ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ: ಹೆದ್ದಾರಿಯಲ್ಲಿ ಹಂಪ್ಸ್‌ –ಸಾರ್ವಜನಿಕರ ಆಕ್ಷೇಪ

ಸುರಕ್ಷತೆ ಸಲುವಾಗಿ ನಿರ್ಮಾಣ–ಜಿಲ್ಲಾಧಿಕಾರಿ ಸ್ಪಷ್ಟನೆ
Last Updated 7 ಜೂನ್ 2019, 19:49 IST
ಅಕ್ಷರ ಗಾತ್ರ

ರಾಮನಗರ: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅನಗತ್ಯವಾಗಿ ರಸ್ತೆ ಉಬ್ಬು ನಿರ್ಮಾಣ ಮಾಡದಂತೆ ನ್ಯಾಯಾಲಯಗಳೇ ಆದೇಶಿಸಿವೆ. ಹೀಗಿದ್ದೂ ಜಿಲ್ಲಾಧಿಕಾರಿ ಕಚೇರಿ, ನಿವಾಸ ಮೊದಲಾದ ಕಡೆ ಹಂಪ್ಸ್‌ಗಳು ನಿರ್ಮಾಣ ಆಗುತ್ತಿರುವುದಕ್ಕೆ ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಗಿದೆ.

ಹದಿನೈದು ದಿನದ ಹಿಂದಷ್ಟೇ ಇಲ್ಲಿನ ಜಿಲ್ಲಾ ಕಚೇರಿಗಳ ಸಂಕೀರ್ಣದ ಎರಡೂ ಕಡೆ ಬೆಂಗಳೂರು–ಮೈಸೂರು ಹೆದ್ದಾರಿಯಲ್ಲಿ ಹಂಪ್‌ ಹಾಕಲಾಗಿತ್ತು. ಇದೀಗ ಅರ್ಚಕರಹಳ್ಳಿ ಸಮೀಪ ಜಿಲ್ಲಾಧಿಕಾರಿ ಅಧಿಕೃತ ನಿವಾಸದ ಎದುರು ಸಹ ಹಂಪ್ಸ್ ನಿರ್ಮಾಣ ಮಾಡಲಾಗಿದೆ. ಇದರಿಂದ ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರರು ಕಿರಿಕಿರಿ ಅನುಭವಿಸುತ್ತಿದ್ದಾರೆ.

ಅವೈಜ್ಞಾನಿಕ: ಹೊಸತಾಗಿ ನಿರ್ಮಿಸಿರುವ ಹಂಪ್‌ಗಳು ಅವೈಜ್ಞಾನಿಕವಾಗಿವೆ ಎಂಬುದನ್ನು ಸಂಚಾರ ಠಾಣೆ ಪೊಲೀಸರೇ ಒಪ್ಪಿಕೊಳ್ಳುತ್ತಾರೆ. ಜಿಲ್ಲಾಧಿಕಾರಿ ಕಚೇರಿ ಎದುರು ಈ ಹಿಂದೆ ರಾತ್ರೋರಾತ್ರಿ ಅಧಿಕಾರಿಗಳು ರಸ್ತೆ ಉಬ್ಬು ನಿರ್ಮಿಸಿದ್ದರು. ಆದರೆ ಅದಕ್ಕೆ ಬಣ್ಣ ಬಳಿಯುವುದನ್ನು ಮರೆತಿದ್ದರು. ಇದರಿಂದಾಗಿ ನಾಲ್ಕಾರು ಬೈಕ್‌ ಸವಾರರು ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಒಂದೆರಡು ಪ್ರಕರಣಗಳು ಸಂಚಾರ ಠಾಣೆಯ ಮೆಟ್ಟಿಲೇರಿದ್ದವು. ಅಂತಿಮವಾಗಿ ಎರಡೂ ಕಡೆ ರಸ್ತೆ ಉಬ್ಬುಗಳನ್ನು ತೆರವುಗೊಳಿಸಲಾಗಿತ್ತು.

ಇದೀಗ ಮತ್ತೆ ಅದೇ ಜಾಗದಲ್ಲಿ ಹಂಪ್ಸ್‌ ನಿರ್ಮಾಣ ಆಗಿವೆ. ಈ ಬಾರಿ ಇವುಗಳಿಗೆ ಮಾರ್ಕಿಂಗ್‌ ಮಾಡಿ ಅಧಿಕಾರಿಗಳು ಕೊಂಚ ಜಾಣ್ಮೆ ತೋರಿದ್ದಾರೆ. ಇದಕ್ಕಿಂದಲೂ ಹೆಚ್ಚಾಗಿ ಜಿಲ್ಲಾಧಿಕಾರಿ ಕೆ. ರಾಜೇಂದ್ರ ಅವರ ಮನೆಯ ಸಮೀಪ ಹಂಪ್ಸ್ ಹಾಕಿರುವುದಕ್ಕೆ ಜನರಿಂದ ಆಕ್ಷೇಪ ವ್ಯಕ್ತವಾಗುತ್ತಿದೆ. ಅದು ಜನನಿಬಿಡ ಪ್ರದೇಶವೂ ಅಲ್ಲ, ಅಪಘಾತ ವಲಯವೂ ಅಲ್ಲ. ಹೀಗಿದ್ದೂ ರಸ್ತೆ ಉಬ್ಬು ನಿರ್ಮಾಣ ಮಾಡಿರುವುದು ಏಕೆ ಎಂಬುದು ಸಾರ್ವಜನಿಕ ಪ್ರಶ್ನೆಯಾಗಿದೆ.

‘ಅಪಘಾತ ತಪ್ಪಿಸುವ ಯತ್ನ’
‘ಹೆದ್ದಾರಿಯಲ್ಲಿ ಅಪಘಾತ ತಪ್ಪಿಸುವ ಸಲುವಾಗಿಯೇ ಈ ರಸ್ತೆ ಉಬ್ಬುಗಳನ್ನು ನಿರ್ಮಿಸಲಾಗುತ್ತಿದೆ’ ಎನ್ನುತ್ತಾರೆ ಜಿಲ್ಲಾಧಿಕಾರಿ ಕೆ. ರಾಜೇಂದ್ರ.

‘ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳು ವೇಗವಾಗಿ ನಗರವನ್ನು ಪ್ರವೇಶಿಸುತ್ತವೆ. ಇದರಿಂದ ಅಪಘಾತಗಳ ಪ್ರಮಾಣ ಹೆಚ್ಚುತ್ತಲಿದೆ. ನಗರದೊಳಗೆ ವೇಗ ಮಿತಿ ನಿಯಮ ಇದ್ದರೂ ಸವಾರರು ಗಮನಿಸುತ್ತಿಲ್ಲ. ಹೀಗಾಗಿ ರಸ್ತೆ ಉಬ್ಬುಗಳ ನಿರ್ಮಾಣದ ಮೂಲಕ ಅವರನ್ನು ನಿಯಂತ್ರಿಸುವ ಪ್ರಯತ್ನ ಮಾಡಲಾಗುತ್ತಿದೆ. ನನ್ನ ಮನೆ ಮುಂದೆಯೂ ಅಂಧರ ಶಾಲೆ ಇರುವ ಕಾರಣ ಹಂಪ್ಸ್‌ ಹಾಕಿದ್ದಾರೆ ಅಷ್ಟೇ’ ಎಂದು ಅವರು ಸಮಜಾಯಿಷಿ ನೀಡುತ್ತಾರೆ.

*
ನನ್ನ ನಿವಾಸದ ಮುಂದೆ ಅಂಧರ ಶಾಲೆ, ಬಿಜಿಎಸ್‌ ಕಾಲೇಜು ಇರುವ ಕಾರಣ ಹಂಪ್ಸ್‌ ಹಾಕಿದ್ದಾರೆ ಹೊರತು ನನ್ನ ಅನುಕೂಲಕ್ಕಾಗಿ ಅಲ್ಲ.
-ಕೆ. ರಾಜೇಂದ್ರ, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT