ಗುರುವಾರ , ನವೆಂಬರ್ 21, 2019
22 °C
ಮಾಗಡಿ ತಾಲ್ಲೂಕು ಮಟ್ಟದ ಅಥ್ಲೆಟಿಕ್ಸ್‌ ಕ್ರೀಡಾಕೂಟ

‘ನೆಮ್ಮದಿಯ ಜೀವನಕ್ಕೆ ಆರೋಗ್ಯ ಮುಖ್ಯ’

Published:
Updated:
Prajavani

ಮಾಗಡಿ: ‘ವ್ಯಕ್ತಿತ್ವ ವಿಕಸನಕ್ಕೆ ಕ್ರೀಡೆ ರಹದಾರಿ ಇದ್ದಂತೆ’ ಎಂದು ಶಾಸಕ ಎ.ಮಂಜುನಾಥ ತಿಳಿಸಿದರು.

ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಮಂಗಳವಾರ ನಡೆದ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ತಾಲ್ಲೂಕು ಮಟ್ಟದ ಅಥ್ಲೆಟಿಕ್ಸ್‌ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.

‘ಕ್ರೀಡಾಭ್ಯಾಸದಿಂದ ರೋಗಗಳಿಂದ ದೂರವಿರಬಹುದು. ಸದೃಡ ದೇಹದಲ್ಲಿ, ಸದೃಢ ಮನಸ್ಸಿರುತ್ತದೆ ಎಂಬ ಸೂಕ್ತಿಯಂತೆ, ನೆಮ್ಮದಿಯ ಜೀವನಕ್ಕೆ ದೈಹಿಕ ಮತ್ತು ಮಾನಸಿಕ ಆರೋಗ್ಯ ಅಗತ್ಯ. ವಿದ್ಯಾರ್ಥಿಗಳು ಕೇವಲ ಅಂಕ ಗಳಿಕೆಗೆ ಮಾತ್ರ ಸೀಮಿತರಾಗದೆ, ಕ್ರೀಡಾಭ್ಯಾಸದಲ್ಲೂ ತೊಡಗಿಸಿಕೊಳ್ಳಬೇಕು. ದೈಹಿಕ ಶಿಕ್ಷಣ ಶಿಕ್ಷಕರು ಮಕ್ಕಳಲ್ಲಿನ ದೈಹಿಕ ನ್ಯೂನತೆ ಗುರುತಿಸಿ, ಗುಣಪಡಿಸುವುದರ ಕಡೆಗೆ ಒತ್ತು ನೀಡಬೇಕು’ ಎಂದರು.

‘ಪಟ್ಟಣದ ಹೊರವಲಯದಲ್ಲಿ ಸರ್ಕಾರಿ ನೌಕರರಿಗೆ ಒಂದು ಎಕರೆ ಭೂಮಿ ನೀಡಿ, ಅಲ್ಲಿ ಮನರಂಜನಾ ಚಟುವಟಿಕೆಗಳಿಗೆ ಅನುಕೂಲ ಮಾಡಿಕೊಡಲಾಗುವುದು. ರಿಕ್ರಿಯೇಷನ್‌ ಕ್ಲಬ್‌ ಕಟ್ಟಡಕ್ಕೆ ಶಾಸಕರ ಅನುದಾನದಲ್ಲಿ ಹಣ ಸಹಾಯ ಮಾಡುತ್ತೇನೆ’ ಎಂದು ಶಾಸಕ ಎ.ಮಂಜುನಾಥ ತಿಳಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಸ್‌.ಸಿದ್ದೇಶ್ವರ ಮಾತನಾಡಿ, ‘ತಾಲ್ಲೂಕಿನಲ್ಲಿ 25,375 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಸದೃಢ ದೇಹ ಮತ್ತು ಬುದ್ಧಿವಂತ ಯುವಜನರು ದೇಶದ ನಿಜವಾದ ಸಂಪತ್ತು. ಕೆಂಪೇಗೌಡರ ತವರೂರಿನ ಮಕ್ಕಳು ರಾಜ್ಯಮಟ್ಟದ ಕ್ರೀಡಾಪಟುಗಳಾಗಿ ಮಾಗಡಿಗೆ ಹೆಸರು ತರಬೇಕು’ ಎಂದರು.

ತಾಲ್ಲೂಕು ಪಂಚಾಯಿತಿ ಇಒ, ಟಿ.ಪ್ರದೀಪ್‌, ಜೆಡಿಎಸ್‌ ಮುಖಂಡ ಕಲ್ಕೆರೆ ಶಿವಣ್ಣ, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಜಿ.ಶಿವರಾಮಯ್ಯ, ನೌಕರರ ಸಂಘದ ನಿರ್ದೇಶಕ ಸಿ.ಪ್ರಕಾಶ್‌, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಎಚ್‌.ಲೋಕೇಶ್‌, ಎಂ.ಎನ್‌.ಮಂಜುನಾಥ್‌, ನಯಾಜ್‌ ಅಹಮದ್‌, ರಹಮತ್‌, ತಿರುಮಲೆ ಜಗದೀಶ್‌, ಗ್ರಾಮ ಪಂಚಾಯಿತಿ ಸದಸ್ಯ ತಿಪ್ಪಸಂದ್ರ ರಘು ಕ್ರೀಡಾಕೂಟದಲ್ಲಿ ಮಾತನಾಡಿದರು.

ತಾಲ್ಲೂಕು ಶಿಕ್ಷಕರ ಸಂಘದ ಮುಖಂಡ ಮಲ್ಲಿಕಾರ್ಜುನ ಸ್ವಾಮಿ, ಮಲ್ಲೂರು ಲೋಕೇಶ್‌, ಬಿ.ಎನ್‌.ಜಯರಾಮ್‌, ತಾಲ್ಲೂಕು ದೈಹಿಕ ಶಿಕ್ಷಣ ಅಧಿಕಾರಿ ಸಿ.ಬಿ.ಅಶೋಕ್‌, ತಾಲ್ಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಜುಮ್ನಾಳ್‌, ದೈಹಿಕ ಶಿಕ್ಷಣ ಶಿಕ್ಷಕ ಕೆ.ಟಿ.ವೆಂಕಟೇಶ್‌, ತಿಪ್ಪಸಂದ್ರದ ದಯಾನಂದ್‌, ಗೌರಿಶಂಕರ್‌, ರಾಜೇಗೌಡ, ಅರಸನಾಳ್‌, ಪಾವಗಡ ಹನುಮಂತಪ್ಪ, ಗವಿನಾಗಮಂಗಲ ಹನುಮಂತೇಗೌಡ ಇದ್ದರು.

ವಿವಿಧ ಕ್ರೀಡೆಗಳಲ್ಲಿ ವಿಜೇತರಾದ ಕ್ರೀಡಾಪಟುಗಳಿಗೆ ಬಹುಮಾನ ವಿತರಿಸಲಾಯಿತು.

ಪ್ರತಿಕ್ರಿಯಿಸಿ (+)