ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

"ಮುಂದಿನ ಜುಲೈ ವೇಳೆಗೆ ಮನೆ ಹಂಚಿಕೆ"

ತಾಳಕುಪ್ಪೆಯಲ್ಲಿ ಸ್ಥಗಿತಗೊಂಡಿದ್ದ ಕಾಮಗಾರಿಗೆ ಮರುಜೀವ: ವಸತಿ ಸಚಿವರಿಂದ ಪರಿಶೀಲನೆ
Last Updated 21 ನವೆಂಬರ್ 2020, 13:28 IST
ಅಕ್ಷರ ಗಾತ್ರ

ರಾಮನಗರ: ತಾಲ್ಲೂಕಿನ ಬಿಡದಿ ಹೋಬಳಿಯ ತಾಳಕುಪ್ಪೆ ಬಳಿ ಅಸಂಘಟಿತ ಕಾರ್ಮಿಕರಿಗಾಗಿ ರಾಜೀವ್‌ಗಾಂಧಿ ವಸತಿ ನಿಗಮದ ವತಿಯಿಂದ ನನ್ನ ಮನೆ ಯೋಜನೆಯಡಿ ನಿರ್ಮಿಸಲಾಗುತ್ತಿರುವ 264 ಮನೆಗಳ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿ, 2021ರ ಜುಲೈ ವೇಳೆಗೆ ವಿತರಿಸಲಾಗುವುದು ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದರು.

ಮನೆಗಳ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಶನಿವಾರ ಭೇಟಿ ನೀಡಿ ಪರಿಶೀಲಿಸಿದ ನಂತರ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ನಗರ ಪ್ರದೇಶದಲ್ಲಿ ಅಸಂಘಟಿತ ಕಾರ್ಮಿಕ ವಲಯದಲ್ಲಿ ದುಡಿಯುತ್ತಿರುವ ಕಾರ್ಮಿಕರು, ಬೀಡಿ ಕಾರ್ಮಿಕರು, ಆಟೊ ಚಾಲಕರು, ಗಾರ್ಮೆಂಟ್ ಕೆಲಸಗಾರರು, ತರಕಾರಿ ಮಾರಾಟಗಾರರು ಮುಂತಾದವರಿಗೆ ಶಾಶ್ವತ ನೆಲೆಯನ್ನು ಒದಗಿಸುವ ಉದ್ದೇಶದಿಂದ ಕೈಗೆಟುಕುವ ದರದಲ್ಲಿ ವಸತಿ ಕಲ್ಪಿಸಲು ನನ್ನ ಮನೆ ಎಂಬ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದರು.

ತಾಳಕುಪ್ಪೆ ಗ್ರಾಮ ವ್ಯಾಪ್ತಿಯಲ್ಲಿ ಈ ಯೋಜನೆಯಡಿ ನಿರ್ಮಿಸಲಾಗುತ್ತಿರುವ 264 ಮನೆಗಳ ಕಾಮಗಾರಿ 2010-11 ನೇ ಸಾಲಿನಲ್ಲಿ ವಿವಿಧ ಕಾರಣಗಳಿಂದ ಸ್ಥಗಿತಗೊಂಡಿದ್ದು, ಪ್ರಸ್ತುತ ಈ ಯೋಜನೆಗೆ ಮರು ಚಾಲನೆ ನೀಡಲಾಗಿದೆ. ಜೊತೆಗೆ ಹೊಸದಾಗಿ 492 ಮನೆ ಕಟ್ಟಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು. ಮನೆಗಳಿಗೆ 11 ಲಕ್ಷ ದರ ನಿಗದಿಪಡಿಸಲಾಗಿದೆ. ಇಲ್ಲಿ ವಿದ್ಯುತ್, ರಸ್ತೆ, ಚರಂಡಿ ವ್ಯವಸ್ಥೆ, ಬೋರ್ ವೆಲ್ ನೀರಿನ ಸರಬರಾಜು, ಒಳಚರಂಡಿ, ಚರಂಡಿ ನೀರು ಶುದ್ಧೀಕರಣ ಘಟಕ, ವಿದ್ಯುತ್ ಸೇವೆಗಳ ಚಾರ್ಜಿಂಗ್ ಜಿ.ಎಲ್.ಎಸ್.ಆರ್ ಮತ್ತು ಪೈಪ್ ಮತ್ತು ವಾಲ್ ಕನೆಕ್ಷನ್‌ಗಳ ಸೇವೆಯನ್ನು ಒದಗಿಸಲಾಗುವುದು. ಈ ಸ್ಥಳದಲ್ಲಿ ವಾಸಿಸುವರಿಗೆ ಅನುಕೂಲವಾಗುವಂತೆ ಒಂದು ಅಂಗನವಾಡಿ, ಹಾಪ್‌ಕಾಮ್ಸ್, ಆರೋಗ್ಯ ಕೇಂದ್ರ ಹಾಗೂ ನ್ಯಾಯಬೆಲೆ ಅಂಗಡಿಯನ್ನು ಸಹ ತೆರೆಯಲು ಬೇಕಿರುವ ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದರು.

ರಾಜ್ಯದ ನಗರ ಪ್ರದೇಶದಲ್ಲಿ 1785 ಕೊಳಚೆ ಪ್ರದೇಶಗಳನ್ನು ಗುರುತಿಸಲಾಗಿದ್ದು, ಈ ಕೊಳಚೆ ಪ್ರದೇಶಗಳು 7 ಸಾವಿರ ವಿಸ್ತೀರ್ಣದಲ್ಲಿವೆ. ಸದರಿ ಭಾಗದಲ್ಲಿ ವಾಸಿಸುತ್ತಿರುವ ಅರ್ಹರನ್ನು ಗುರುತಿಸಿ ಅದೇ ಸ್ಥಳದಲ್ಲಿ ನಿವೇಶನ ನೀಡಲು ಯೋಜಿಸಲಾಗುತ್ತಿದೆ ಎಂದರು.

4600 ಮನೆ ನಿರ್ಮಾಣ: ರಾಮನಗರ ಜಿಲ್ಲೆಯಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ 4600 ಮನೆಗಳ ನಿರ್ಮಾಣ ನಡೆಯುತ್ತಿದ್ದು, ಇದಕ್ಕೆ ಬೇಕಿರುವ ಅನುದಾನವನ್ನು ಬಿಡುಗಡೆ ಮಾಡುವಂತೆ ಹಾಗೂ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿ ಮನೆಗಳನ್ನು ವಿತರಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಸಂಸದ ಡಿ.ಕೆ.ಸುರೇಶ್, ಶಾಸಕ ಎ. ಮಂಜುನಾಥ್, ರಾಜೀವ್ ಗಾಂದಿ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ರಾಮ್ ಪ್ರಸಾದ್ ಮನೋಹರ್, ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ಇದ್ದರು.

ಸುರೇಶ್‌ಗೆ ಹೊಗಳಿಕೆ: ಎಚ್‌ಡಿಕೆಗೆ ವ್ಯಂಗ್ಯ
ವಸತಿ ಕಾಮಗಾರಿ ವೀಕ್ಷಣೆ ಬಳಿಕ ಪತ್ರಕರ್ತರ ಜೊತೆ ಮಾತನಾಡಿದ ಸೋಮಣ್ಣ, ಸಂಸದ ಡಿ.ಕೆ. ಸುರೇಶ್‌ ಕಾರ್ಯವೈಖರಿಯನ್ನು ಹೊಗಳಿದರು. ಹಾಗೆಯೇ ಎಚ್‌.ಡಿ. ಕುಮಾರಸ್ವಾಮಿಗೆ ಪರೋಕ್ಷವಾಗಿ ಕುಟುಕಿದರು.

"ಈ ಹಿಂದೆ ಇಲ್ಲಿ ಆಡಳಿತ ನಡೆಸಿದ ಜನಪ್ರತಿನಿಧಿಗಳು ಮನಸ್ಸು ಮಾಡಿದ್ದಲ್ಲಿ ಈ ವಸತಿ ಗೃಹಗಳನ್ನು ಯಾವಾಗಲೋ ಲೋಕಾರ್ಪಣೆ ಮಾಡಬಹುದಿತ್ತು. ಬಡವರ ಪರವಾಗಿ ಮಾಡುವಾಗ ಹೃದಯ ಶ್ರೀಮಂತಿಕೆ ಬೇಕು. ಮಡಿಕೇರಿಯಲ್ಲಿ ನಿರಾಶ್ರಿತರಿಗೆ ನಿರ್ಮಿಸಿದ್ದ ಮನೆಗಳು ಯಾವುದಕ್ಕೂ ಪ್ರಯೋಜನ ಇರಲಿಲ್ಲ. ಅವುಗಳಿಗೆ ನಾನು ಹೊಸ ರೂಪ ನೀಡಿ ಜನರು ವಾಸಿಸಲು ಅನುಕೂಲವಾಗುವಂತೆ ಮಾಡಿದೆ' ಎಂದು ಎಚ್‌.ಡಿ. ಕುಮಾರಸ್ವಾಮಿ ವಿರುದ್ಧ ವ್ಯಂಗ್ಯವಾಡಿದರು.

"ಸಂಸದ ಸುರೇಶ್‌ ನಾನು ರಾಮನಗರಕ್ಕೆ ಭೇಟಿ ನೀಡಿದಾಗಲೆಲ್ಲ ನನ್ನ ಇಲಾಖೆಗೆ ಸಂಬಂಧಿಸಿದ ಏನಾದರೊಂದು ಪತ್ರ ಹಿಡಿದು ಬರುತ್ತಾರೆ. ಹಿಡಿದ ಕೆಲಸವನ್ನು ಪಟ್ಟುಬಿಡದೇ ಮಾಡಿಸಿಕೊಳ್ಳುತ್ತಾರೆ. ಅವರ ಜನಪರ ಕಳಕಳಿ ಮೆಚ್ಚಿ ಹಲವಾರು ವಿಶೇಷ ಅನುದಾನವನ್ನು ಬಿಡುಗಡೆ ಮಾಡಿಸಿದ್ದೇನೆ. ಹೀಗೆ ಕೆಲಸ ಮಾಡುವ ಸಂಸದರು ಬೇಕು' ಎಂದು ನಮಗೆ ಅವಶ್ಯಕತೆ ಇದೆ" ಎಂದು ಪಕ್ಕದಲ್ಲೇ ಇದ್ದ ಸುರೇಶ್‌ರನ್ನು ಶ್ಲಾಘಿಸಿದರು.

***

ರಾಮನಗರ ಜಿಲ್ಲೆಯಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ 4600 ಮನೆಗಳ ನಿರ್ಮಾಣ ನಡೆಯುತ್ತಿದೆ. ಇದಕ್ಕೆ ಬೇಕಾದ ಅನುದಾನ ಬಿಡುಗಡೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ
-ವಿ. ಸೋಮಣ್ಣ, ವಸತಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT