ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖ್ಯಮಂತ್ರಿಯಿಂದ ದ್ವೇಷದ ರಾಜಕಾರಣ

ಅನುದಾನ ತಡೆಹಿಡಿದ ಸರ್ಕಾರ– ಸಂಸದ ಡಿ.ಕೆ.ಸುರೇಶ್‌ ಆರೋಪ
Last Updated 25 ಜನವರಿ 2020, 14:37 IST
ಅಕ್ಷರ ಗಾತ್ರ

ಮಾಗಡಿ: ಜಿಲ್ಲೆಯ ಅಭಿವೃದ್ಧಿಗೆ ಸಮ್ಮಿಶ್ರ ಸರ್ಕಾರ ಮಂಜೂರು ಮಾಡಿದ್ದ ಅನುದಾನವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಡೆಹಿಡಿದು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಸಂಸದ ಡಿ.ಕೆ.ಸುರೇಶ್ ಟೀಕಿಸಿದರು.

ತಿಪ್ಪಸಂದ್ರ ಹೋಬಳಿಯಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹೇಮಾವತಿ ನದಿಯಿಂದ ಮುಕ್ಕಾಲು ಟಿಎಂಸಿ ನೀರನ್ನು ತಾಲ್ಲೂಕಿನ ಕೆರೆಗಳಿಗೆ ತುಂಬಿಸುವ ಉದ್ದೇಶದಿಂದ ಆರಂಭವಾಗಿರುವ ಶ್ರೀರಂಗ ಏತ ನೀರಾವರಿ ಯೋಜನೆಗೆ ಬಿಜೆಪಿ ಅಡ್ಡಗಾಲು ಹಾಕಿ ತಡೆ ಹಿಡಿದಿದೆ. ನೀರಿನ ಹಕ್ಕಿಗಾಗಿ ಜಿಲ್ಲೆಯ ರೈತರು ಹೋರಾಟಕ್ಕೆ ಅಣಿಯಾಗಬೇಕಿದೆ ಎಂದು ತಿಳಿಸಿದರು.

ಕಾವೇರಿ ಕಣಿವೆಗೆ ಸೇರಿದ್ದ ₹6ಸಾವಿರ ಕೋಟಿ ತಡೆಹಿಡಿದಿರುವ ಮುಖ್ಯಮಂತ್ರಿಗಳು, ಶಿವಮೊಗ್ಗಕ್ಕೆ ಹೆಚ್ಚಿನ ಅನುದಾನ ನೀಡಿದ್ದಾರೆ. ಜಿಲ್ಲೆಯ ರಸ್ತೆಗಳ ಅಭಿವೃದ್ಧಿಗೆ ಸಮ್ಮಿಶ್ರ ಸರ್ಕಾರ ನೀಡಿದ್ದ ₹300 ಕೋಟಿ, ಕನಕಪುರಕ್ಕೆ ಮಂಜೂರಾಗಿದ್ದ ಸರ್ಕಾರಿ ಮೆಡಿಕಲ್ ಕಾಲೇಜು, ₹228 ಕೋಟಿ ವೆಚ್ಚದಲ್ಲಿ ಟೆಂಡರ್ ಹಂತದಲ್ಲಿದ್ದ ಭೈರಮಂಗಲ ಕೆರೆಯ ಅಭಿವೃದ್ಧಿಗೆ ಅಡ್ಡಗಾಲಾಗಿದೆ. ಜಿಲ್ಲೆಯಲ್ಲಿ ಬಿಜೆಪಿ ಶಾಸಕರಿಲ್ಲ ಎಂಬ ಕಾರಣದಿಂದ ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ ಎಂದು ದೂರಿದರು.

ಶಾಸಕ ಎ.ಮಂಜುನಾಥ ಮಾತನಾಡಿ, ತಾಲ್ಲೂಕಿನ ಕೆರೆಗಳಿಗೆ ಹೇಮಾವತಿ ನದಿ ನೀರು ಹರಿಸಲು 100 ಸಭೆಗಳನ್ನು ಮಾಡಿದ್ದೇವೆ. ಹೇಮಾವತಿ ನದಿ ನೀರು ಹರಿಸಲು ಕಣ್ಣಲ್ಲಿ ರಕ್ತ ಸುರಿಸುವಂತಾಗಿದೆ ಎಂದು ಬೇಸರದಿಂದ ಹೇಳಿದರು.

‘₹340 ಕೋಟಿ ವೆಚ್ಚದ ನೀರಾವರಿ ಯೋಜನೆಗೆ ಕೆಲವು ರೈತರು ಕೊಕ್ಕೆ ಹಾಕಿದ್ದು 16 ಕಿ.ಮೀ.ಪೈಪ್ ಹಾಕಿಸಲು ಅಡ್ಡಿಪಡಿಸುತ್ತಿದ್ದಾರೆ. ಪೈಪ್ ಹಾಕಲು ನೀಡುವ ಭೂಮಿಗೆ 4 ಪಟ್ಟು ಹೆಚ್ಚಿನ ಪರಿಹಾರ ನೀಡುತ್ತಿದ್ದೇವೆ. ಭೂಮಿಯ ಮಾಲೀಕತ್ವದ ಬಗ್ಗೆ ಅಣ್ಣತಮ್ಮಂದಿರು ಕುಂಟು ನೆಪ ಹೇಳಿಕೊಂಡು ಪೈಪ್ ಅಳವಡಿಸಲು ಅಡ್ಡಿಪಡಿಸುತ್ತಿದ್ದಾರೆ’ ಎಂದು ಆರೋಪಿಸಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಶಿಶುಅಭಿವೃದ್ಧಿ ಇಲಾಖೆ ವತಿಯಿಂದ ಕೊಡಮಾಡಿರುವ ಭಾಗ್ಯಲಕ್ಷ್ಮೀಬಾಂಡ್ ವಿತರಿಸಿದರು.

ವಿಧಾನ ಪರಿಷತ್ ಸದಸ್ಯ ಎಸ್.ರವಿ, ಜಿಲ್ಲಾ ಪಂಚಾಯಿತಿ ಸದಸ್ಯೆ ದಿವ್ಯಗಂಗಾಧರ್ ಮಾತನಾಡಿದರು. ಭವ್ಯ ದೇವೇಂದ್ರಕುಮಾರ್ ಹೊರತಂದಿರುವ ಡಾ.ಶಿವಕುಮಾರಸ್ವಾಮೀಜಿ ಅವರ ಕ್ಯಾಲೆಂಡರ್ ಬಿಡುಗಡೆ ಮಾಡಿದರು. ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಶೈಲಜಾ, ಯುವಜನತಾದಳದ ಅಧ್ಯಕ್ಷ ಗಿರಿಗೌಡ, ಜೆಡಿಎಸ್ ಮುಖಂಡರಾದ ಶಿವರಾಮಯ್ಯ, ಕಲ್ಕೆರೆ ಉಮೇಶ್, ಹುಳ್ಳೇನಹಳ್ಳಿ ಅಶೋಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT