ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಗಡಿ | ಸುರಿದ ಮಳೆ, ಕೊಚ್ಚಿ ಹೋದ ತರಕಾರಿ

ಬೀದಿಬದಿ ವ್ಯಾಪಾರಿಗಳ ಅಳಲು; ಸೂಕ್ತ ವ್ಯವಸ್ಥೆ ಕಲ್ಪಿಸಲು ಆಗ್ರಹ
Last Updated 24 ಏಪ್ರಿಲ್ 2020, 12:55 IST
ಅಕ್ಷರ ಗಾತ್ರ

ಮಾಗಡಿ: ಮಳೆ ಬಂದರೆ ಸಾಕು. ನಮ್ಮ ಅವಸ್ಥೆ ಯಾರಿಗೂ ಬೇಡ. ರಸ್ತೆಯ ನೀರು ಫುಟ್‌ಪಾತ್‌ಗೆ ನುಗ್ಗುತ್ತದೆ. ಸೊಪ್ಪು, ತರಕಾರಿ, ಹಣ್ಣು ಮಾರಾಟ ಮಾಡಲು ಕಷ್ಟವಾಗುತ್ತದೆ. ಒಮ್ಮೊಮ್ಮೆ ಜೋರು ಮಳೆ ಬಂದರೆ ನಮ್ಮ ಸಾಮಗ್ರಿಗಳೆಲ್ಲ ಕೊಚ್ಚಿ ಹೋಗುತ್ತವೆ..

ಇಲ್ಲಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಪಕ್ಕದ ರಸ್ತೆಯಲ್ಲಿ ಹೂವು– ತರಕಾರಿ ಮಾರಾಟ ಮಾಡುವ ಕಲಾವತಿ ಅವರ ಮಾತುಗಳಿವು.

ಪಟ್ಟಣದಲ್ಲಿ ಶುಕ್ರವಾರ ಮುಂಜಾನೆ 7.30ರಲ್ಲಿ ಅರ್ಧಗಂಟೆಯ ಕಾಲ ಭಾರಿ ಮಳೆ ಸುರಿದ ಮಳೆ ಕಲಾವತಿ ಅವರಂಥ ನೂರಾರು ಬೀದಿಬದಿ ವ್ಯಾಪಾರಿಗಳಿಗೆ ಕಷ್ಟ ತಂದೊಡ್ಡಿತು. ಚರಂಡಿ ವ್ಯವಸ್ಥೆ ಸರಿಯಿಲ್ಲದ ಕಾರಣ ಮಳೆಯ ನೀರೆಲ್ಲಾ ರಸ್ತೆಯ ಮೇಲೆ ಹರಿಯಿತು. ಹೂವು, ಹಣ್ಣು, ತರಕಾರಿ, ಸೊಪ್ಪು ನೀರಿನಲ್ಲಿ ಕೊಚ್ಚಿ ಹೋದವು.

ನುಗ್ಗುತ್ತಿದ್ದ ನೀರಿನಿಂದ ತರಕಾರಿ ರಕ್ಷಿಸುತ್ತಾ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ನಮ್ಮ ಬಡ ವ್ಯಾಪಾರಿಗಳಿಗೆ ಸೂಕ್ತ ಅನುಕೂಲವನ್ನು ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ಬೀದಿಬದಿ ತರಕಾರಿ ಮಾರಾಟ ಮಾಡುವವರಿಗೆ 30 ವರ್ಷಗಳಿಂದಲೂ ಅನುಕೂಲ ಮಾಡಿಕೊಟ್ಟಿಲ್ಲ. ಗುತ್ತಿಗೆದಾರರು ನಿತ್ಯ ಅಧಿಕ ಸುಂಕ ವಸೂಲಿ ಮಾಡುತ್ತಿದ್ದಾರೆ. ನಮಗೆ ಕುಡಿಯುವ ನೀರು, ನೆರಳು, ಶೌಚಾಲಯದ ಅನುಕೂಲ ಮಾಡಿಕೊಟ್ಟಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೀದಿಬದಿ ವ್ಯಾಪಾರಿಗಳನ್ನು ಒಂದೆಡೆಯಿಂದ ಮತ್ತೊಂದೆಡೆಗೆ ಫುಟ್ಬಾಲ್‌ನಂತೆ ಒದೆಯುತ್ತಿದ್ದಾರೆ. ಪುರಸಭೆ ತರಕಾರಿ ಮಳಿಗೆಗೆಳಲ್ಲಿ ಬಹುಪಾಲನ್ನು ಪುರಸಭೆ ಸದಸ್ಯರೇ ಪಡೆದುಕೊಂಡಿದ್ದಾರೆ. ಪುರಸಭೆಗೆ ಕಡಿಮೆ ಬಾಡಿಗೆ ಕಟ್ಟಿ, ಖಾಸಗಿ ವ್ಯಕ್ತಿಗಳಿಂದ ಅಧಿಕ ಬಾಡಿಗೆ ಪಡೆಯುತ್ತಿದ್ದಾರೆ. ಕಡು ಬಡವರಾದ ಬೀದಿ ಬದಿ ವ್ಯಾಪಾರಿಗಳಿಗೆ ಸೂಕ್ತವಾದ ಅನುಕೂಲ ಮಾಡಿಕೊಟ್ಟಿಲ್ಲ ಎಂದು ಹೇಳಿದರು.

‘ಮಳೆ ಬಂದರೆ ನೀರಿನಲ್ಲಿ ನಮ್ಮ ತರಕಾರಿ ಕೊಚ್ಚಿಹೋಗುತ್ತಿದೆ. ಬಿಸಿಲು, ದೂಳಿನಲ್ಲಿ ಕುಳಿತು ವ್ಯಾಪಾರ ಮಾಡಬೇಕಿದೆ. ಸರ್ಕಾರ ನಮಗೆ ಅನುಕೂಲ ಮಾಡಿಕೊಡಬೇಕು’ ಎಂದು ಹೂವು ಮಾರಾಟಗಾರ ಮೋಹನ್‌ ಮನವಿ ಮಾಡಿದರು.

ಮಧ್ಯವರ್ತಿಗಳ ಹಾವಳಿ:‘ಹೂವು, ತರಕಾರಿ ಬೆಳೆದ ರೈತರಿಗೆ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಮಧ್ಯವರ್ತಿಗಳೇ ಅಡ್ಡಿ ಪಡಿಸುತ್ತಿದ್ದಾರೆ’ ಎಂದು ಸೊಪ್ಪು ಬೆಳೆಯುವ ಮಂಗಳಮ್ಮ ಆರೋಪಿಸಿದರು.

ಪುರಸಭೆ ವತಿಯಿಂದ ರೈತರು ತರಕಾರಿ ಮಾರುವ ಸ್ಥಳ ಎಂದು ನಾಮ ಫಲಕ ಹಾಕಿದ್ದಾರೆ. ಆದರೆ ರೈತರು ಸೊಪ್ಪು ತರಕಾರಿ ಮಾರಾಟ ಮಾಡಲು ಅವಕಾಶ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತರಕಾರಿ ಬೆಳೆಗಾರರಾದ ಕೃಷ್ಣಪ್ಪ, ಹನುಮಂತಯ್ಯ, ಮಂಜುನಾಥ, ರಾಜಶೇಖರಯ್ಯ, ಮಹೇಶ್, ಆನಂದ್‌, ದೇವಮ್ಮ, ಜಯರಾಮ, ವಿಜಯಲಕ್ಷ್ಮೀ, ಹನುಮಂತೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT