ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಕಪುರ: ‘ಚಿಕಿತ್ಸೆ’ಗಾಗಿ ಕಾಯುತ್ತಿದೆ ವಸತಿ ತಾಣ

ಕನಕಪುರ ಸರ್ಕಾರಿ ಆಸ್ಪತ್ರೆ ನೌಕರರ ಕ್ವಾರ್ಟಸ್‌‌: ಮುರುಕಲು ಮನೆಗಳಲ್ಲೇ ವಾಸ
Last Updated 16 ಮೇ 2022, 2:48 IST
ಅಕ್ಷರ ಗಾತ್ರ

ಕನಕಪುರ: ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುವ ವೈದ್ಯರು ಮತ್ತು ಸಿಬ್ಬಂದಿಯ ಕ್ವಾರ್ಟಸ್‌ ಸರಿಯಾದ ನಿರ್ವಹಣೆ ಇಲ್ಲದೆ, ಸಮಸ್ಯೆಗಳ ಆಗರವಾಗಿದೆ.

ಕನಕಪುರ ನಗರದ ಚರ್ಚ್‌ ರಸ್ತೆಯಲ್ಲಿ ಸುಮಾರು 80x150 ಅಡಿ ಉದ್ದಳತೆಯ 5 ಕ್ವಾರ್ಟಸ್‌, ಟಿಟಿಸಿ ಕ್ಲಬ್‌ ಎದುರುಗಡೆ ಮುಸ್ಲಿಮ್‌ ಸ್ಮಶಾನದ ಪಕ್ಕದಲ್ಲಿರುವ ಸುಮಾರು 80x100 ಉದ್ದಳತೆಯ 3 ಕ್ವಾರ್ಟಸ್‌ಗಳು ಹಾಳಾಗಿ ಅತ್ಯಂತ ದಯನೀಯ ಸ್ಥಿತಿಯಲ್ಲಿವೆ. ಇದರ ಮಧ್ಯದಲ್ಲೇ ಎರಡೂ ಕಡೆ ಒಬ್ಬೊಬ್ಬರು ಆಸ್ಪತ್ರೆ ಸಿಬ್ಬಂದಿ ಇನ್ನು ಮುರುಕಲು ಮನೆಯಲ್ಲೇ ವಾಸಿಸುತ್ತಿದ್ದಾರೆ.

ಸ್ವಾತಂತ್ರ‍್ಯ ನಂತರದಲ್ಲಿ ಕನಕಪುರ ಮತ್ತು ಕನಕಪುರ ತಾಲ್ಲೂಕಿನ ಜನತೆಗೆ ಅಂದಿನ ಕಾಲದಲ್ಲಿ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆಯನ್ನು ಬಸ್‌ ನಿಲ್ದಾಣದ ಸಮೀಪದಲ್ಲಿ ದಾನಿಗಳು ಕೊಟ್ಟಂತಹ ಜಾಗದಲ್ಲಿ ಕಟ್ಟಲಾಗಿತ್ತು. ಅಲ್ಲಿ ಕೆಲಸ ಮಾಡುವ ವೈದ್ಯರು ಸೇರಿದಂತೆ ನೌಕರರು, ಸಿಬ್ಬಂದಿ ವಾಸಿಸಲು 8 ಕ್ವಾರ್ಟಸ್‌ ಮನೆಗಳನ್ನು ನಿರ್ಮಾಣ ಮಾಡಲಾಗಿತ್ತು.

ಒಬ್ಬರು ವೈದ್ಯರು, ಒಬ್ಬರು ಸೀನಿಯರ್‌ ಹೆಲ್ತ್‌ ಇನ್‌ಸ್ಪೆಕ್ಟರ್‌, ಒಬ್ಬರು ತಾಲ್ಲೂಕು ಎಲ್‌ಎಚ್‌ವಿ, ಇಬ್ಬರು ಕಿರಿಯ ಆರೋಗ್ಯ ಮಹಿಳೆಯರು, ಒಬ್ಬರು ಗ್ರೂಪ್‌ ಡಿ, ಒಬ್ಬರು ಕ್ಲರ್ಕ್‌‌, ಒಬ್ಬರು ಡ್ರೈವರ್‌ ಉದ್ಯೋಗಿಗಳಿಗೆ ಅವಕಾಶ ಮಾಡಿಕೊಡಲಾಗಿತ್ತು. ಇವರು ಇರಲು ಸರ್ಕಾರವು ಅವರಿಗೆ ಬರುವ ಸಂಬಂಳದಲ್ಲಿ ಶೇಕಡ 3ರಿಂದ 5ರಷ್ಟು ವೇತನವನ್ನು ಕಡಿತ ಮಾಡಿಕೊಳ್ಳುತ್ತಾ ಬಂದಿದೆ.

ತಾಲ್ಲೂಕು ಮತ್ತು ಕನಕಪುರ ಬೆಳೆದಂತೆ ಮೆಳೆಕೋಟೆ ಸಮೀಪದಲ್ಲಿ ವಿಸ್ತಾರವಾಗಿ ಐಪಿಪಿ ಆಸ್ಪತ್ರೆಯನ್ನು ಕಟ್ಟಿಸಲಾಗಿತ್ತು. ಹೆರಿಗೆ ಮತ್ತು ಐಪಿಪಿ ಆಸ್ಪತ್ರೆ ಎರಡೂ ಕಡೆ ಇರುವ ವೈದ್ಯರು ಮತ್ತು ಸಿಬ್ಬಂದಿಗೆ ಇದ್ದದ್ದು 8 ಕ್ವಾರ್ಟಸ್‌ ಮಾತ್ರ. ಹೀಗಾಗಿ ಕ್ವಾರ್ಟಸ್‌ಗಳಿಗೆ ಬೇಡಿಕೆ ಹೆಚ್ಚಾಗಿ ತಮಗೆ ಬೇಕೆಂದು ಶಿಫಾರಸ್ಸು ಮಾಡಿ ಪಡೆದುಕೊಳ್ಳುತ್ತಿದ್ದರು.

ಸುಮಾರು 10 ವರ್ಷಗಳ ಹಿಂದೆ ತುಂಬಾ ಚೆನ್ನಾಗಿ ಸುಸ್ಥಿತಿಯಲ್ಲಿದ್ದ ಕ್ವಾರ್ಟಸ್‌ಗಳು ನಂತರದಲ್ಲಿ ಸರಿಯಾದ ನಿರ್ವಹಣೆ ಇಲ್ಲದೆ ಕ್ರಮೇಣ ಹಾಳಾಗುತ್ತಾ ಬಂದಿವೆ. ಚಾವಣಿ ಹಾಳಾಗಿ ಮಳೆಯ ನೀರು ಮನೆ ಒಳಗೆಬಿದ್ದು ಸೋರಲಾರಂಭಿಸಿದೆ. ಈಗ ಮನೆಗಳು ಸಂಪೂರ್ಣ ಹಾಳಾಗಿದ್ದು ವಾಸಕ್ಕೆ ಯೋಗ್ಯವಾಗಿರದೆ ಪಾಳು ಬಿದ್ದಿವೆ.

ಐಪಿಸಿ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಸುರೇಶ್‌ ಚರ್ಚ್‌ ರಸ್ತೆಯಲ್ಲಿ ಮತ್ತು ನಾಗರಾಜು ಎಂಬುವರು ಟಿಟಿಸಿ ಕ್ಲಬ್‌ ಎದುರುಗಡೆ ಇರುವ ಮುಸ್ಲಿಮ್‌ ಸ್ಮಶಾನ ಪಕ್ಕದ ಕ್ವಾರ್ಟಸ್‌ನಲ್ಲಿ ವಾಸ ಮಾಡುತ್ತಿದ್ದಾರೆ. ಆದರೆ ಇಲಾಖೆಯು ಯಾವುದೆ ನಿರ್ವಹಣೆ ಮಾಡುವುದಿಲ್ಲ. ಎಲ್ಲವನ್ನು ತಾವೇ ನಿರ್ವಹಣೆ ಮಾಡಿ, ರಿಪೇರಿಯನ್ನು ಮಾಡಿಸಿಕೊಳ್ಳುತ್ತಿದ್ದಾರೆ. ಇತ್ತ ಬಾಡಿಗೆಯನ್ನು ಕಟ್ಟುತ್ತಿದ್ದಾರೆ.

ಇನ್ಫೊಸಿಸ್‌ ಸಂಸ್ಥೆಯ ಸುಧಾಮೂರ್ತಿ ಅವರು ತಾಲ್ಲೂಕಿನ ಮಹಿಳೆಯರಿಗಾಗಿಯೇ ವೈಯಕ್ತಿಕವಾಗಿ ₹50 ಕೋಟಿ ವೆಚ್ಚದಲ್ಲಿ ಅತ್ಯಂತ ಆಧುನಿಕವಾದ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆಯನ್ನು ಕಟ್ಟಿಸಿಕೊಟ್ಟಿದ್ದಾರೆ. ಇಲ್ಲಿ ಕೆಲಸ ನಿರ್ವಹಿಸುವ ವೈದ್ಯರು, ನೌಕರರು, ಸಿಬ್ಬಂದಿಗೆ ಒಂದು ಕ್ವಾರ್ಟಸ್‌ ಅವಶ್ಯಕತೆಯಿದೆ.

ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆಯ ಸಮೀಪದಲ್ಲೇ ಚರ್ಚರಸ್ತೆ ಮತ್ತು ಟಿಟಿಸಿ ಕ್ಲಬ್‌ ಎದುರುಗಡೆ ಇರುವ ಕ್ವಾರ್ಟಸ್‌ ಜಾಗವು ನಗರದ ಹೃದಯಭಾಗದಲ್ಲಿ ಇರುವುದರಿಂದ ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿಗೆ ತುಂಬಾ ಅನುಕೂಲವಾಗುತ್ತದೆ. ಸರ್ಕಾರವು ಶೀಘ್ರವೇ ಈ ಜಾಗದಲ್ಲಿ ನಾಲ್ಕದು ಹಂತಸ್ತಿನ ವಸತಿ ಸಮುಚ್ಚಯವನ್ನು ಕಟ್ಟಿಸಬೇಕೆಂಬುದು ನಾಗರಿಕರ ಒತ್ತಾಯವಾಗಿದೆ.

ಯಾರ ನಿರ್ವಹಣೆಯೂ ಇಲ್ಲ
ಇಲ್ಲಿನ ಕ್ವಾರ್ಟಸ್‌ನಲ್ಲಿ 25 ವರ್ಷದಿಂದ ಇದ್ದೇನೆ. ಇಲ್ಲಿ ಕ್ವಾರ್ಟಸ್‌ ಸಿಕ್ಕಿದ್ದರಿಂದ ತುಂಬಾ ಅನುಕೂಲವಾಗಿತ್ತು. ಆದರೆ ಕ್ವಾರ್ಟಸ್‌ನ ರಿಪೇರಿ ಮಾಡಿಸುವುದಿಲ್ಲ. ಮಳೆಯ ನೀರು ಸೋರುತ್ತದೆ, ಕಿಟಿಕಿ ಬಾಗಿಲುಗಳುಹಾಳಾಗಿವೆ. ಸುತ್ತಲೂ ಕೌಂಪೌಂಡ್‌ ಇಲ್ಲದೆ, ಮನೆಗೆ ರಕ್ಷಣೆಯಿಲ್ಲ. ಇದರ ನಿರ್ವಹಣೆಯನ್ನು ಪಿಡಬ್ಲ್ಯೂಡಿ, ಜಿಲ್ಲಾ ಪಂಚಾಯಿತಿ, ಆರೋಗ್ಯ ಇಲಾಖೆ ಯಾರು ಮಾಡುತ್ತಿದ್ದಾರೆ ಎಂದು ಗೊತ್ತಿಲ್ಲ. ಯಾರನ್ನು ಕೇಳಿದರು ಮನೆ ರಿಪೇರಿ ಬಗ್ಗೆ ಗಮನ ಕೊಡುತ್ತಿಲ್ಲ.
ನಾಗರಾಜು, ಐಪಿಪಿ ಆಸ್ಪತ್ರೆಯ ಗ್ರೂಪ್‌ ಡಿ ನೌಕರ

ಬಹುಮಹಡಿ ಕಟ್ಟಿದರೆ ಅನುಕೂಲ
ಆರೋಗ್ಯ ಇಲಾಖೆಗೆ ಸೇರಿದ, ಕ್ವಾರ್ಟಸ್‌ ಕಟ್ಟಿರುವ ಎರಡು ಜಾಗವು ನಗರದ ಹೃದಯ ಭಾಗದಲ್ಲಿದೆ. ಈ ಎರಡು ಜಾಗದಲ್ಲಿ ಪೊಲೀಸ್‌ ಕ್ವಾರ್ಟಸ್‌ ರೀತಿಯಲ್ಲಿ ಬಹುಮಹಡಿಯನ್ನು ಕಟ್ಟಿದರೆ 50ಕ್ಕೂ ಹೆಚ್ಚು ವಸತಿ ಗೃಹಗಳನ್ನು ನಿರ್ಮಾಣ ಮಾಡಬಹುದು. ಇದರಿಂದ ಎರಡೂ ಕಡೆ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುವ ವೈದ್ಯರು, ನೌಕರರು, ಸಿಬ್ಬಂದಿಗೆ ವಸತಿ ಸಿಕ್ಕಿ ಅನುಕೂಲವಾಗಲಿದೆ. ನಾನು ಹಲವು ವರ್ಷಗಳ ಕಾಲ ಇದೇ ಕ್ವಾರ್ಟಸ್‌ನಲ್ಲಿ ಇದ್ದು ಸ್ವಂತ ಮನೆಕಟ್ಟಿಸಿಕೊಂಡು ಹೋಗಿದ್ದೇನೆ.
ಡಿ.ಪಿ.ಪುಟ್ಟಸ್ವಾಮಿ, ಹಿರಿಯ ಆರೋಗ್ಯ ನಿರೀಕ್ಷಕ, ಕನಕಪುರ

ವಸತಿ ಸಮುಚ್ಚಯಕ್ಕೆ ವರದಿ
ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಸೇರಿದ ಕ್ವಾರ್ಟಸ್‌ಗಳು ಚರ್ಚರಸ್ತೆ ಮತ್ತು ಮುಸ್ಲಿಂ ಸ್ಮಶಾನದ ಪಕ್ಕದಲ್ಲಿವೆ. ತುಂಬಾ ಹಿಂದೆ ಕಟ್ಟಿದ್ದರಿಂದ ಮನೆಗಳು ಹಾಳಾಗಿ ಬಳಸಲು ಆಗುತ್ತಿಲ್ಲ. ಅವುಗಳನ್ನು ಕೆಡವಿ ಅಲ್ಲಿ ಹೊಸದಾಗಿ ಬಹುಮಹಡಿಗಳ ವಸತಿ ಸಮುಚ್ಚಯ ಮಾಡಲು ಸರ್ಕಾರಕ್ಕೆ ವರದಿ ಕಳಿಸಲಾಗಿದೆ. ಕೆಎಚ್‌ಎಸ್‌ಆರ್‌ಪಿ ನಿರ್ಮಾಣ ವಿಭಾಗ ಅದರ ಜವಾಬ್ದಾರಿ ಹೊತ್ತಿದ್ದು ಸ್ಥಳ ಪರಿಶೀಲನೆ ನಡೆಸಿದೆ. ಕೋವಿಡ್‌ ಕಾರಣದಿಂದ 2 ವರ್ಷ ನಿರ್ಮಾಣಕ್ಕೆ ಅವಕಾಶ ಆಗಿರಲಿಲ್ಲ. ಮುಂದಿನ ಸಾಲಿನಲ್ಲಿ ಸರ್ಕಾರಕ್ಕೆ ಪ್ರಸ್ತಾವ ಕಳಿಸಿ ಕ್ವಾರ್ಟಸ್‌ ನಿರ್ಮಾಣ ಮಾಡಿಸಲಾಗುವುದು.
ಡಾ.ವಾಸು, ಆಡಳಿತಾಧಿಕಾರಿ, ಐಪಿಪಿ ಆಸ್ಪತ್ರೆ, ಕನಕಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT