ನಿವೇಶನ ನೀಡಿದರೆ ಜನರಿಗೆ ಉದ್ಯೋಗ

ಗುರುವಾರ , ಮಾರ್ಚ್ 21, 2019
25 °C
ಸ್ಥಳೀಯರಿಗೆ ಅನಿವಾಸಿ ಭಾರತೀಯ ಮರೂರು ಹನುಮಂತಪ್ಪ ಭರವಸೆ

ನಿವೇಶನ ನೀಡಿದರೆ ಜನರಿಗೆ ಉದ್ಯೋಗ

Published:
Updated:
Prajavani

ಮಾಗಡಿ: ಕೇಂದ್ರ ಸರ್ಕಾರ ಕೈಗಾರಿಕೋದ್ಯಮಿಗಳಿಗೆ ನೀಡುವ ಸವಲತ್ತು ಮತ್ತು ರಿಯಾಯಿತಿ ಗ್ರಾಮೀಣ ಭಾಗದ ರೈತಾಪಿ ವರ್ಗಕ್ಕೆ ನೀಡಿದಾಗ ಮಾತ್ರ ದೇಶದ ಪ್ರಗತಿ ಸಾಧ್ಯವಾಗಲಿದೆ ಎಂದು ಅನಿವಾಸಿ ಭಾರತೀಯ ಮರೂರು ಹನುಮಂತಪ್ಪ ತಿಳಿಸಿದರು.

ಮಣ್ಣಿಗನಹಳ್ಳಿ ಗ್ರಾಮದಲ್ಲಿ ಬುಧವಾರ ಸಂಜೆ ನಡೆದ ಸೋಲಾರ್‌ ಬೀದಿ ದೀಪ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದರು.

‘ಜಗತ್ತಿನ ಸಿರಿವಂತ ಉದ್ಯಮಿ ಬಿಲ್‌ ಗೇಟ್ಸ್‌ ತನ್ನ ಲಾಭದಲ್ಲಿ ಬಡವರ ಕಲ್ಯಾಣಕ್ಕೆ ಹಣ ನೀಡುತ್ತಿದ್ದಾರೆ. ನಮ್ಮ ದೇಶದಲ್ಲಿನ ಸಿರಿವಂತರು ಲಾಭಾಂಶದಲ್ಲಿ ಈ ದೇಶದ ಶೇ80 ಬಡವರಿಗೆ ಕನಿಷ್ಠ ಸಹಾಯ ಮಾಡಲು ಮುಂದಾಗಬೇಕು’ ಎಂದರು.

ಪ್ರಧಾನಮಂತ್ರಿಗೆ ದೇಣಿಗೆ ನೀಡಿದರೆ ಸಾಲದು, ಬಡವರ ಮನೆಯಲ್ಲಿ ಬೆಳಕು ಮೂಡಿಸಲು ಅಂಬಾನಿ, ಟಾಟಾ, ಬಿರ್ಲಾ, ಸಿಂಘಾನಿಯ ಇತರೆ ಉದ್ಯಮಿಗಳು ಮನಸ್ಸು ಮಾಡಬೇಕು. ಈ ದೇಶದಲ್ಲಿ 90ಕೋಟಿ ಜನರಿಗೆ ಶುದ್ಧ ಕುಡಿಯುವ ನೀರು ಮತ್ತು ಊಟವಿಲ್ಲ. ಹಣ ಕೂಡಿಡುವ ದುರಾಸೆ ಕೈಬಿಟ್ಟು ಮಾನವೀಯತೆಗೆ ಗಮನ ಕೊಡಬೇಕಿದೆ ಎಂದರು.

ತಾಲ್ಲೂಕಿನ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಬಾಲಕಿಯರಿಗೆ ಶೌಚಾಲಯ ಕಟ್ಟಿಸಿಕೊಡಲಾಗುವುದು. ತಾಲ್ಲೂಕಿನಲ್ಲಿ 50 ಎಕರೆ ಭೂಮಿ ನೀಡಿದರೆ 1ಸಾವಿರ ಜನರು ಕೆಲಸ ಮಾಡುವ ಕಾರ್ಖಾನೆ ಆರಂಭಿಸಲಾಗುವುದು. 30 ಜನ ರೈತರಿಗೆ ಸಾಲದ ರೂಪದಲ್ಲಿ ಕಡಿಮೆ ದರದಲ್ಲಿ ಟ್ರ್ಯಾಕ್ಟರ್‌ ನೀಡುವುದಾಗಿ ಭರವಸೆ ನೀಡಿದರು.

ಗ್ರಾಮೀಣ ಮೂಲಸೌಕರ್ಯಗಳು ಮತ್ತು ಕಾರ್ಯಕ್ರಮ ವ್ಯವಸ್ಥಾಪಕ ಡಾ.ಎನ್‌.ಕೃಷ್ಣಪ್ಪ ಕೋಡಿಪಾಳ್ಯ ಮಾತನಾಡಿ, ₹25ಲಕ್ಷ ವೆಚ್ಚದಲ್ಲಿ 85 ಸೋಲಾರ್‌ ಬೀದಿ ದೀಪ ಅಳವಡಿಸಲಾಗಿದೆ. ಗ್ರಾಮೀಣ ಭಾಗದ ಸಮಗ್ರ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ ಎಂದರು.

ಶಾಸಕ ಎ.ಮಂಜುನಾಥ ಮಾತನಾಡಿ, ಬೆಸ್ತರಪಾಳ್ಯದ ಬಳಿ ಮರೂರು ಹನುಮಂತಪ್ಪ ಅವರಿಗೆ ಕಾರ್ಖಾನೆ ಆರಂಭಿಸಲು 25 ಎಕರೆ ಭೂಮಿ ನೀಡಲಾಗುವುದು. ತಾಲ್ಲೂಕಿನ ಎಲ್ಲ ಸರ್ಕಾರಿ ಶಾಲೆಗಳಿಗೆ ಇಸ್ಕಾನ್‌ ವತಿಯಿಂದ ಬಿಸಿಯೂಟ ಕೊಡಿಸಲಾಗುವುದು. ಟೊಯೋಟಾ ಕಾರ್ಖಾನೆ ವತಿಯಿಂದ ಎಲ್ಲಾ ಶಾಲೆಗಳಿಗೆ ಹೈಟೆಕ್‌ ಶೌಚಾಲಯ ನಿರ್ಮಿಸಲಾಗುವುದು ಎಂದರು.

ನಿವೃತ್ತ ಮುಖ್ಯ ಶಿಕ್ಷಕ ನರಸಿಂಹಯ್ಯ, ಗೋಪಾಲಕೃಷ್ಣ ಹಾಗೂ ಗ್ರಾಮಸ್ಥರು ಇದ್ದರು. ಮರೂರು ಹನುಮಂತಪ್ಪ ಅವರನ್ನು ಸನ್ಮಾನಿಸಲಾಯಿತು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !