ಗುರುವಾರ , ನವೆಂಬರ್ 21, 2019
20 °C

ಅಕ್ರಮ ಶೆಡ್ ತೆರವು

Published:
Updated:
Prajavani

ರಾಮನಗರ: ಇಲ್ಲಿನ ಖಾಸಗಿ ಬಸ್ ನಿಲ್ದಾಣದ ಬಳಿ ಷರೀಪ್ ಕಾಂಪ್ಲೆಕ್ಸ್ ಪಕ್ಕದಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಶೆಡ್ ಅನ್ನು ನಗರಸಭೆಯ ಅಧಿಕಾರಿಗಳು ತೆರವುಗೊಳಿಸಿದರು.

ನಗರದ ಹಳೆ ಸೇತುವೆಯ ಪಶ್ಚಿಮ ಭಾಗದಲ್ಲಿ ಷರೀಪ್ ಕಾಂಪ್ಲಕ್ಸ್ ಪಕ್ಕದಲ್ಲಿ ಅರ್ಕಾವತಿ ನದಿಗೆ ಇಳಿಯುವ ರಸ್ತೆಯನ್ನು ಒತ್ತುವರಿ ಮಾಡಿಕೊಂಡು ಗಡಿಯಾರದ ಅಂಗಡಿ ಮಾಲೀಕರೊಬ್ಬರು ಶೆಡ್ ನಿರ್ಮಿಸಿಕೊಳ್ಳಲು ಆರಂಭಿಸಿದ್ದರು. ಇದನ್ನು ಗಮನಿಸಿದ ನಗರ ಸಭೆಯ ಎಕ್ಸಿಕ್ಯೂಟಿವ್‌ ಎಂಜಿನಿಯರ್‌ (ಇ.ಇ) ರಾಜೇಗೌಡ ಅವರು ಒತ್ತುವರಿ ಮಾಡುವುದು, ಶೆಡ್ ನಿರ್ಮಿಸಿಕೊಳ್ಳುವುದು ಅಕ್ರಮ ಎಂದು ಎಚ್ಚರಿಸಿದ್ದರು.

ಆದರೆ ಅಂಗಡಿ ಮಾಲೀಕರು ಎಚ್ಚರಿಕೆಯನ್ನು ಕಡೆಗಣಿಸಿ, ಗೋಡೆ ನಿರ್ಮಿಸಿಕೊಂಡು ಶೆಡ್ ಹಾಕಿಕೊಂಡಿದ್ದರು. ಈ ಬಗ್ಗೆ ಮಾಹಿತಿ ಸಂಗ್ರಹಿಸಿದ ನಗರಸಭೆಯ ಅಧಿಕಾರಿಗಳು ಬುಧವಾರ ಬೆಳಿಗ್ಗೆ ನಗರಸಭೆಯ ಸಿಬ್ಬಂದಿ ಹಾಗೂ ನಗರ ಪೊಲೀಸರ ರಕ್ಷಣೆಯಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಶೆಡ್ ಅನ್ನು ಜೆಸಿಬಿ ಯ ಮೂಲಕ ತೆರವುಗೊಳಿಸಿದ್ದಾರೆ.

ಈಗಾಗಲೇ ಒತ್ತುವರಿ ಆಗಿರುವ ಪ್ರಕರಣಗಳ ಪತ್ತೆಗೆ ಚಿಂತನೆ ನಡೆಯುತ್ತಿದೆ. ಕನ್‌ಸರ್‌ವೆನ್ಸಿ ಗಲ್ಲಿಗಳ ಒತ್ತುವರಿ ಪ್ರಕರಣಗಳಿಗೆ ಅವಕಾಶವಾಗದಂತೆ ಎಚ್ಚರ ವಹಿಸಲಿದ್ದೇವೆ. ಸಾರ್ವಜನಿಕರಿಂದ ದೂರುಗಳು ಬಂದ ತಕ್ಷಣ ಕ್ರಮ ವಹಿಸುತ್ತೇವೆ ಎಂದು ನಗರಸಭೆಯ ಇಇ ರಾಜೇಗೌಡ ತಿಳಿಸಿದರು.

ನಗರಸಭೆಯ ಅಧಿಕಾರಿಗಳಾದ ವಿಜಯ್ ಕುಮಾರ್, ಶ್ರೀನಿವಾಸ್, ವಿರೂಪಾಕ್ಷ, ಗೋಪಾಲಸ್ವಾಮಿ ಇದ್ದರು.

ಪ್ರತಿಕ್ರಿಯಿಸಿ (+)