ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆ ಎಚ್‌.ಡಿ.ದೇವೇಗೌಡರಿಂದ ಮತ ಯಾಚನೆ

ಸೋಮೇಶ್ವರ ಬಡಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿ ಪರವಾಗಿ ಮತಯಾಚಿಸಿದ ಶಾಸಕ
Last Updated 5 ನವೆಂಬರ್ 2019, 14:49 IST
ಅಕ್ಷರ ಗಾತ್ರ

ಮಾಗಡಿ: ಪಟ್ಟಣದ ಮತದಾರರಲ್ಲಿ ಜೆಡಿಎಸ್‌ ಅಭ್ಯರ್ಥಿಗಳ ಪರವಾಗಿ ಅಲೆ ಎದ್ದಿದೆ ಎಂದು ಶಾಸಕ ಎ.ಮಂಜುನಾಥ ತಿಳಿಸಿದರು.

ಪಟ್ಟಣದ ಸೋಮೇಶ್ವರ ಸ್ವಾಮಿಗೆ ಸೋಮವಾರ ಬೆಳಿಗ್ಗೆ ಪೂಜೆ ಸಲ್ಲಿಸಿದ ನಂತರ ಸೋಮೇಶ್ವರ ಬಡಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿ ಹೇಮಲತಾ ಪರವಾಗಿ ಮತಯಾಚಿಸಿ ಅವರು ಮಾತನಾಡಿದರು.

‘ಮತದಾರರು ನನಗೆ ಶಾಸಕ ಎಂದು ನಾಮಕರಣ ಮಾಡಿ ಒಂದೂವರೆ ವರ್ಷವಾಗಿದೆ. ಅಂಬೆಗಾಲಿಡುತ್ತಿದ್ದೇನೆ. ಬಡವರ ಮಕ್ಕಳನ್ನು ಕಟ್ಟಿಕೊಂಡು ಮತದಾರರಿಗೆ ಕೈಮುಗಿಯುತ್ತಿದ್ದೇನೆ. ಪುರಸಭೆಗೆ ಜೆಡಿಎಸ್‌ ಪಕ್ಷದ ಅಭ್ಯರ್ಥಿಗಳನ್ನು ಜನತೆ ಗೆಲ್ಲಿಸಲಿದ್ದಾರೆ ಎಂಬ ವಿಶ್ವಾಸ ನನಗಿದೆ’ ಎಂದರು.

‘14 ತಿಂಗಳು ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಗಳಾಗಿದ್ದಾಗ ಮಾಗಡಿ ಕ್ಷೇತ್ರಕ್ಕೆ ಬಿಡುಗಡೆ ಮಾಡಿಸಿರುವ ಅನುದಾನದ ಬಗ್ಗೆ ನ.6ರಂದು ಪಟ್ಟಿ ಬಿಡುಗಡೆ ಮಾಡುತ್ತೇನೆ. ನಾನೇನು ಹಿಟ್ ಅಂಡ್‌ ರನ್‌ ವ್ಯಕ್ತಿ ಅಲ್ಲ. ಕಾವೇರಿ ನದಿ ನೀರನ್ನು ದೇವೇಗೌಡ ಬ್ಯಾರೇಜ್‌ ಮೂಲಕ ಮಂಚನಬೆಲೆ ಮತ್ತು ಎತ್ತಿನಮನೆ ಗುಲಗಂಜಿ ಗುಡ್ಡದ ಜಲಾಶಯಕ್ಕೆ ತುಂಬಿಸಿ, ಅಲ್ಲಿಂದ ಮಾಗಡಿ ಪಟ್ಟಣಕ್ಕೆ ಕುಡಿಯುವ ನೀರು ಹರಿಸುವುದು ಖಂಡಿತ. ನನಗೆ ಎಚ್‌.ಎಂ.ರೇವಣ್ಣ ಗುರುಗಳಿದ್ದಂತೆ. ಕಾಳಾರಿ ಕಾವಲ್‌ ಬಳಿ 20 ಎಕರೆ ಭೂಮಿ ಖರೀದಿಸಿದ್ದೇನೆ. ಅಲ್ಲಿ ಗಾರ್ಮೆಂಟ್ಸ್‌ ಮತ್ತು ಆಹಾರ ಉತ್ಪನ್ನಗಳ ತಯಾರಿಕಾ ಘಟಕ ಆರಂಬಿಸುತ್ತೇನೆ’ ಎಂದರು.

‘ಚಿಕ್ಕಕಲ್ಯಾದಲ್ಲಿ ನಡೆದ ಉಪಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ ಅಭಿನಂದನಾ ಸಮಾರಂಭಕ್ಕೆ ಅಲ್ಲಿನ ಮತದಾರರು ಆಹ್ವಾನ ನೀಡಿದ್ದರಿಂದ ಹೋಗಿದ್ದೆ. ಎಚ್‌.ಸಿ.ಬಾಲಕೃಷ್ಣ ನನ್ನನ್ನು ಬಿಜೆಪಿ ಕಡೆ ವಾಲುತ್ತಿದ್ದಾರೆ ಎಂದು ಸುಳ್ಳು ಹೇಳುತ್ತಿದ್ದಾರೆ. ಪಟ್ಟಣದಲ್ಲಿ ಎಚ್‌.ಸಿ.ಬಾಲಕೃಷ್ಣ ಅವಧಿಯಲ್ಲಿ ಆರಂಭವಾಗಿದ್ದ ಒಳಚರಂಡಿ ಮತ್ತು 24X7 ಕುಡಿಯುವ ನೀರು ಸರಬರಾಜು ಯೋಜನೆಗಳು ಅವೈಜ್ಞಾನಿಕವಾಗಿದ್ದು, ಅರ್ಧಕ್ಕೆ ನಿಂತಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಲು ಮುಂದಾಗಿದ್ದೇನೆ’ ಎಂದರು.

‘ಅವರು ದೊಡ್ಡವರು; ನಾನು ಅವರ ಹೇಳಿಕೆಗಳಿಗೆ ಪ್ರತಿಕ್ರಿಯಿಸುವುದಿಲ್ಲ. ಪಟ್ಟಣದ ಮತದಾರರು ಪುರಸಭೆಯಲ್ಲಿ ನಮಗೆ ಅಧಿಕಾರ ನೀಡಲಿದ್ದಾರೆ’ ಎಂದರು.

ರಾಜ್ಯ ಜೆಡಿಎಸ್‌ ಪ್ರಧಾನ ಕಾರ್ಯದರ್ಶಿ ಕೆ.ಕೃಷ್ಣಮೂರ್ತಿ ಮಾತನಾಡಿ, ನ.7ರಂದು ಮಧ್ಯಾಹ್ನ 2 ಗಂಟೆಗೆ ಪಟ್ಟಣಕ್ಕೆ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಭೇಟಿ ಕೊಡಲಿದ್ದಾರೆ. ಕಲ್ಯಾಗೇಟ್‌ನಿಂದ ಡಾ.ರಾಜ್‌ಕುಮಾರ್‌ ರಸ್ತೆಯ ಮೂಲಕ ಕೆಂಪೇಗೌಡ ಸರ್ಕಲ್‌ ವರೆಗೆ ರೋಡ್‌ ಶೋ ನಡೆಸಿ, ಮತ ಯಾಚಿಸಲಿದ್ದಾರೆ ಎಂದರು.

ತಾಲ್ಲೂಕು ಜೆಡಿಎಸ್‌ ಮಹಿಳಾ ಘಟಕದ ಅಧ್ಯಕ್ಷೆ ಶೈಲಜಾ, 17ನೇ ವಾರ್ಡ್‌ ಜೆಡಿಎಸ್‌ ಅಭ್ಯರ್ಥಿ ಹೇಮಲತಾ, 16ನೇ ವಾರ್ಡಿನ ಅಭ್ಯರ್ಥಿ ವಿಜಯ ರೂಪೇಶ್‌ ಕುಮಾರ್‌ ಪರವಾಗಿ ಶಾಸಕರು ಮತಯಾಚಿಸಿದರು.

ಜೆಡಿಎಸ್‌ ಮುಖಂಡರಾದ ಕಲ್ಕೆರೆ ಶಿವಣ್ಣ, ಗೌರಮ್ಮ, ಭವ್ಯ, ಯಶೋಧಾ, ಧನಲಕ್ಷ್ಮೀ, ಹನುಮಂತಪುರದ ಶಿವರಾಮಯ್ಯ, ಆರ್‌.ಪುಟ್ಟಸ್ವಾಮಿಈಡಿಗ, ವಿನಯಕುಮಾರ್‌, ರೇಣುಕಪ್ಪ, ಮೆಡಪ್ಲಸ್‌ ಮಂಜುನಾಥ, ಹರೀಶ್‌, ಕೃಷ್ಣಮೂರ್ತಿ.ಎಂ.ಜಿ, ಹೊಸಹಳ್ಳಿ ರಂಗನಾಥ್‌, ಲವಣ್ಣ, ಮುಭಾರಕ್‌ ಧರ್ಮೇಂದ್ರ, ರಂಗನಾಥ, ಭರತ, ದೇವ, ಶ್ರೀನಿವಾಸ್‌, ರಾಜೀವ , ಮನೋಹರ್‌ ಇತರರು ಜೆಡಿಎಸ್‌ ಅಭ್ಯರ್ಥಿಗಳ ಪರವಾಗಿ ಮತಯಾಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT