ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ| 4 ಕ್ಷೇತ್ರ ಗೆದ್ದರೆ ಡಿಕೆಶಿಗೆ ಚುಕ್ಕಾಣಿ: ಡಿ.ಕೆ. ಸುರೇಶ್‌

ಕಾಂಗ್ರೆಸ್‌ನಿಂದ ಮತದಾರರಿಗೆ ಗ್ಯಾರೆಂಟಿ ಕಾರ್ಡ್‌ ಬಿಡುಗಡೆ
Last Updated 6 ಮಾರ್ಚ್ 2023, 5:17 IST
ಅಕ್ಷರ ಗಾತ್ರ

ರಾಮನಗರ: ಜಿಲ್ಲೆಯ ನಾಲ್ಕು ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ. ನಾಲ್ಕೂ ಕ್ಷೇತ್ರ ಗೆದ್ದಿದ್ದೇ ಆದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ರಾಜ್ಯದ ಚುಕ್ಕಾಣಿ ಹಿಡಿಯಲಿದ್ದಾರೆ ಎಂದು ಸಂಸದ ಡಿ.ಕೆ. ಸುರೇಶ್‌ ಹೇಳಿದರು.

ಇಲ್ಲಿನ ಕೆಂಗಲ್‌ನಲ್ಲಿ ಭಾನುವಾರ ಸಂಜೆ ನಡೆದ ಕಾಂಗ್ರೆಸ್ ಗ್ಯಾರೆಂಟಿ ಕಾರ್ಡ್ ಬಿಡುಗಡೆ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ರಾಜ್ಯಕ್ಕೆ ಶಾಸಕರು- ಮಂತ್ರಿಗಳು ಸಿ.ಡಿ. ರಾಜ್ಯ ಎಂಬ ಖ್ಯಾತಿ ತಂದಿದ್ದಾರೆ. ಅನೇಕರು ತಡೆಯಾಜ್ಞೆ ತಂದಿದ್ದಾರೆ. ಧರ್ಮ-ಸಂಸ್ಕೃತಿ ಹೆಸರಿನಲ್ಲಿ ಅಧಿಕಾರ ಹಿಡಿದ ಸರ್ಕಾರ ಅಧರ್ಮದ ಕಾರ್ಯಗಳ ಮೂಲಕ ಜನರನ್ನು ಇಬ್ಭಾಗ ಮಾಡುತ್ತಿದೆ ಎಂದು ಟೀಕಿಸಿದರು.

ಕಾಂಗ್ರೆಸ್ ನೆಹರು, ಇಂದಿರಾ ಗಾಂಧಿ ಕಾಲದಿಂದಲೂ ಬಡ ಜನರ ಪರವಾಗಿದೆ. ಜೆಡಿಎಸ್ ರಾಜ್ಯದಲ್ಲಿ ವಿರೋಧ ಪಕ್ಷದಲ್ಲಿ ಇದ್ದರೂ‌ ನಿರುದ್ಯೋಗ ವಿರುದ್ಧ ಒಂದು ದಿನ ಧ್ವನಿ ಎತ್ತಿಲ್ಲ. ಸಿಲಿಂಡರ್ ಬೆಲೆ ಏರಿಕೆ ವಿರೋಧಿಸಿಲ್ಲ. ಕೇವಲ ಒಂದು ಜಾತಿ- ಸಮುದಾಯದ ಹೆಸರಿನಲ್ಲಿ ಮತ ಗಿಟ್ಟಿಸುತ್ತಿದೆ ಎಂದು ಲೇವಡಿ ಮಾಡಿದರು.

ಜಿಲ್ಲೆಯಲ್ಲಿ ಒಟ್ಟು ಕೇವಲ 3 ಸಾವಿರ ಮಾತ್ರ 200 ಯೂನಿಟ್ ಗಿಂತ ಹೆಚ್ಚು ಬಳಸುತ್ತಿದ್ದಾರೆ. ಉಳಿದ ಎಲ್ಲ ಕುಟುಂಬಗಳಿಗೆ ಕಾಂಗ್ರೆಸ್ ನಿಂದ ಉಚಿತ ವಿದ್ಯುತ್ ಸಿಗಲಿದೆ. ಪ್ರತಿ ಕುಟುಂಬದ ಗೃಹಿಣಿಯರಿಗೆ ತಿಂಗಳಿಗೆ ₹2 ಸಾವಿರ ನೆರವಿನ ಅನುದಾನ, ಬಡವರಿಗೆ ಪ್ರತಿ ತಿಂಗಳಿಗೆ 10 ಕೆ.ಜಿ. ಅಕ್ಕಿ ನೀಡಿಕೆ ಪಕ್ಷದ ವಾಗ್ದಾನಗಳಾಗಿದ್ದು, ಅಧಿಕಾರಕ್ಕೆ ಬಂದರೆ ಜೂನ್‌ 1ರಿಂದಲೇ ಇವು ಜಾರಿಗೆ ಬರಲಿವೆ. ಕಾರ್ಯಕರ್ತರು ಮನೆಮನೆಗೆ ತೆರಳಿ ಈ ಗ್ಯಾರೆಂಟಿ ಕಾರ್ಡ್‌ಗಳನ್ನು ಮತದಾರರಿಗೆ ನೀಡಬೇಕು ಎಂದರು.

ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ರಣದೀಪಸಿಂಗ್ ಸುರ್ಜೇವಾಲ ತಮ್ಮ ಭಾಷಣದಲ್ಲಿ ಬಿಜೆಪಿಯ ಶೇ 40 ಭ್ರಷ್ಟಾಚಾರ ಹಾಗೂ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದರು. ಎಐಸಿಸಿ ಕಾರ್ಯದರ್ಶಿ ಅಭಿಷೇಕ್ ದತ್, ವಿಧಾನ ಪರಿಷತ್ ಸದಸ್ಯ ಎಸ್. ರವಿ, ಸಿ.ಎಂ. ಲಿಂಗಪ್ಪ, ಮಾಜಿ ಶಾಸಕರಾದ ಎಚ್.‌ಸಿ. ಬಾಲಕೃಷ್ಣ, ಕೆ. ರಾಜು, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಸ್. ಗಂಗಾಧರ್, ಮುಖಂಡರಾದ ಇಕ್ಬಾಲ್ ಹುಸೇನ್, ಸಯ್ಯದ್ ಜಿಯಾವುಲ್ಲಾ, ಪ್ರಸನ್ನ ಗೌಡ, ಎಚ್.ಕೆ. ಶ್ರೀಕಂಠು, ಡಿ.ಎಂ. ವಿಶ್ವನಾಥ್, ಕೆ. ಶೇಷಾದ್ರಿ, ನಗರಸಭೆ ಅಧ್ಯಕ್ಷೆ ಬಿ.ಕೆ. ಪವಿತ್ರಾ , ನರಸಿಂಹ ಮೂರ್ತಿ, ಕವಿತಾ, ಚೇತನ್‌, ಗಾಣಕಲ್‌ ನಟರಾಜು ಮತ್ತಿತರರು ವೇದಿಕೆಯಲ್ಲಿ ಇದ್ದರು.

ರಾಜ್ಯದಲ್ಲಿ ಶೇ 40 ಸರ್ಕಾರ: ಸುರ್ಜೇವಾಲ ಟೀಕೆ

ರಾಜ್ಯ ಬಿಜೆಪಿ ಸರ್ಕಾರ ಇಡೀ ದೇಶದಲ್ಲೇ ಶೇ 40 ಸರ್ಕಾರ ಎಂಬ ಅಪಖ್ಯಾತಿಗೆ ಒಳಗಾಗಿದೆ. ಬಸವರಾಜ ಬೊಮ್ಮಾಯಿ ಪೇ ಸಿ.ಎಂ ಎಂಬ ಕುಖ್ಯಾತಿ ಗಳಿಸಿದ್ದಾರೆ. ಬಿಜೆಪಿ ಎಂಬ ಸೈತಾನ ಕಮಿಷನ್‌ ಹೆಸರಿನಲ್ಲಿ ಹಲವರನ್ನು ನುಂಗಿದ್ದಾನೆ. ಸಂತೋಷ ಪಾಟೀಲ, ತುಮಕೂರಿನ ರಾಜೇಂದ್ರ, ಬೆಂಗಳೂರು ಗ್ರಾಮಾಂತರದ‌ ಟಿ.ಎನ್. ಪ್ರಶಾಂತ್ ಇವರೆಲ್ಲ ಕಮಿಷನ್‌ಗೆ ಬಲಿಯಾದವರು. ಬಿಜೆಪಿಗೆ ಇವರಿಂದ ಬರಬೇಕಾದ ಕಮಿಷನ್ ಅನ್ನು ನಾವೆಲ್ಲರೂ ಸೇರಿ ಕೊಡುತ್ತೇವೆ. ಆದರೆ ಅವರ ಕುಟುಂಬದವರಿಗೆ ಅವರನ್ನು ವಾಪಸ್ ಕೊಡಲು ಬಿಜೆಪಿಗೆ ಸಾಧ್ಯವೇ? ಎಂದು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಪ್ರಶ್ನಿಸಿದರು.

ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಪ್ರಧಾನ ಮಂತ್ರಿಗೆ ಶೇ 40 ಕಮಿಷನ್ ಬಗ್ಗೆ ಪತ್ರದ ಮೂಲಕ ದೂರಿದ್ದರು. ಅದಾದ ಬಳಿಕ ಪ್ರಧಾನಿ ಮೋದಿ ಎಂಟು ಬಾರಿ ರಾಜ್ಯಕ್ಕೆ ಬಂದಿದ್ದರೂ ಈ‌ ಬಗ್ಗೆ ಚಕಾರ ಎತ್ತಿಲ್ಲ. ಈಚೆಗಷ್ಟೇ ಬೆಳಗಾವಿಗೆ ಬಂದಿದ್ದ ಅವರಿಗೆ, ಆತ್ಮಹತ್ಯೆ ಮಾಡಿಕೊಂಡ ಬಿಜೆಪಿ ಕಾರ್ಯಕರ್ತ ಸಂತೋಷ್ ಪಾಟೀಲ ಮನೆಗೆ ಹೋಗಿ ಸಾಂತ್ವನ ಹೇಳಲು ಆಗಲಿಲ್ಲವೇ ಎಂದರು.

ದಿಂಗಾಲೇಶ್ಬರ ಸ್ವಾಮಿ ಅಂತಹವರು, ಮಠದ ಅನುದಾನಕ್ಕೂ ಸಚಿವರು ಶೇ 30 ಕಮಿಷನ್ ಕೇಳುತ್ತಿರುವುದಾಗಿ‌ ದೂರುತ್ತಾರೆ. 8 ಸಚಿವರು, 17 ಶಾಸಕರ ಭ್ರಷ್ಟಾಚಾರದ ಬಗ್ಗೆ ಗುತ್ತಿಗೆದಾರರ ಸಂಘ ದೂರಿದ್ದರೂ ಪ್ರಧಾನಿ ಕ್ರಮ ಕೈಗೊಳ್ಳಲು ಆಗಿಲ್ಲ. ಪೊಲೀಸ್, ಸಹಾಯಕ ಪ್ರಾಧ್ಯಾಪಕ ಸೇರಿದಂತೆ ಎಲ್ಲ ಹುದ್ದೆಗಳು ಬಿಜೆಪಿ ಸರ್ಕಾರದಲ್ಲಿ ಮಾರಾಟಕ್ಕೆ ಇವೆ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT