ‘ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆ–2005’ ಅನ್ನು ಜಾರಿಗೆ ತಂದಿದೆ. ಇಂತಹ ಪ್ರಕರಣಗಳನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ನಿರ್ವಹಣೆ ಮಾಡಲಾಗುತ್ತಿದೆ.

ಕೌಟುಂಬಿಕ ಹಿಂಸೆಗೆ ಒಳಗಾದ ಮಹಿಳೆಯರಿಗೆ ರಕ್ಷಣೆ ನೀಡುವುದು. ಕಾನೂನು ಸೌಲಭ್ಯ ಒದಗಿಸುವುದು. ರಕ್ಷಣಾಧಿಕಾರಿ ಮೂಲಕ ದೂರು ದಾಖಲಿಸುವುದು. ನ್ಯಾಯಾಲಯಗಳ ಮೂಲಕ ಪರಿಹಾರ ಒದಗಿಸುವುದು ಮೊದಲಾದ ಸೌಲಭ್ಯಗಳನ್ನು ಈ ಕಾಯ್ದೆಯ ಅಡಿ ಮಹಿಳೆಯರಿಗೆ ನೀಡಲಾಗುತ್ತಿದೆ.

ಯಾವ ಸ್ವರೂಪದ ಪ್ರಕರಣ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಬಳಿ ಬರುವ ಪ್ರಕರಣಗಳಲ್ಲಿ ಬಹುತೇಕವು ಮಹಿಳೆಯರ ಮೇಲಿನ ಮಾನಸಿಕ, ದೈಹಿಕ ಹಿಂಸೆಗೆ ಸಂಬಂಧಿಸಿದ್ದಾಗಿವೆ. ಪತಿ ಹಾಗೂ ಅವರ ಮನೆಯವರಿಂದ ನೀಡಲಾಗುವ ಹಿಂಸೆಯನ್ನು ವಿರೋಧಿಸಿ ಮಹಿಳೆಯರು ದೂರು ದಾಖಲಿಸತೊಡಗಿದ್ದಾರೆ.

ಕುಟುಂಬಗಳ ನಡುವಿನ ಹೊಡೆದಾಟಗಳಲ್ಲಿ ಮಹಿಳೆಯರ ಮೇಲಿನ ಹಲ್ಲೆ, ನಿಂದನೆಯಂತಹ ವಿಷಯಗಳಿಗೂ ದೂರು ದಾಖಲಾಗುತ್ತಿದೆ. ವರದಕ್ಷಿಣೆ ಕಿರುಕುಳದಂತಹ ಗಂಭೀರ ಸ್ವರೂಪದ ಪ್ರಕರಣಗಳು ಮಾತ್ರ ಪೊಲೀಸ್ ಠಾಣೆಗಳ ಮೆಟ್ಟಿಲೇರುತ್ತವೆ.

ಸಮಾಲೋಚನೆ ಮೂಲಕ ಇತ್ಯರ್ಥ: ತಾಲ್ಲೂಕು ಮಟ್ಟದಲ್ಲಿ ಸಿಡಿಪಿಒ ಕಚೇರಿಗಳಲ್ಲಿ ಮಹಿಳೆಯರಿಂದ ದೂರು ದಾಖಲಿಸಿಕೊಳ್ಳಲಾಗುತ್ತದೆ. ಒಮ್ಮೆ ದೂರು ದಾಖಲಾದ ಬಳಿಕ ಅವರ ಎದುರು ದೂರುದಾರರಿಗೆ ನೋಟಿಸ್‌ ನೀಡಿ ವಿಚಾರಣೆಗೆ ಆಹ್ವಾನಿಸಲಾಗುತ್ತದೆ. ವಾರದಲ್ಲಿ ಎರಡು ದಿನ ಕಚೇರಿಗಳಲ್ಲಿ ವಕೀಲರು ಹಾಜರಿದ್ದು ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸುತ್ತಾರೆ. ಈ ಹಂತದಲ್ಲಿ ಇತ್ಯರ್ಥಗೊಳ್ಳದ ಪ್ರಕರಣಗಳನ್ನು ಮಾತ್ರ ನ್ಯಾಯಾಲಯಕ್ಕೆ ಒಯ್ಯಲಾಗುತ್ತಿದೆ. ಅಂತಹ ಸಂದರ್ಭಗಳಲ್ಲಿ ಸಂತ್ರಸ್ಥ ಮಹಿಳೆಗೆ ಅವಶ್ಯವಾದ ಕಾನೂನಿನ ನೆರವನ್ನು ಸರ್ಕಾರದಿಂದ ನೀಡಲಾಗುತ್ತಿದೆ ಎನ್ನುತ್ತಾರೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಪ್ರಭಾರ ಉಪನಿರ್ದೇಶಕಿ ಭಾರತಿ.

ಅರಿವು ಹೆಚ್ಚಳ
ಕೌಟುಂಬಿಕ ದೌರ್ಜನ್ಯದ ಕುರಿತು ಇಂದಿನ ಮಹಿಳೆಯರಲ್ಲಿ ಅರಿವಿನ ಪ್ರಮಾಣ ಹೆಚ್ಚುತ್ತಿದೆ. ಹೀಗಾಗಿಯೇ ದಾಖಲಾಗುವ ಪ್ರಕರಣಗಳ ಸಂಖ್ಯೆಯೂ ಹೆಚ್ಚಾಗಿದೆ ಎನ್ನುತ್ತಾರೆ ಭಾರತಿ.

ಇಲಾಖೆ ವತಿಯಿಂದ ಅಂಗನವಾಡಿ, ಆಶಾ ಕಾರ್ಯಕರ್ತೆಯರ ಮೂಲಕ ಮನೆಮನೆಗೆ ತೆರಳಿ ದೌರ್ಜನ್ಯದ ವಿರುದ್ಧ ಮಹಿಳೆಯರಿಗೆ ಸಿಗುವ ನೆರವಿನ ಕುರಿತು ಅರಿವು ಮೂಡಿಸಲಾಗುತ್ತಿದೆ. ಗ್ರಾಮಸಭೆಗಳಲ್ಲೂ ಈ ಬಗ್ಗೆ ಜನರೊಂದಿಗೆ ಮಾಹಿತಿ ಹಂಚಿಕೊಳ್ಳಲಾಗುತ್ತಿದೆ ಎನ್ನುತ್ತಾರೆ ಅವರು.

*
ಕೌಟುಂಬಿಕ ದೌರ್ಜನ್ಯದ ವಿರುದ್ಧ ಮಹಿಳೆಯರಲ್ಲಿ ಜಾಗೃತಿ ಹೆಚ್ಚಾಗಿದೆ. ಹೀಗಾಗಿ ದಾಖಲಾಗುವ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ.
-ಭಾರತಿ, ಪ್ರಭಾರ ಉಪನಿರ್ದೇಶಕಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ

**
ತಾಲ್ಲೂಕುವಾರು ಕೌಟುಂಬಿಕ ದೌರ್ಜನ್ಯ ಪ್ರಕರಣಗಳು
ರಾಮನಗರ –14
ಚನ್ನಪಟ್ಟಣ –7
ಮಾಗಡಿ –11
ಕನಕಪುರ– 2

ಪ್ರತಿಕ್ರಿಯಿಸಿ (+)