ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರದ ಮೇಲೆ ಕಾಂಗ್ರೆಸ್‌ನ ಕ್ರೂರ ದೃಷ್ಟಿ ಬಿದ್ದಿದೆ: ಎಚ್‌.ಡಿ. ಕುಮಾರಸ್ವಾಮಿ

ನಗರಸಭೆ ಚುನಾವಣೆ ಅಭ್ಯರ್ಥಿಗಳ ಆಯ್ಕೆಗೆ ಎಚ್‌ಡಿಕೆ ಸಭೆ
Last Updated 6 ಏಪ್ರಿಲ್ 2021, 3:08 IST
ಅಕ್ಷರ ಗಾತ್ರ

ರಾಮನಗರ: ಕ್ಷೇತ್ರದ ಮೇಲೆ ಕಾಂಗ್ರೆಸ್ ನಾಯಕರು ಕ್ರೂರ ದೃಷ್ಟಿ ಬೀರಿದ್ದು, ಇಲ್ಲಿ ಶಾಂತಿ ಕದಡಬಾರದು ಎಂಬ ಉದ್ದೇಶದಿಂದ ನಗರಸಭೆ ಚುನಾವಣೆ ಜವಾಬ್ದಾರಿಯನ್ನು ನಾನೇ ವಹಿಸಿಕೊಂಡಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು
ಹೇಳಿದರು.

ನಗರದ ನಾಸಿರ್ ಕಲ್ಯಾಣ ಮಂಟಪದಲ್ಲಿ ಭಾನುವಾರ ರಾತ್ರಿ ನಡೆದ ನಗರಸಭೆ ಚುನಾವಣೆ ಪೂರ್ವಭಾವಿ ಸಭೆಗೂ ಮುನ್ನ ಪತ್ರಕರ್ತರ ಜೊತೆ ಅವರು ಮಾತನಾಡಿದರು. ರಾಮನಗರದಿಂದಲೇ ನನ್ನ ರಾಜಕೀಯ ಜೀವನ ಆರಂಭವಾಯಿತು. ಅಲ್ಲಿಂದ ಇಲ್ಲಿವರೆಗೆ ಯಾವುದೇ ರೀತಿಯ ಸಮಸ್ಯೆಗಳಿಲ್ಲದೆ ಎಲ್ಲರೂ ಸಹೋದರರಂತೆ ಬಾಳ್ವೆ ನಡೆಸುವ ಶಾಂತಿ ಕಾಣುತ್ತಿದ್ದೇವೆ. ಕ್ಷೇತ್ರದಲ್ಲಿ ಕಳೆದ 20 ವರ್ಷಗಳಿಂದ ಒಳ್ಳೆಯ ವಾತಾವರಣ ಇದೆ. ಈ ವಾತಾವರಣ ಮುಂದುವರೆಯಬೇಕೆಂಬ ಉದ್ದೇಶದಿಂದ ನಾನೇ ಚುನಾವಣೆಯ ಜವಾಬ್ದಾರಿ ಹೊತ್ತುಕೊಂಡಿದ್ದೇನೆ ಎಂದರು.

ನಗರದ ಜನರಿಗೆ ಮನೆ ಕಟ್ಟಿ ಕೊಡುವ ಉದ್ದೇಶದಿಂದ ಕೇಂದ್ರ ಸರ್ಕಾರದಿಂದ ₹30 ಕೋಟಿ ಅನುದಾನ ತಂದಿದೆ. ಕೊಳೆಗೇರಿ ಮಂಡಳಿಯಿಂದ ಅರ್ಜಿ ಆಹ್ವಾನಿಸಿದ್ದು, 900–1000 ಜನರು ತಲಾ ₹5 ಸಾವಿರ ಶುಲ್ಕದೊಂದಿಗೆ ಅರ್ಜಿ ಸಲ್ಲಿಸಿದ್ದರು. ಅವರು ಕಟ್ಟಿರುವ ಹಣ ಕೊಳೆಗೇರಿ ಅಭಿವೃದ್ಧಿ ಮಂಡಳಿಯಲ್ಲಿಯೇ ಇದೆ ಎಂದರು.

2013ರಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಮನೆಗಳ ವಿಚಾರವನ್ನೇ ಮುಖ್ಯವಾಗಿಟ್ಟುಕೊಂಡು ಚುನಾವಣೆ ನಡೆಸಿದರು. ಕುಮಾರಸ್ವಾಮಿ ಮನೆ ಕೊಡಲಿಲ್ಲ ಎಂದು ಅಪಪ್ರಚಾರ ಮಾಡಿದರು. ಬಿಜೆಪಿ ಹಾಗೂ ಕಾಂಗ್ರೆಸ್ ಆಡಳಿತದಲ್ಲಿ ಉಂಟಾದ ಸಮಸ್ಯೆಗಳಿಂದಾಗಿ ಮನೆ ನೀಡಲಾಗಲಿಲ್ಲ ಎಂದು ತಿಳಿಸಿದರು.

‘ನಾನು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿಯೇ ಪ್ರಾಥಮಿಕ ಹಂತದಲ್ಲಿ ಕೆಲ ಮನೆಗಳನ್ನು ನಿರ್ಮಿಸಿ ಫಲಾನುಭವಿಗಳಿಗೆ ನೀಡಲಾಗಿದೆ. ದೊಡ್ಡಮಣ್ಣುಗುಡ್ಡೆಯಲ್ಲಿ 250 ಮನೆಗಳನ್ನು ಹಂಚಿಕೆ ಮಾಡಿಲ್ಲ. ಮುಖ್ಯ ಮಂತ್ರಿ ಹುದ್ದೆಯಿಂದ ಕೆಳಗಿಳಿದ ಮೇಲೆ ಬಿಜೆಪಿ 5 ವರ್ಷ ಹಾಗೂ ಕಾಂಗ್ರೆಸ್ 5 ವರ್ಷ ಆಡಳಿತ ನಡೆಸಿದವು. ಆಗ ಕೆಲವೊಂದು ಸಮಸ್ಯೆಗಳು ಉದ್ಭವವಾಗಿದೆ ಎಂದು ಹೇಳಿದರು.

ಮಾಜಿ ಶಾಸಕರೊಬ್ಬರು ಯಾವುದೊ ಸಮಾರಂಭದಲ್ಲಿ ಜನರಿಗೆ ನಿವೇಶನ, ಮನೆಗಳಿಲ್ಲ ಎಂದು ಭಾಷಣ ಮಾಡಿದ್ದಾರೆ. ಆ ಮಾಜಿ ಶಾಸಕರು ಕ್ಷೇತ್ರದ ಅಭಿವೃದ್ಧಿ ಏನು ಕೊಡುಗೆ ನೀಡಿದ್ದಾರೋ ಗೊತ್ತಿಲ್ಲ ಎಂದು ಅವರು ತಿರುಗೇಟು
ನೀಡಿದರು.

‘ಈಗ ಕೊಳೆಗೇರಿ ಅಭಿವೃದ್ಧಿ ಮಂಡಳಿಗೆ 58 ಕೋಟಿ ಬಿಡುಗಡೆ ಮಾಡಿಸುವ ಮೂಲಕ ಸುಮಾರು 1800 ಮನೆಗಳನ್ನು ನಿರ್ಮಿಸುವ ನಿರ್ಧಾರವಾಗಿದೆ. 5 ಸಾವಿರ ನೀಡಿದವರು ಒಳಗೊಂಡಂತೆ ಬೇರೆಯವರಿಗೂ ಮನೆ ಕಲ್ಪಿಸಿಕೊಡುವ ಉದ್ದೇಶ ಹೊಂದಿದ್ದೇವೆ’ ಎಂದರು.
ಪಕ್ಷದ ಯುವ ಘಟಕದ ರಾಜ್ಯ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಜೆಡಿಎಸ್ ಮುಖಂಡರಾದ ರಾಜಶೇಖರ್, ಉಮೇಶ್, ಜಕೀರ್ ಹುಸೇನ್, ಜಯಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT