ಹೊಸಕೋಟೆ: ನಗರದ ಹೃದಯ ಭಾಗದಲ್ಲಿರುವ ಕುರುಬರಪೇಟೆ ಕುಂಟಯ್ಯನ ಮಠ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಇಲಾಖೆ ನಿರ್ಲಕ್ಷ್ಯದಿಂದ ಸಂಪೂರ್ಣ ಹಾಳಾಗಿದೆ.
ಈ ಶಾಲೆಗೆ ಸೇರಿದರೆ ಪ್ರಾಣಾಪಾಯವಾಗುತ್ತದೆ ಎಂಬ ಭಯದಿಂದ ವಿದ್ಯಾರ್ಥಿಗಳು ಇತರ ಶಾಲೆಗಳಿಗೆ ದಾಖಲಾಗುತ್ತಿದ್ದಾರೆ. ಇದರಿಂದ ದಾಖಲಾತಿ ಕುಸಿಯುತ್ತಿದೆ.
ಮೂರೇ ಕೊಠಡಿಗಳು: ಶಾಲೆಯಲ್ಲಿ ಒಂದರಿಂದ ಏಳನೇ ತರಗತಿವರೆಗೆ ಇದೆ. ಇರುವ ಕೊಠಡಿಗಳ ಸಂಖ್ಯೆ ಕೇವಲ ಮೂರು. ಈ ಮೂರು ಕೊಠಡಿಗಳಲ್ಲಿ ತರಗತಿಗಳನ್ನು ನಡೆಸುವುದು ಸವಾಲಾಗಿ ಪರಿಣಮಿಸಿದೆ. ಶಾಲಾ ಕೊಠಡಿಗಳು ಶಿಥಿಲಗೊಂಡಿರುವುದರಿಂದ ಹಾವು, ಚೇಳು ಶಾಲೆಯೊಳಗೆ ನುಗ್ಗಿ ಮಕ್ಕಳಿಗೆ ಮತ್ತಷ್ಟು ಭೀತಿ ಉಂಟಾಗುವ ಪರಿಸ್ಥಿತಿ ಇದೆ.
ಅನೈತಿಕ ಚಟುವಟಿಕೆ ತಾಣವಾಗಿ ಮಾರ್ಪಟ್ಟಿರುವ ಶಾಲೆ: ನಗರದ ಹೃದಯ ಭಾಗದಲ್ಲಿರುವ ಈ ಶಾಲೆಯನ್ನು ಶಿಕ್ಷಣ ಇಲಾಖೆ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ. ಶಾಲೆಯಲ್ಲಿರುವ ಬಹುತೇಕ ಕೊಠಡಿಗಳು ಶಿಥಿಲಗೊಂಡಿವೆ. ಅವು ಅನೈತಿಕ ಚಟುವಟಿಕೆಗಳ ತಾಣಗಳಾಗಿವೆ. ಕೆಲ ಕೊಠಡಿಗಳು ಸಂಪೂರ್ಣ ಹಾಳಾಗಿದ್ದು ಮುಚ್ಚಲಾಗಿದೆ.
ಪುರಾತನ ಶಾಲೆಗೆ ಬೇಕಿದೆ ಕಾಯಕಲ್ಪ: 1945ರಲ್ಲಿ ಪ್ರಾರಂಭವಾದ ಈ ಶಾಲೆ ಹೊಸಕೋಟೆ ನಗರದ ಹಳೆ ಶಾಲೆಗಳಲ್ಲಿ ಒಂದು. ಈ ಶಾಲೆಯಲ್ಲಿ ಓದಿರುವ ಸಾವಿರಾರು ವಿದ್ಯಾರ್ಥಿಗಳು ತಮ್ಮ ಭವಿಷ್ಯ ಉತ್ತಮವಾಗಿ ರೂಪಿಸಿಕೊಂಡಿದ್ದಾರೆ. ಅಂತಹ ಶಾಲೆ ಪಾಳುಬಿದ್ದ ಸ್ಥಿತಿಯಲ್ಲಿದೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸುತ್ತಾರೆ.
ದೂರು ನೀಡಿದರೂ ಉಪಯೋಗವಿಲ್ಲ: ಖಾಸಗಿ ಶಾಲೆಗಳಿಗೆ ಲಕ್ಷಾಂತರ ಕೊಟ್ಟು ಮಕ್ಕಳನ್ನು ಓದಿಸಲಾಗದ ಬಡ, ಮಧ್ಯಮ ವರ್ಗದ ಜನ ಈ ಶಾಲೆಗೆ ದಾಖಲಾಗುತ್ತಾರೆ. ಆದರೆ, ಇಲ್ಲಿನ ಸ್ಥಿತಿ ನೋಡಿದರೆ ಮಕ್ಕಳನ್ನು ಬೇರೆ ಶಾಲೆಗೆ ಸೇರಿಸುವ ಬಗ್ಗೆ ಪೋಷಕರು ಕೂಡ ಚಿಂತೆ ನಡೆಸುತ್ತಿದ್ದಾರೆ.
ಶಾಲೆ ಎಸ್‌ಡಿಎಂಸಿ ಅಧ್ಯಕ್ಷ ಅಧ್ಯಕ್ಷ ರಾಮಾಂಜಿನಿ, ಶಾಲೆಯಲ್ಲಿ ಶಿಥಿಲಗೊಂಡಿರುವ ಕೊಠಡಿಗಳನ್ನು ನೆಲಸಮ ಮಾಡಿ ಅಲ್ಲಿ ಹೊಸ ಕಟ್ಟಡಗಳನ್ನು ನಿರ್ಮಾಣ ಮಾಡುವ ಉದ್ದೇಶದಿಂದ ಜಿಲ್ಲಾ ಪಂಚಾಯಿತಿ ಪಂಚಾಯತ್ ರಾಜ್ ಇಲಾಖೆಗೆ ಮನವಿ ಮಾಡಿದಾಗ, ಅಧಿಕಾರಿಗಳು ಪರಿಶೀಲಿಸಿ ನೆಲಸಮಗೊಳಸಬೇಕು ಎಂದು ವರದಿ ನೀಡಿದಾಗ ಯಾವ ಇಲಾಖೆ ಮಾಡಬೇಕು ಎಂಬ ಗೊಂದಲ ಇದೆ. ನಗರಸಭೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಪಂಚಾಯಿತಿಯು ಸಬೂಬು ಹೇಳಿಕೊಂಡು ಸಮಯ ದೂಡುತ್ತಿದೆ ಎಂದು ರಾಮಾಂಜಿನಿ ದೂರುತ್ತಾರೆ.
600ರಿಂದ 700 ವಿದ್ಯಾರ್ಥಿಗಳು ಇದ್ದ ಶಾಲೆಯಲ್ಲಿ ಈಗ ಕೇವಲ 30ರಿಂದ 40 ಮಕ್ಕಳು ಇದ್ದಾರೆ. ಶೌಚಾಲಯ ಗಬ್ಬು ನಾರುತ್ತಿದೆ. ಅಡುಗೆ ಕೋಣೆಯೂ ಹಳೆ ಕೊಠಡಿಯಲ್ಲಿ ನಡೆಯುತ್ತಿದೆ. ಆತಂಕದಲ್ಲಿಯೇ ಅಡುಗೆ ಕೆಲಸ ಮಾಡಬೇಕಾಗಿದೆ.
ಶಾಲೆ ಸ್ಥಿತಿ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರೆ ಸಾಧ್ಯವಾಗಿಲ್ಲ.
ಶಾಲೆಯನ್ನು ಸರಿಪಡಿಸುವ ಕುರಿತು ಭರವಸೆ ಸಿಕ್ಕಿಲ್ಲ. ಸಂಬಂಧಿಸಿದ ಜನಪ್ರತಿನಿಧಿಗಳು ಬಡಮಕ್ಕಳು ಓದುವ ಈ ಶಾಲೆಯ ಅಭಿವೃದ್ಧಿಯತ್ತ ಗಮನ ಹರಿಸಬೇಕಿದೆ- ರಾಮಾಂಜಿನಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು ಕುಂಟಯ್ಯನ ಮಠ ಶಾಲೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.