ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಲ್ಲೂಕು ರಚನೆ ಪ್ರಸ್ತಾವಕ್ಕೆ ಬಡಿದ ಗರ

ಹಾರೋಹಳ್ಳಿ: ಸ್ಥಳ ಹುಡುಕಾಟ ಕೈಬಿಟ್ಟ ಕಂದಾಯ ಇಲಾಖೆ
Last Updated 31 ಜುಲೈ 2019, 14:33 IST
ಅಕ್ಷರ ಗಾತ್ರ

ರಾಮನಗರ: ಎಚ್‌.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಪದವಿಯಿಂದ ಕೆಳಗಿಳಿದ ಜೊತೆಜೊತೆಗೆ ಅವರ ಕನಸಿನ ಯೋಜನೆಯಾದ ಹಾರೋಹಳ್ಳಿ ತಾಲ್ಲೂಕು ರಚನೆ ಪ್ರಸ್ತಾವಕ್ಕೂ ಗರ ಬಡಿದಿದೆ.

ಎಚ್‌.ಡಿ ಕುಮಾರಸ್ವಾಮಿ ಕಳೆದ ಫೆಬ್ರುವರಿಯಲ್ಲಿ ಮಂಡಿಸಿದ ಬಜೆಟ್‌ನಲ್ಲಿ ಹಾರೋಹಳ್ಳಿ ಹೊಸ ತಾಲ್ಲೂಕು ರಚನೆಯ ಘೋಷಣೆ ಮಾಡಿದ್ದರು. ಈ ಮೂಲಕ ತಾವು ಎರಡು ದಶಕ ಕಾಲ ಪ್ರತಿನಿಧಿಸಿದ ರಾಮನಗರ ವಿಧಾನಸಭಾ ಕ್ಷೇತ್ರದ ಭಾಗವಾದ ಹಾರೋಹಳ್ಳಿಯ ಜನರ ಋಣ ತೀರಿಸಿದ್ದರು. ಆದರೆ ಈವರೆಗೆ ಈ ವಿಚಾರದಲ್ಲಿ ಯಾವುದೇ ಪ್ರಗತಿ ಆಗಿಲ್ಲ. ಕಟ್ಟಡ ನಿರ್ಮಾಣ ಸಹಿತ ಯಾವ ಕಾರ್ಯವೂ ನಡೆದಿಲ್ಲ. ಸರ್ಕಾರದಿಂದ ಇನ್ನೂ ಗೆಜೆಟ್‌ ಅಧಿಸೂಚನೆಯೇ ಹೊರಡಿಸಿಲ್ಲ ಎನ್ನುತ್ತಾರೆ ಜಿಲ್ಲಾಡಳಿತದ ಅಧಿಕಾರಿಗಳು.

ರಾಜ್ಯ ಸರ್ಕಾರವು ಕಳೆದ ಬಜೆಟ್‌ನಲ್ಲಿ ಹೊಸ ತಾಲ್ಲೂಕು ಘೋಷಣೆ ಮಾಡಿ ಸುಮ್ಮನಾಗಿದೆ. ಆದರೆ ಇದಕ್ಕೆ ಸಂಬಂಧಿಸಿ ಜಿಲ್ಲಾಡಳಿತದ ಜೊತೆ ಯಾವ ಪತ್ರ ವ್ಯವಹಾರವನ್ನೂ ನಡೆಸಿಲ್ಲ. ಹೀಗಾಗಿ ಅಧಿಕಾರಿಗಳು ಸುಮ್ಮನಾಗಿದ್ದಾರೆ. ಆರಂಭದಲ್ಲಿ ತಾಲ್ಲೂಕು ಕಚೇರಿಯ ನಿರ್ಮಾಣಕ್ಕೆ ಒಂದೆರಡು ಜಾಗಗಳನ್ನು ಗುರುತಿಸಲಾಗಿತ್ತು. ಆದರೆ ಸರ್ಕಾರದಿಂದ ಯಾವುದೇ ಪ್ರಕ್ರಿಯೆ ಬಾರದ ಹಿನ್ನೆಲೆಯಲ್ಲಿ ಸದ್ಯ ಸ್ಥಳ ಹುಡುಕಾಟವನ್ನೂ ಕೈ ಬಿಡಲಾಗಿದೆ.

ಪ್ರಸ್ತಾವವೇ ಹೋಗಿಲ್ಲ: ಸರ್ಕಾರದ ಘೋಷಣೆಯ ಬಳಿಕ ಜಿಲ್ಲಾಡಳಿತ ಹಾಗೂ ಕಂದಾಯ ಇಲಾಖೆಯು ಉದ್ದೇಶಿತ ತಾಲ್ಲೂಕು ರಚನೆಯ ವ್ಯಾಪ್ತಿ, ಅದರ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳು, ಜನಸಂಖ್ಯೆ ಮೊದಲಾದ ಮಾಹಿತಿಗಳೆಲ್ಲವನ್ನೂ ನಿಗದಿತ ನಮೂನೆಯಲ್ಲಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಬೇಕಾಗುತ್ತದೆ. ಇದಕ್ಕೆ ಒಪ್ಪಿಗೆ ದೊರೆತ ಬಳಿಕವಷ್ಟೇ ತಾಲ್ಲೂಕು ರಚನೆ ಕಾರ್ಯವು ಅಧಿಕೃತವಾಗಿ ಆರಂಭಗೊಳ್ಳಲಿದೆ. ಆದರೆ ಇನ್ನೂ ಸರ್ಕಾರಕ್ಕೆ ಪ್ರಸ್ತಾವವೇ ಸಲ್ಲಿಕೆಯಾಗಿಲ್ಲ ಎನ್ನಲಾಗಿದೆ.

ತಪ್ಪಲಿದೆ ಅಲೆದಾಟ: ಕನಕಪುರ ತಾಲ್ಲೂಕು ಸದ್ಯ ಜಿಲ್ಲೆಯ ದೊಡ್ಡ ತಾಲ್ಲೂಕಾಗಿದೆ. ಹಾರೋಹಳ್ಳಿ ಹಾಗೂ ಮರಳವಾಡಿ ಹೋಬಳಿಗಳ ಜನರೂ ಸರ್ಕಾರಿ ಕಚೇರಿಗಳಿಗೆ ತಾಲ್ಲೂಕು ಕೇಂದ್ರಕ್ಕೆ ಅಲೆಯಬೇಕಿದೆ. ಹೊಸ ತಾಲ್ಲೂಕು ರಚನೆ ಆದಲ್ಲಿ ಜನರು ಸಣ್ಣಪುಟ್ಟ ಕೆಲಸಗಳಿಗೆ ಕನಕಪುರಕ್ಕೆ ಅಲೆಯುವುದು ತಪ್ಪಲಿದೆ.

ಇದರಿಂದ ಜನರ ಹಣ, ಸಮಯವೂ ಉಳಿತಾಯ ಆಗಿ ಸೂಕ್ತ ಸಮಯದಲ್ಲಿ ಸರ್ಕಾರಿ ಸವಲತ್ತು ಪಡೆಯಲು ನೆರವಾಗಲಿದೆ. ಜೊತೆಗೆ ಪ್ರತ್ಯೇಕ ಅನುದಾನವು ಲಭ್ಯ ಆಗಲಿದ್ದು, ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚು ಅನುಕೂಲ ಆಗಲಿದೆ. ಹೀಗಾಗಿ ಕೂಡಲೇ ಸರ್ಕಾರ ಗೆಜೆಟ್‌ ಪ್ರಕಟಣೆ ಹೊರಡಿಸಿ ಅನುದಾನ ಬಿಡುಗಡೆ ಮಾಡಬೇಕು ಎಂದು ಸ್ಥಳೀಯರು ಒತ್ತಾಯಿಸುತ್ತಾರೆ.

ಹಾರೋಹಳ್ಳಿಯು ಇನ್ನೂ ಗ್ರಾಮ ಪಂಚಾಯಿತಿ ಕೇಂದ್ರವಾಗಿದ್ದು, ತಾಲ್ಲೂಕು ಕೇಂದ್ರವೊಂದಕ್ಕೆ ಬೇಕಾದ ಮೂಲ ಸೌಕರ್ಯಗಳನ್ನು ಹೊಂದಿಲ್ಲ. ಬಸ್‌ ನಿಲ್ದಾಣ, ಪೊಲೀಸ್ ಠಾಣೆ ಸೇರಿದಂತೆ ಕೆಲವೇ ಕೆಲವು ಸೌಲಭ್ಯಗಳು ಇಲ್ಲಿವೆ. ತಾಲ್ಲೂಕು ಕೇಂದ್ರಕ್ಕೆ ಬೇಕಾದ ಸರ್ಕಾರಿ ಕಚೇರಿ ಕಟ್ಟಡಗಳು, ಅಗತ್ಯವಾದ ಸಿಬ್ಬಂದಿಯನ್ನು ಸರ್ಕಾರ ಒದಗಿಸಬೇಕಿದೆ.

ಕೈಗಾರಿಕಾ ಕೇಂದ್ರದಿಂದ ಆದಾಯ
ಬೆಂಗಳೂರಿಗೆ ಸಮೀಪದಲ್ಲಿಯೇ ಹಾರೋಹಳ್ಳಿ ಕೈಗಾರಿಕಾ ಪ್ರದೇಶವಿದೆ. ಇದು ಏಷ್ಯಾದ ದೊಡ್ಡ ಕೈಗಾರಿಕಾ ವಸಾಹತುಗಳಲ್ಲಿ ಒಂದಾಗಿದೆ. ಒಟ್ಟು ನಾಲ್ಕು ಹಂತಗಳಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯು ಇಲ್ಲಿನ ಕೈಗಾರಿಕಾ ಪ್ರದೇಶವನ್ನು ಅಭಿವೃದ್ಧಿ ಪಡಿಸಿದೆ. ಸದ್ಯ ಇಲ್ಲಿ 219 ಕಾರ್ಖಾನೆಗಳು ಕಾರ್ಯ ನಿರ್ವಹಿಸುತ್ತಿವೆ. ಇನ್ನೂ 186 ಕಾರ್ಖಾನೆಗಳು ನಿರ್ಮಾಣದ ಹಂತದಲ್ಲಿವೆ. ಹಾರೋಹಳ್ಳಿಯನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರಿಸಿ ಕೈಗಾರಿಕೆಗಳಿಂದ ತೆರಿಗೆ ಸಂಗ್ರಹ ಮಾಡಿದಲ್ಲಿ ಅದರಿಂದ ಬರುವ ಆದಾಯದಿಂದಲೇ ಪಟ್ಟಣವನ್ನು ಅಭಿವೃದ್ಧಿ ಮಾಡಬಹುದು ಎನ್ನುವುದು ಸ್ಥಳೀಯರ ಅಭಿಪ್ರಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT