ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಮನಕ್ಕೆ ತರದೇ ಸಭೆ ನಡೆಸಿದ್ದಕ್ಕೆ ಸಂಸದ ಡಿಕೆ ಸುರೇಶ್ ಮೇಲೆ ಎಚ್‌ಡಿಕೆ ಕಿಡಿ

ಡಿ.ಕೆ. ಸುರೇಶ್ ನಡೆಗೆ ಸದನದಲ್ಲಿ ಶಾಸಕ ಎಚ್‌.ಡಿ. ಕುಮಾರಸ್ವಾಮಿ ಪ್ರಶ್ನೆ
Last Updated 21 ಸೆಪ್ಟೆಂಬರ್ 2021, 5:04 IST
ಅಕ್ಷರ ಗಾತ್ರ

ರಾಮನಗರ: ಸಂಸದ ಡಿ.ಕೆ. ಸುರೇಶ್‌ ಸೋಮವಾರ ರಾಮನಗರದಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿದರು. ಅತ್ತ ವಿಧಾನಸಭೆ ಅಧಿವೇಶನದಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಇದಕ್ಕೆ ಆಕ್ಷೇ‍ಪ ವ್ಯಕ್ತಪಡಿಸಿದ್ದು, ‘ಸ್ಥಳೀಯ ಶಾಸಕರ ಗಮನಕ್ಕೆ ತರದೆಯೇ ಹೀಗೆ ಸಭೆ ನಡೆಸಲು ಅವರಿಗೆ ಅಧಿಕಾರ ಇದೆಯೇ?’ ಎಂದು ಪ್ರಶ್ನಿಸಿದರು.

ಅಧಿವೇಶನದಲ್ಲಿ ಮಾತನಾಡಿದ ಕುಮಾರಸ್ವಾಮಿ, ‘ನಾನು ಪ್ರತಿನಿಧಿಸುವ ಚನ್ನಪಟ್ಟಣ ಹಾಗೂ ನೆರೆಯ ರಾಮನಗರ ವಿಧಾನಸಭಾ ಕ್ಷೇತ್ರದ ನಗರಸಭೆಗಳ ಕುರಿತು ಪ್ರತ್ಯೇಕ ಸಭೆ ಕರೆಯಲು ಅವರು ಜಿಲ್ಲಾಧಿಕಾರಿಗೆ ಸೂಚಿಸಿದ್ದರು. ಅದರಂತೆ ಸಭೆ ನಿಗದಿ ಮಾಡಿ ಇದೇ 15ರಂದು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು. ಇದಕ್ಕೆ ನಾನು ಆಕ್ಷೇಪ ವ್ಯಕ್ತಪಡಿಸಿದ್ದೆ’ ಎಂದರು.

‘ಆದಾಗ್ಯೂ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮತ್ತೆ ಸಭೆ ನಡೆಸಲಾಗುತ್ತಿದೆ. ಇ–ಖಾತೆ, ವಸತಿ ಯೋಜನೆ ಈ ಎಲ್ಲದರ ಬಗ್ಗೆ ಚರ್ಚಿಸುವುದಾಗಿ ಹೇಳಿದ್ದಾರೆ. ಇದರ ಔಚಿತ್ಯ ಏನು? ಒಬ್ಬ ಶಾಸಕನ ಹಕ್ಕು ಮೊಟಕುಗೊಳಿಸಿ ಹೀಗೆ ಸಭೆ ನಡೆಸಲು ರಾಜ್ಯ ಸರ್ಕಾರ ಅನುಮತಿ ಕೊಟ್ಟಿದೆಯೇ’ ಎಂದರು.

ಇದಕ್ಕೆ ಸಚಿವ ಮಾಧುಸ್ವಾಮಿ ಪ್ರತಿಕ್ರಿಯಿಸಿ, ‘ದಿಶಾ ಸಮಿತಿ ಸಭೆ ನಡೆಸಲು ಮಾತ್ರ ಸಂಸದರಿಗೆ ಅವಕಾಶ ಇದೆ. ಕೇಂದ್ರ ಸರ್ಕಾರದ ಯೋಜನೆಗಳ ಪ್ರಗತಿಯನ್ನು ಅವರು ಪರಿಶೀಲಿಸಬಹುದು. ಅದನ್ನು ಹೊರತುಪಡಿಸಿ ಪ್ರತ್ಯೇಕವಾಗಿ ಸಭೆ ನಡೆಸಲು ಅವಕಾಶ ಇಲ್ಲ. ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಮಾತ್ರ ಕೆಡಿಪಿ ಸಭೆಗಳನ್ನು ಮಾಡಬಹುದು. ಮಂತ್ರಿಗಳೂ ತಮ್ಮ ಇಲಾಖೆ ಹೊರತುಪಡಿಸಿ ಉಳಿದಇಲಾಖೆಗಳ ಬಗ್ಗೆ ಮಾತನಾಡಲು ಕಾನೂನಿನಲ್ಲಿ ಅವಕಾಶ ಇಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT