ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿ ಚುನಾವಣೆ ತಯಾರಿ: ಪಕ್ಷದ ಮುಖಂಡರೊಂದಿಗೆ ಎಚ್‌.ಡಿ ಕುಮಾರಸ್ವಾಮಿ ಸಭೆ

ಗುಂಪುಗಾರಿಕೆ ಸಹಿಸಲ್ಲ; ಮೆಚ್ಚಿಸುವ ಅಗತ್ಯವಿಲ್ಲ: ಕುಮಾರಸ್ವಾಮಿ
Published 1 ಜೂನ್ 2023, 12:46 IST
Last Updated 1 ಜೂನ್ 2023, 12:46 IST
ಅಕ್ಷರ ಗಾತ್ರ

ಬಿಡದಿ (ರಾಮನಗರ): ‘ಗುಂಪುಗಾರಿಕೆ ಸಹಿಸುವುದಿಲ್ಲ. ಯಾರು, ಯಾರನ್ನೂ ಮೆಚ್ಚಿಸುವ ರೀತಿಯಲ್ಲಿ ಕೆಲಸ ಮಾಡುವ ಅಗತ್ಯವಿಲ್ಲ. ಜನರ ಜೊತೆ ಸಂಪರ್ಕದಲ್ಲಿದ್ದು, ಅವರಲ್ಲಿ ವಿಶ್ವಾಸ ಮೂಡಿಸಿ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಸೂಚನೆ ನೀಡಿದರು.

ಬಿಬಿಎಂಪಿ ಚುನಾವಣೆ ಹಿನ್ನೆಲೆಯಲ್ಲಿ ಗುರುವಾರ ಬಿಡದಿಯಲ್ಲಿರುವ ತಮ್ಮ ತೋಟದಲ್ಲಿ ಪಕ್ಷದ ಮುಖಂಡರೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ವಿಧಾನಸಭಾ ಚುನಾವಣೆ ಸೋಲಿನ ಕಾರಣಗಳನ್ನು ಪ್ರಸ್ತಾಪಿಸಿದ ಅವರು, ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು.

‘ಪಕ್ಷದೊಳಗೆ ಗುಂಪುಗಾರಿಕೆ ಮಾಡುವವರು ನನಗೆ ಬೇಡ. ಕೆಲಸ ಮಾಡುವವರಷ್ಟೇ ಸಾಕು. ಯಾರನ್ನೋ ಮೆಚ್ಚಿಸಲು ಹೋಗಿ ಪಕ್ಷವನ್ನು ಅಧೋಗತಿಗೆ ತಳ್ಳಬೇಡಿ. ಪಕ್ಷದ ನೆಲೆ ಇರುವ ವಾರ್ಡ್‌ಗಳಲ್ಲಿ ಉತ್ತಮವಾಗಿಕೆಲಸ ಮಾಡಿ’ ಎಂದು ತಾಕೀತು ಮಾಡಿದರು.

‘ಧೃತಿಗೆಡಬಾರದು’: ‘ಯಾವುದೇ ಕ್ಷಣದಲ್ಲಿ ಬಿಬಿಎಂಪಿ ಚುನಾವಣೆ ಘೋಷಣೆಯಾಗುವ ಸಾಧ್ಯತೆ ಇದೆ. ಹಾಗಾಗಿ, ಈಗಲೇ ನಾವು ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ವಿಧಾನಸಭೆ ಚುನಾವಣೆಯಲ್ಲಿ ಸೋತಿರುವುದರ ಕುರಿತು ಯಾರೂ ಧೃತಿಗೆಡಬಾರದು. ಪಕ್ಷ ಹಲವು ಸೋಲುಗಳನ್ನು ದಾಟಿಕೊಂಡು ಫೀನಿಕ್ಸ್ ಪಕ್ಷಿಯಂತೆ ಮೇಲೆದ್ದು ಬಂದಿದೆ’ ಎಂದು ಧೈರ್ಯ ತುಂಬಿದರು.

‘ವಿಧಾನಸಭೆ ಚುನಾವಣೆ ವೈಫಲ್ಯಗಳಿಂದ ಪಾಠ ಕಲಿಯಬೇಕು. ಮಾಡಿದ ತಪ್ಪನ್ನೇ ಮತ್ತೆ ಮಾಡಬಾರದು. ತಪ್ಪುಗಳನ್ನು ತಿದ್ದಿಕೊಂಡು ಪಕ್ಷವನ್ನು ತಳಮಟ್ಟದಿಂದ ಬಲಪಡಿಸುವತ್ತ ಗಮನ ಹರಿಸಬೇಕು’ ಎಂದರು.

‘ಪ್ರತಿ ವಾರ್ಡ್‌ ಮತ್ತು ಮತಗಟ್ಟೆಯಲ್ಲಿ ಪಕ್ಷವನ್ನು ಸಂಘಟಿಸಿ, ಕಾರ್ಯಕರ್ತರನ್ನು ಬೆಳೆಸಬೇಕು. ಸ್ವಯಂಪ್ರೇರಿತವಾಗಿ ಜನರು ಪಕ್ಷಕ್ಕೆ ಸೇರುವಂತಹ ವಾತಾವರಣವನ್ನು ಸೃಷ್ಟಿ ಮಾಡಬೇಕು. ಪಕ್ಷದ ಪರ ಜನರಿಗೆ ಒಳ್ಳೆಯ ಅಭಿಪ್ರಾಯ ಮತ್ತು ಅಭಿಮಾನ ಬರುವ ರೀತಿಯಲ್ಲಿ ಕೆಲಸ ಮಾಡಬೇಕು’ ಎಂದು ಸಲಹೆ ನೀಡಿದರು.

ವಿಧಾನ ಪರಿಷತ್ ಸದಸ್ಯ ಕೆ.ಎನ್. ತಿಪ್ಪೇಸ್ವಾಮಿ, ಪಕ್ಷದ ಬೆಂಗಳೂರು ನಗರ ಘಟಕದ ಅಧ್ಯಕ್ಷ ಎಚ್.ಎಂ. ರಮೇಶಗೌಡ ಸೇರಿದಂತೆ ಬಿಬಿಎಂಪಿ ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರಗಳ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT