ಮಂಗಳವಾರ, ನವೆಂಬರ್ 12, 2019
20 °C
ಮಾಗಡಿ ಪುರಸಭೆ ಚುನಾವಣೆ

ಪ್ರಾದೇಶಿಕ ಪಕ್ಷದಿಂದಲೇ ಪ್ರದೇಶ ಅಭಿವೃದ್ಧಿ: ದೇವೇಗೌಡ

Published:
Updated:
Prajavani

ಮಾಗಡಿ: ರಾಷ್ಟ್ರೀಯ ಪಕ್ಷಗಳಿಂದ ರಾಜ್ಯದ ಅಭಿವೃದ್ಧಿ ಸಾಧ್ಯವಿಲ್ಲ. ಬದಲಾಗಿ ಪ್ರಾದೇಶಿಕ ಪಕ್ಷದಿಂದ ಮಾತ್ರ ಪ್ರಾದೇಶಿಕ ಪ್ರಗತಿಯಾಗಲಿದೆ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅಭಿಪ್ರಾಯಪಟ್ಟರು.

ಪಟ್ಟಣದಲ್ಲಿ ಗುರುವಾರ ವಿನಾಯಕಸ್ವಾಮಿಗೆ ಪೂಜೆ ಸಲ್ಲಿಸಿ, ಜೆಡಿಎಸ್‌ ಅಭ್ಯರ್ಥಿಗಳ ಪರವಾಗಿ ರೋಡ್‌ ಶೋ ನಡೆಸಿ ಅವರು ಮಾತನಾಡಿದರು.

‘ರಾಜ್ಯದಲ್ಲಿ ಬಲಿಷ್ಠ ವಿರೋಧ ಪಕ್ಷವಿರಬೇಕು. ಪ್ರಾದೇಶಿಕ ಪಕ್ಷ ಉಳಿಯುವ ನಿಟ್ಟಿನಲ್ಲಿ ನನ್ನ ಹೋರಾಟ ನಿರಂತರವಾಗಿ ಮುಂದುವರಿಯಲಿದೆ. ಜೆಡಿಎಸ್ ಪಕ್ಷದಿಂದ ಮಾತ್ರ ದೀನದಲಿತ, ಅಲ್ಪಸಂಖ್ಯಾತರ ಅಭಿವೃದ್ಧಿ ಸಾಧ್ಯ. ಜೆಡಿಎಸ್ ಪಕ್ಷವನ್ನು ತುಳಿಯುವ ನಿಟ್ಟಿನಲ್ಲಿ ರಾಷ್ಟ್ರೀಯ ಪಕ್ಷಗಳು ಸಂಚು ಮಾಡುತ್ತಿದೆ ಎಂಬುದು ನನಗೆ ತಿಳಿದಿದೆ’ ಎಂದರು.

4 ಬಾರಿ ಹೃದಯ ಶಸ್ತ್ರ ಚಿಕಿತ್ಸೆಯನ್ನು ಮಾಡಿಕೊಂಡಿರುವ ಕುಮಾರಸ್ವಾಮಿ ಅವರಿಗೆ ಇನ್ನಿಲ್ಲದ ನೋವನ್ನೆ ಸರ್ಕಾರದಲ್ಲಿ ಕೊಟ್ಟರು. ಕುಮಾರಣ್ಣ ಅವರನ್ನು ಆಡಳಿತ ಮಾಡುವುದಕ್ಕೆ ಅವಕಾಶ ಕೊಡಲಿಲ್ಲ. ರೈತರಿಗೆ ಒಳಿತಾಗುವ ನಿಟ್ಟಿನಲ್ಲಿ ಸಾಲ ಮನ್ನ ದೃಢ ನಿರ್ಧಾರಕ್ಕೆ ಬಂದರು. ರಾಜ್ಯದ ರೈತರ ಸಾಲವನ್ನು ಮನ್ನಾ ಮಾಡಲಾಗಿದೆ. ಜೊತೆಗೆ ಗಿರವಿ ಇಟ್ಟ ಒಡವೆಗಳನ್ನು ಬಿಡಿಸಿಕೊಳ್ಳುವ ನಿಟ್ಟಿನಲ್ಲೂ ಕೂಡ ಕಾನೂನನ್ನು ಕುಮಾರಸ್ವಾಮಿ ಜಾರಿಗೆ ತಂದರು. ಸಮ್ಮಿಶ್ರ ಸರ್ಕಾರವನ್ನು ಕೆಡವಲು ಯಾರೆಲ್ಲ ಪ್ರಯತ್ನ ಪಟ್ಟರು 17 ಶಾಸಕರು ರಾಜೀನಾಮೆ ನೀಡಿ ಮುಬೈಗೆ ಹೋಗಿದ್ದ ವಿಚಾರವು ನಾಡಿನ ಜನತೆಗೆ ಗೊತ್ತಿರುವ ವಿಚಾರ’ ಎಂದರು.

ಶಾಸಕ ಎ.ಮಂಜುನಾಥ ಮಾತನಾಡಿ, ‘ಮೀಸಲಾತಿ ತಂದಿದ್ದೇ ದೇವೇಗೌಡರು. ರೈತರ ಪರ ಹೋರಾಟ ಮಾಡುತ್ತಿರುವುದರಲ್ಲಿ ಬಹುದೊಡ್ಡಪಾತ್ರ ದೊಡ್ಡಗೌಡರದ್ದು. ತಾಲ್ಲೂಕು ನೀರಾವರಿ ಯೋಜನೆಯನ್ನು ತರುವ ಮೂಲಕ ರೈತರು ನೆಮ್ಮದಿಯಾಗಿ ಬದಕುವಂತೆ ಮಾಡಲಾಗುತ್ತದೆ, ಕುಮಾರಣ್ಣ ಮುಖ್ಯಮಂತ್ರಿ ಆಗಿದ್ದಾಗ ನಮ್ಮ ಕ್ಷೇತ್ರದ ಅಭಿವೃದ್ಧಿಗೆ ನೂರಾರೂ ಕೋಟಿ ಅನುದಾನ ಬಿಡುಗಡೆಯಾಗಿದೆ, ಎಲ್ಲಾ ರಸ್ತೆಗಳಿಗೂ ಡಾಂಬಾರು ಮಾಡಿಸಲಾಗಿದೆ. ಪುರಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರಲಿದೆ’ ಎಂದರು.

ಜೆಡಿಎಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ, ಶಾಸಕರ ಪತ್ನಿ ಲಕ್ಷ್ಮೀ ಎ.ಮಂಜುನಾಥ,, ಮಹಿಳಾ ಘಟಕದ ತಾಲ್ಲೂಕು ಅಧ್ಯಕ್ಷೆ ಶೈಲಜಾ, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಪೊಲೀಸ್ ರಾಮಣ್ಣ, ಜೆಡಿಎಸ್ ಮುಖಂಡರಾದ ವಾಟರ್ ಬೋರ್ಡ್‌ ರಾಮಣ್ಣ, ಕಲ್ಕರೆ ಶಿವಣ್ಣ, ಧನಲಕ್ಷ್ಮಿ, ಜಿಲ್ಲಾ ಯಾದವ ಸಂಘದ ಅಧ್ಯಕ್ಷ ಕೃಷ್ಣ ಯಾದವ್‌, ಬಿಡದಿ ನಾಗರಾಜ್‌ ಯಾದವ್‌, ಕೆಂಚನಹಳ್ಳಿ ಪ್ರಕಾಶ್‌, ತಿಪ್ಪಸಂದ್ರದ ವೆಂಕಟೇಶ್‌, ಡಿ.ದೇವರಾಜ ಅರಸು ಸಾಂಸ್ಕೃತಿಕ ವಿಚಾರ ವೇದಿಕೆ ಅಧ್ಯಕ್ಷ ಪಿ.ವಿ.ಸೀತಾರಾಮ್‌, ಮಡಿವಾಳ ಸಮುದಾಯದ ಮುಖಂಡ ಎನ್‌ಇಎಸ್‌ ರಮೇಶ್‌, ಹೊಸಹಳ್ಳಿ ರಂಗಣ್ಣ, ಬೋರ್ವೆಲ್ ನರಸಿಂಹಯ್ಯ, ಡಿ.ಜಿ.ಕುಮಾರ್, ಬೆಳಗುಂಬ ಅಶೋಕ್‌ ಕುಮಾರ್‌, ತಿರುಮಲೆ ಭೈರಪ್ಪ, ನಟರಾಜ ಬಡಾವಣೆಯ ರವಿಕುಮಾರ್‌, ಸೇರಿದಂತೆ 23 ವಾರ್ಡ್‌ಗಳ ಜೆಡಿಎಸ್‌ ಅಭ್ಯರ್ಥಿಗಳು ಇದ್ದರು.

ಪ್ರತಿಕ್ರಿಯಿಸಿ (+)