ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಾರೋಹಳ್ಳಿ: ವಾರ್ಡ್ ವಿಂಗಡಣೆಗೂ ಮುನ್ನವೇ ಮೀಸಲು ನಿಗದಿ

ಹಾರೋಹಳ್ಳಿ ಪಟ್ಟಣ ಪಂಚಾಯಿತಿ: ಮೂರು ವರ್ಷವಾದರೂ ನಡೆದಿಲ್ಲ ವಿಂಗಡಣೆ
ಗೋವಿಂದರಾಜು ವಿ.
Published 7 ಆಗಸ್ಟ್ 2024, 5:06 IST
Last Updated 7 ಆಗಸ್ಟ್ 2024, 5:06 IST
ಅಕ್ಷರ ಗಾತ್ರ

ಹಾರೋಹಳ್ಳಿ: ರಾಜ್ಯ ಸರ್ಕಾರ ರಾಜ್ಯದಾದ್ಯಂತ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿಯನ್ನು ನಿಗದಿಪಡಿಸಿದೆ. ಆದರೆ, ಹಾರೋಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಚುನಾವಣೆ ನಡೆಯುವುದಿರಲಿ, ವಾರ್ಡ್‌ಗಳನ್ನೇ ಇದುವರೆಗೆ ವಿಂಗಡಿಸಿಲ್ಲ.  ಹೀಗಿರುವಾಗ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ನಿಗದಿಪಡಿಸಲಾಗಿದೆ.

ಹಾರೋಹಳ್ಳಿಯನ್ನು ಪಟ್ಟಣ ಪಂಚಾಯಿತಿ ಎಂದು ಘೋಷಿಸಿ ಮೂರು ವರ್ಷವಾಯಿತು. ಆದರೆ, ಇದುವರೆಗೆ ಚುನಾವಣೆ ನಡೆಯುವುದರಿಲಿ, ವಾರ್ಡ್‌ಗಳ ವಿಂಗಡಣೆಯ ಗೊಡವೆಗೆ ಸಂಬಂಧಪಟ್ಟವರು ಹೋಗಿಲ್ಲ. ಇದರಿಂದ ಪಟ್ಟಣದ ಅಭಿವೃಧ್ಧಿಗೂ ಹಿನ್ನಡೆಯಾಗಿದೆ. ಚುನಾಯಿತ ಆಡಳಿತ ಯಂತ್ರ ಇಲ್ಲದಿರುವುದರಿಂದ ಮೂರು ವರ್ಷದಿಂದ ಅಧಿಕಾರಿಗಳೇ ದರ್ಬಾರ್ ನಡೆಸುತ್ತಿದ್ದಾರೆ.

ಹೇಳೋರಿಲ್ಲ, ಕೇಳೋರಿಲ್ಲ:

‘ಪಟ್ಟಣ ಪಂಚಾಯಿತಿಯಲ್ಲಿ ಚುನಾಯಿತ ಆಡಳಿತ ಮಂಡಳಿಯು ಪಟ್ಟಣದ ಅಭಿವೃದ್ಧಿ ಕುರಿತು ನಿರ್ಧರಿಸುತ್ತದೆ. ಯಾವ ವಾರ್ಡ್‌ನಲ್ಲಿ ಏನಾಗಿದೆ, ಏನಾಗಬೇಕಿದೆ, ಸ್ಥಳೀಯರ ಕುಂದು–ಕೊರತೆಗಳೇನು ಎಂದು ಆಲಿಸಲು ವಾರ್ಡ್‌ವಾರು ಜನಪ್ರತಿನಿಧಿಗಳಿರಬೇಕು. ಆದರೆ, ಹಾರೋಹಳ್ಳಿಯಲ್ಲಿ ಎಲ್ಲವೂ ಉಲ್ಟಾ ಆಗಿದೆ’ ಎಂದು ಸ್ಥಳೀಯ ನಿವಾಸಿ ಪುಟ್ಟಸ್ವಾಮಿ ಗೌಡ ಹೇಳಿದರು.

‘ಮೂರು ವರ್ಷದಿಂದ ಆಡಳಿತ ನಡೆಸುತ್ತಿರುವ ಅಧಿಕಾರಿಗಳಿಗೆ ಪಟ್ಟಣದ ಕುರಿತು ತಳಬುಡ ಸರಿಯಾಗಿ ಗೊತ್ತಿಲ್ಲ. ಎಲ್ಲಿ, ಯಾವ ಅಭಿವೃದ್ಧಿ ಕೆಲಸಗಳನ್ನು ಮಾಡಬೇಕು. ಸ್ಥಳೀಯರ ಸಮಸ್ಯೆಗಳೇ? ಅವುಗಳಿಗೆ ಪರಿಹಾರ ಹೇಗೆ ಕಂಡುಕೊಳ್ಳಬೇಕು ಎಂಬುದು ಸರಿಯಾಗಿ ಗೊತ್ತಿಲ್ಲದೆ, ಮನಬಂದಂತೆ ಆಡಳಿತ ನಡೆಸುತ್ತಿದ್ದಾರೆ. ಸ್ಥಳೀಯರು ಸಮಸ್ಯೆಗಳಲ್ಲೇ ಒದ್ದಾಡುತ್ತಿದ್ದಾರೆ. ಪಟ್ಟಣವು ಸಮಸ್ಯೆಗಳ ಕೂಪವಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಸಿಗುವುದೇ ಮುಕ್ತಿ?: 

ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕೆಲಸಗಳು ಯಾವಾಗ ಶುರುವಾಗಲಿದೆ ಎಂದು ಜನ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಚುನಾವಣೆ ನಡೆಯದೇ ಅಭಿವೃದ್ಧಿ ಕೆಲಸಗಳಿಗೂ ದೊಡ್ಡ ಮಟ್ಟದ ಹಿನ್ನಡೆಯುಂಟಾಗಿದೆ. ಇದೀಗ ಸರ್ಕಾರ ಮೀಸಲಾತಿ ನಿಗಧಿಪಡಿಸಿರುವುದರಿಂದ, ಈಗಲಾದರೂ ವಾರ್ಡ್ ವಿಂಗಡಣೆ ಮಾಡಿ ಚುನಾವಣೆ ನಡೆಸಲಿದೆಯೇ ಎಂಬ ಆಶಾಭಾವನೆ ಜನರಿಗೆ ಬಂದಿದೆ. 

ಹಾರೋಹಳ್ಳಿಯು ಏಷ್ಯಾದ ಎರಡನೇ ಅತಿದೊಡ್ಡ ಕೈಗಾರಿಕಾ ಪ್ರದೇಶವನ್ನು ಹೊಂದಿದೆ. ಪಟ್ಟಣವೂ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಹೊರರಾಜ್ಯದಿಂದಲೂ ಜನ ಬಂದು ಇಲ್ಲಿ ನೆಲೆಸುತ್ತಿದ್ದಾರೆ. ಹೀಗಿರುವಾಗ ಪಟ್ಟಣಕ್ಕೆ ಅಗತ್ಯ ಮೂಲಸೌಲಭ್ಯಗಳನ್ನು ಒದಗಿಸಿಕೊಡಬೇಕಾದ್ದು ಸ್ಥಳೀಯ ಆಡಳಿತದ ಕರ್ತವ್ಯವಾಗಿ. ಹಾಗಾಗಿ, ವಾರ್ಡ್ ವಿಂಗಡಣೆ ಮಾಡಿ ಚುನಾಯಿತಿ ಪ್ರತಿನಿಧಿಗಳನ್ನು ಒಳಗೊಂಡ ಆಡಳಿತ ವ್ಯವಸ್ಥೆ ಜಾರಿಗೆ ಬರಲಿ ಎಂಬುದು ಸ್ಥಳೀಯರ ಒತ್ತಾಯ.

ಗ್ರಾ.ಪಂ.ಗೂ ನಡೆಯದ ಚುನಾವಣೆ

ಹಿಂದಿನ ಬಿಜೆಪಿ ಸರ್ಕಾರ ಹಾರೋಹಳ್ಳಿಯನ್ನು ಗ್ರಾಮ ಪಂಚಾಯಿತಿಯಿಂದ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರಿಸಿತು. ಆ ಪೈಕಿ ಕೊಳ್ಳಿಗನಹಳ್ಳಿ ಕಗ್ಗಲಹಳ್ಳಿ ದ್ಯಾವಸಂದ್ರ ಹಾಗೂ ಟಿ. ಹೊಸಹಳ್ಳಿ ಗ್ರಾಮ ಪಂಚಾಯಿತಿಯ ಕೆಲವು ಹಳ್ಳಿಗಳನ್ನು ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಸೇರಿಸಿ ಆದೇಶ ಹೊರಡಿಸಿತು. ಅದರ ಪರಿಣಾಮ ನಾಲ್ಕು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಸಹ ಚುನಾವಣೆ ನಡೆದಿಲ್ಲ. ಹಾಗಾಗಿ ಇಲ್ಲಿಯೂ ಚುನಾಯಿತಿ ಆಡಳಿತ ವ್ಯವಸ್ಥೆ ಇಲ್ಲವಾಗಿದ್ದು ಅಧಿಕಾರಿಗಳೇ ಆಡಳಿತ ನಡೆಸುತ್ತಿದ್ದಾರೆ. ಪುರಸಭೆಯಾಗುವುದು ಯಾವಾಗ? ಹಾರೋಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಪುರಸಭೆಯಷ್ಟು ಜನಸಂಖ್ಯೆ ಇದೆ. ಹಾಗಾಗಿ ಪುರಸಭೆಯಾಗಿ ಮೇಲ್ದರ್ಜೆಗೇರಿಸುವಂತೆ ಈಗಾಗಲೇ ಸಂಬಂಧಪಟ್ಟ ಇಲಾಖೆಗೆ ಸ್ಥಳೀಯ ಆಡಳಿತದಿಂದ ಪ್ರಸ್ತಾವ ಕಳಿಸಲಾಗಿದೆ. ಆದರೆ ಇದುವರೆಗೆ ಪ್ರಸ್ತಾವಕ್ಕೆ ಒಪ್ಪಿಗೆ ಸಿಕ್ಕಿಲ್ಲ. ಹೆಸರಿಗಷ್ಟೇ ಹಾರೋಹಳ್ಳಿ ತಾಲ್ಲೂಕು ಎಂದು ಘೋಷಣೆಯಾಗಿದೆ. ಆದರೆ ತಾಲ್ಲೂಕಿನಲ್ಲಿ ಇರಬೇಕಾದ ಮೂಲಸೌಕರ್ಯ ಕಚೇರಿ ಕಟ್ಟಡಗಳು ಸೇರಿದಂತೆ ಯಾವುದೂ ಇಲ್ಲ.

ಜನಸಂಖ್ಯೆಗೆ ಅನುಗುಣವಾಗಿ ಪಟ್ಟಣದ ವಾರ್ಡ್‌ಗಳನ್ನು ಮೊದಲು ವಿಂಗಡಣೆ ಮಾಡಬೇಕು. ಬಳಿಕವೇ ಮೀಸಲಾತಿ ನಿಗದಿ ಹಾಗೂ ಚುನಾವಣೆ ಕುರಿತು ನಿರ್ಧರಿಸಬೇಕು
ಭಾನುಪ್ರಕಾಶ್, ಸ್ಥಳೀಯ ನಿವಾಸಿ, ಹಾರೋಹಳ್ಳಿ
ಹಾರೋಹಳ್ಳಿ ಪಟ್ಟಣ ಪಂಚಾಯಿತಿ ಅಥವಾ ಪುರಸಭೆಯೇ ಎಂಬ ಗೊಂದಲವಿದೆ. ಮೊದಲು ಅದನ್ನು ನಿವಾರಣೆ ಮಾಡಬೇಕು. ವಾರ್ಡ್‌ಗಳ ವಿಂಗಡಣೆ ಮಾಡಿ ನಂತರ ಚುನಾವಣೆ ನಡೆಸಬೇಕು.
–ಅಶೋಕ್, ಜಿಲ್ಲಾಧ್ಯಕ್ಷ, ದಲಿತ ಸೇನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT