ಜಿಲ್ಲೆಯಲ್ಲಿ ಸದ್ಯ ಮೂರು ಕಡೆ ಮಾತ್ರ ಸ್ಟೆಮಿ ವ್ಯವಸ್ಥೆ ಇದೆ. ಉಳಿದ ತಾಲ್ಲೂಕು ಕೇಂದ್ರಗಳಾದ ಚನ್ನಪಟ್ಟಣ ಹಾರೋಹಳ್ಳಿ ಸೇರಿದಂತೆ ಹೋಬಳಿ ಮಟ್ಟದ ಆಸ್ಪತ್ರೆಗಳಿಗೂ ಸ್ಟೆಮಿ ವ್ಯವಸ್ಥೆಗೆ ಕೋರಿ ಇಲಾಖೆಯ ಮೇಲಧಿಕಾರಿಗಳಿಗೆ ಪತ್ರ ಬರೆಯಲಾಗಿದೆ
– ಡಾ. ನಿರಂಜನ್ ಜಿಲ್ಲಾ ಆರೋಗ್ಯಾಧಿಕಾರಿ ಬೆಂಗಳೂರು ದಕ್ಷಿಣ ಜಿಲ್ಲೆ
2 ವರ್ಷದಲ್ಲಿ 26741 ಮಂದಿಗೆ ಇಸಿಜಿ
ಜಿಲ್ಲೆಯಲ್ಲಿರುವ ಸ್ಟೆಮಿ ಕೇಂದ್ರಗಳಲ್ಲಿ ಕಳೆದೆರಡು ವರ್ಷದಲ್ಲಿ 26741 ಮಂದಿಗೆ ಇಸಿಜಿ ಮಾಡಲಾಗಿದೆ. ಈ ಪೈಕಿ 2023ರ ಏಪ್ರಿಲ್‌ನಿಂದ 2024ರ ಮೇ ತಿಂಗಳವರೆಗೆ 8429 ಮಂದಿ ಹೃದಯ ನೋವಿನ ಕಾರಣಕ್ಕೆ ಇಸಿಜಿ ಮಾಡಿಸಿಕೊಂಡಿದ್ದಾರೆ. ಇದರಲ್ಲಿ ಚಿಂತಾಜನಕವಾಗಿದ್ದ 152 ಮಂದಿಯನ್ನು ಜಯದೇವ ಸಂಸ್ಥೆಗೆ ರವಾನಿಸಲಾಗಿತ್ತು. 2024ರ ಏಪ್ರಿಲ್‌ನಿಂದ 2025ರ ಮಾರ್ಚ್ ಅವಧಿಯಲ್ಲಿ ಇಸಿಜಿ ಮಾಡಿಸಿಕೊಂಡ 18312 ಮಂದಿ ಪೈಕಿ ಚಿಂತಾಜನಕ ಸ್ಥಿತಿಯಲ್ಲಿದ್ದ 969 ಮಂದಿಯನ್ನು ಜಯದೇವ ಸಂಸ್ಥೆಗೆ ಕಳಿಸಲಾಗಿತ್ತು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದರು.
‘ಯುವಜನ, ಮಧ್ಯ ವಯಸ್ಕರು ಹೆಚ್ಚು ಬಲಿ’
ಕಳೆದ 20 ವರ್ಷಗಳಿಂದಲೂ ಹೃದಯಾಘಾತಗಳು ಸಂಭವಿಸುತ್ತಿವೆ. ಆದರೆ, ಇತ್ತೀಚೆಗೆ ಅವು ಹೆಚ್ಚು ಸುದ್ದಿಯಾಗುತ್ತಿರುವುದರಿಂದ ಜನರಲ್ಲಿ ಆತಂಕದ ಜೊತೆಗೆ ಜಾಗೃತಿಯೂ ಹೆಚ್ಚಾಗಿದೆ. ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದ ಯುವಜನರು ಹಾಗೂ ಮಧ್ಯ ವಯಸ್ಕರು ಹೃದಯಾಘಾತಕ್ಕೆ ಹೆಚ್ಚು ಬಲಿಯಾಗುತ್ತಿದ್ದಾರೆ. ಹೃದಘಾತಕ್ಕೆ ಕಾರಣವಾಗುವ ಧೂಮಪಾನ, ರಕ್ತದೊತ್ತಡ, ಮಧುಮೇಹ, ಕಾರ್ಯೋತ್ತಡವವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು. ಹೃದಯಾಘಾತ ಸಂಭವಿಸಿರುವವರಲ್ಲಿ ಶೇ 70ರಷ್ಟು ಮಂದಿಗೆ ನಿಖರ ಕಾರಣವಿದೆ. ಉಳಿದ ಶೇ 30ರಷ್ಟು ಮಂದಿಯಲ್ಲಿ ನಿಖಿರ ಕಾರಣ ಗೊತ್ತಾಗುತ್ತಿಲ್ಲ. ಇದರ ತಪಾಸಣೆಗೆ ಅಗತ್ಯ ಕ್ರಮ ಕೈಗೊಳ್ಳುವ ಕುರಿತು ಸಂಸತ್ತಿನ ಸ್ಥಾಯಿ ಸಮಿತಿಯಲ್ಲಿ ನಾನು ಪ್ರಸ್ತಾಪಿಸಿದ್ದೇನೆ. ವಾಯುಮಾಲಿನ್ಯ, ಸೇವಿಸುವ ತರಕಾರಿ ಸೇರಿದಂತೆ ಇತರ ತಿನಿಸುಗಳಲ್ಲಿ ಬಳಸುವ ಕೃತಕ ಗೊಬ್ಬರ, ಕೀಟನಾಶಕಗಳು ಸಹ ಹೃದಯಾಘಾತವೇ ಕಾರಣವೇ ಎಂಬುದರ ಅಧ್ಯಯನ ಮತ್ತು ಸಂಶೋಧನೆ ನಡೆಯಬೇಕು’ ಎಂದು ಸಂಸದ ಡಾ. ಸಿ.ಎನ್. ಮಂಜುನಾಥ್ ಹೇಳಿದರು.