ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂತ್ರಿಗಿರಿಯ ನಿರೀಕ್ಷೆ ಇಟ್ಟುಕೊಂಡಿರಲಿಲ್ಲ: ಸಿ.ಪಿ ಯೋಗೇಶ್ವರ್‌

ಅವಕಾಶ ಕೈತಪ್ಪಿದ್ದಕ್ಕೆ ಬೇಸರವಿಲ್ಲ: ಯೋಗೇಶ್ವರ್‌ ಹೇಳಿಕೆ
Last Updated 21 ಆಗಸ್ಟ್ 2019, 6:56 IST
ಅಕ್ಷರ ಗಾತ್ರ

ರಾಮನಗರ: ಮಂಗಳವಾರ ರಾಜ್ಯ ಬಿಜೆಪಿ ಸರ್ಕಾರದ ಸಂಪುಟ ರಚನೆಯಾಗಿದ್ದು, ಜಿಲ್ಲೆಯಲ್ಲಿ ಪಕ್ಷದ ಪ್ರಭಾವಿ ಮುಖಂಡರಾಗಿರುವ ಸಿ.ಪಿ. ಯೋಗೇಶ್ವರ್‌ಗೆ ಅವಕಾಶ ದೊರೆತಿಲ್ಲ.

ಹಳೇ ಮೈಸೂರು ಭಾಗದಲ್ಲಿ ಬಿಜೆಪಿಯ ನಾಯಕರಲ್ಲಿ ಒಬ್ಬರಾಗಿರುವ ಯೋಗೇಶ್ವರ್‌ಗೆ ಸಚಿವ ಸ್ಥಾನ ಸಿಗಲಿದೆ ಎಂಬುದು ಜಿಲ್ಲೆಯಲ್ಲಿನ ಪಕ್ಷದ ಕಾರ್ಯಕರ್ತರ ನಿರೀಕ್ಷೆ ಆಗಿತ್ತು. ಆದರೆ ಮೈಸೂರು ಭಾಗದ ಯಾವೊಬ್ಬ ಮುಖಂಡರಿಗೂ ಈ ಬಾರಿಯ ಯಡಿಯೂರಪ್ಪ ಸಂಪುಟದಲ್ಲಿ ಅವಕಾಶ ದೊರೆತಿಲ್ಲದಿರುವುದು ನಿರಾಸೆ ಮೂಡಿಸಿದೆ.

ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿ ಸರ್ಕಾರವನ್ನು ಕೆಡವುವಲ್ಲಿ ಸಿ.ಪಿ. ಯೋಗೇಶ್ವರ್‌ ಸಹ ಪಾತ್ರ ವಹಿಸಿದ್ದರು. ಕೆಲವು ಅತೃಪ್ತ ಶಾಸಕರನ್ನು ಸಂಪರ್ಕಿಸಿ ಬಿಜೆಪಿ ಪರವಾಗಿ ಲಾಬಿ ನಡೆಸಿ ಅವರನ್ನು ಯಡಿಯೂರಪ್ಪ ಹಾಗೂ ಪಕ್ಷದ ರಾಷ್ಟ್ರೀಯ ನಾಯಕರ ಸಂಪರ್ಕಕ್ಕೆ ತಂದಿದ್ದರು ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅವರಿಗೆ ಸಚಿವ ಸ್ಥಾನ ಸಿಗಲಿದೆ ಎನ್ನುವ ನಿರೀಕ್ಷೆ ಇತ್ತು.

ಯೋಗೇಶ್ವರ್‌ ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿ ಇದ್ದಾಗ ಅರಣ್ಯ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಈ ಬಾರಿಯ ಸರ್ಕಾರದಲ್ಲಿ ಜಿಲ್ಲೆಯ ಯಾರೊಬ್ಬರಿಗೂ ಅವಕಾಶ ದೊರೆತಿಲ್ಲ. ಹೀಗಾಗಿ ಜಿಲ್ಲಾ ಉಸ್ತುವಾರಿ ಹೊಣೆ ಯಾರ ಹೆಗಲಿಗೆ ಬೀಳಲಿದೆ ಎನ್ನುವ ಕುತೂಹ ಉಳಿದಿದೆ.

ಬೇಸರವಿಲ್ಲ: ತಮಗೆ ಸಚಿವ ಸ್ಥಾನ ಸಿಗದೇ ಇರುವ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಯೋಗೇಶ್ವರ್‌ ‘ ಇದರಿಂದ ನನಗೆ ಯಾವುದೇ ಬೇಸರ ಇಲ್ಲ. ನಾನು ಸಚಿವನಾಗುವ ನಿರೀಕ್ಷೆಯನ್ನೂ ಇಟ್ಟುಕೊಂಡಿರಲಿಲ್ಲ’ ಎಂದು ಹೇಳಿದ್ದಾರೆ.

‘ರಾಜ್ಯದಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರುವುದು ನಮ್ಮ ಗುರಿಯಾಗಿತ್ತು. ಅದು ಈಗ ಈಡೇರಿದೆ. ವೈಯಕ್ತಿಕವಾಗಿ ಅವಕಾಶ ಸಿಗದೇ ಇರುವುದಕ್ಕೆ ಬೇಸರ ಇಲ್ಲ. ಮಂತ್ರಿ ಮಾಡಿ ಎಂದು ನಾನು ಯಡಿಯೂರಪ್ಪ ಅವರನ್ನು ಕೇಳಿಕೊಂಡಿಲ್ಲ. ಅಧಿಕಾರ ಇಲ್ಲದಿದ್ದರೂ ಜನರ ಕೆಲಸ–ಕಾರ್ಯ ಮಾಡಿಕೊಡಲು ಅಡ್ಡಿ ಇಲ್ಲ. ಮುಂದಿನ ದಿನಗಳಲ್ಲಿ ಅವಕಾಶ ಸಿಗಬಹುದು’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT