ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದ್ಯ ಅಕ್ರಮ ಮಾರಾಟ: ಕಠಿಣ ಕ್ರಮದ ಎಚ್ಚರಿಕೆ

ಅಬಕಾರಿ ಸಬ್‌ ಇನ್‌ಸ್ಪೆಕ್ಟರ್‌ ಚಂದ್ರಪ್ಪ, ಸ್ಥಳೀಯ ಮುಖಂಡರ ಚರ್ಚೆ
Last Updated 7 ಆಗಸ್ಟ್ 2019, 14:32 IST
ಅಕ್ಷರ ಗಾತ್ರ

ಕನಕಪುರ: ‘ಗ್ರಾಮ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ಮಾಡುವಂತಿಲ್ಲ. ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ ಎಂಬ ದೂರುಗಳು, ಸಾರ್ವಜನಿಕರಿಂದ ಬಂದಿದ್ದು, ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ಅಬಕಾರಿ ಸಬ್‌ ಇನ್‌ಸ್ಪೆಕ್ಟರ್‌ ಚಂದ್ರಪ್ಪ ಹೇಳಿದರು.

ಇಲ್ಲಿನ ಹೊಸದುರ್ಗ ಗ್ರಾಮ ಪಂಚಾಯಿತಿ ಆವರಣದಲ್ಲಿ ಬುಧವಾರ ನಡೆದ ಗ್ರಾಮ ಸಭೆ ಮತ್ತು ಸಾಮಾಜಿಕ ಲೆಕ್ಕ ಪರಿಶೋಧನಾ ಸಭೆಯಲ್ಲಿ ಅವರು ಮಾತನಾಡಿದರು.

ಹೊಸದುರ್ಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಬ್ಬೆದೊಡ್ಡಿ, ಹೊಸದುರ್ಗ, ಬಾಣಿನಾಯ್ಕನದೊಡ್ಡಿ ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡಲಾಗುತ್ತಿದೆ. ಅದನ್ನು ತಡೆಗಟ್ಟಬೇಕು ಎಂದು ಗ್ರಾಮಗಳ ಜನತೆ ಮಾಡಿದ ಆರೋಪಗಳಿಗೆ ಚಂದ್ರಪ್ಪ ಉತ್ತರಿಸಿದರು.

‘ತಾಲ್ಲೂಕಿಗೆ ಹೊಸದಾಗಿ ನೇಮಕವಾಗಿ ಬಂದಿದ್ದೇನೆ. ಆರೋಪ ಮಾಡಿರುವ ಗ್ರಾಮಗಳಿಗೆ ಮೊದಲು ಭೇಟಿ ನೀಡಿ ಪರಿಶೀಲಿಸಿ, ಚಿಲ್ಲರೆ ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವುದು ಕಂಡು ಬಂದರೆ, ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎನ್‌.ಎಸ್‌.ರಘು ಮಾತನಾಡಿ, ‘ಕೋಡಿಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಅಂತರ್ಜಲ ಮಟ್ಟ ತೀರ ಕುಸಿದಿದೆ. ಹಾಗಾಗಿ ಈ ಭಾಗದಲ್ಲಿ ಅಂತರ್ಜಲ ಹೆಚ್ಚಿಸಲು ಜಲಾಮೃತ ಮತ್ತು ಜಲಶಕ್ತಿ ಯೋಜನೆಯಡಿ ಕಲ್ಯಾಣಿಗಳ ಅಭಿವೃದ್ದಿ, ಕೆರೆಗಳ ಪುನಶ್ಚೇತನ, ಇಂಗುಗುಂಡಿ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ’ ನೀಡಲಾಗಿದೆ ಎಂದರು.

‘ಈ ಯೋಜನೆಯಡಿ ಕಾಮಗಾರಿಗಳನ್ನು ಮಾಡಲು ಯಾವುದೇ ಮಿತಿ ಇರುವುದಿಲ್ಲ. ಆಸಕ್ತ ರೈತರು ಮುಂದೆ ಬಂದು ಕಾಮಗಾರಿ ನಿರ್ಮಿಸಲು ಹೆಸರು ನೋಂದಾಯಿಸಿ, ಸಭೆಯಲ್ಲಿ ಅನುಮೋದನೆ ಪಡೆದುಕೊಳ್ಳಬೇಕು’ ಎಂದು ತಿಳಿಸಿದರು.

ಸಾಮಾಜಿಕ ಲೆಕ್ಕಪರಿಶೋಧನಾ ಜಿಲ್ಲಾ ಸಂಯೋಜಕ ಶ್ರೀನಿವಾಸ್‌ 2018-19ನೇ ಸಾಲಿನ ಮೊದಲನೇ ಸುತ್ತಿನ ಲೆಕ್ಕಪರಿಶೋಧನೆ ವರದಿಯನ್ನು ಸಭೆಯಲ್ಲಿ ಮಂಡಿಸಿದರು. ವರದಿಯಲ್ಲಿ ಕಂಡು ಬಂದ ಲೋಪದೋಷ ಸರಿಪಡಿಸಿಕೊಳ್ಳಲು ಅನುಪಾಲನ ವರದಿ ಸಿದ್ದಪಡಿಸುವಂತೆ ಪಿಡಿಒ ಅವರಿಗೆ ಮಾಹಿತಿ ನೀಡಿದರು.

ಪಂಚಾಯಿತಿ ಅಧ್ಯಕ್ಷ ಎಚ್‌.ಎಂ.ಶಿವರಾಮು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಪಶುಪಾಲನಾ ಇಲಾಖೆಯ ತಾಲ್ಲೂಕು ಅಧಿಕಾರಿ ಡಾ.ಯು.ಸಿ.ಕುಮಾರ್‌ ನೋಡಲ್‌ ಅಧಿಕಾರಿಯಾಗಿ ಸಭೆ ನಡೆಸಿಕೊಟ್ಟರು. ಪಂಚಾಯಿತಿ ಉಪಾಧ್ಯಕ್ಷೆ ರಾಣಿ ಕುಮಾರಿ, ಪಂಚಾಯಿತಿಯ ಎಲ್ಲ ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT