ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಕ್ಕಲಿಗರನ್ನು 2ಎಗೆ ಸೇರಿಸಲು ಮಾಜಿ ಶಾಸಕ ಕೆ. ರಾಜು ಒತ್ತಾಯ

ವಾರದೊಳಗೆ ನಿರ್ಧಾರ ಪ್ರಕಟಿಸದಿದ್ದರೆ ಹೋರಾಟದ ಎಚ್ಚರಿಕೆ
Last Updated 27 ನವೆಂಬರ್ 2020, 14:56 IST
ಅಕ್ಷರ ಗಾತ್ರ

ರಾಮನಗರ: " ಲಿಂಗಾಯತರ ತರುವಾಯ ರಾಜ್ಯದ ಒಕ್ಕಲಿಗರನ್ನೂ 2ಎ ಪ್ರವರ್ಗಕ್ಕೆ ಸೇರಿಸಿ ಅಗತ್ಯ ಮೀಸಲಾತಿ ಹಾಗೂ ಸೌಲಭ್ಯಗಳನ್ನು ಕಲ್ಪಿಸಬೇಕು' ಎಂದು ಮಾಜಿ ಶಾಸಕ ಕೆ. ರಾಜು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

"ರಾಜ್ಯ ಸರ್ಕಾರವು ವೀರಶೈವ ಲಿಂಗಾಯತ ಸಮುದಾಯವನ್ನು 2ಎಗೆ ಸೇರಿಸಲು ಹೊರಟಿರುವುದು ಸ್ವಾಗತಾರ್ಹ. ಅಂತೆಯೇ ವ್ಯವಸಾಯವೇ ಪ್ರಮುಖ ಕಸುಬಾಗಿರುವ ಒಕ್ಕಲಿಗ ಸಮಯದಾಯ ಸಹ ಆರ್ಥಿಕವಾಗಿ ಹಿಂದೆ ಉಳಿದಿದೆ. ಜನಸಂಖ್ಯೆಯಲ್ಲಿ ಈ ಎರಡೂ ಸಮುದಾಯಗಳು ಸರಿಸಮನಾಗಿವೆ. ಒಕ್ಕಲಿಗರಲ್ಲೂ ಶೇ 90ರಷ್ಟು ಕುಟುಂಬಗಳು ಆರ್ಥಿಕವಾಗಿ ಹಿಂದುಳಿದಿವೆ. ಹೀಗಾಗಿ ಈ ಸಮುದಾಯವನ್ನೂ ಅತಿ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಬೇಕು. ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿಯನ್ನು ಮರು ವಿಂಗಡನೆ ಮಾಡಬೇಕು' ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

"ರಾಜ್ಯದಲ್ಲಿ ಒಕ್ಕಲಿಗ ಸಮುದಾಯದ ಅನೇಕರು ಮುಖ್ಯಮಂತ್ರಿ ಆಗಿದ್ದರೂ ಯಾರೂ ಸಮುದಾಯದ ಪರವಾಗಿ ನಿಂತಿಲ್ಲ. ಈಗಲೂ ಲಿಂಗಾಯತ ಸಮುದಾಯದ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ ಎಂಬ ಭಯದಿಂದ ಒಕ್ಕಲಿಗ ನಾಯಕರು ಯಾರೂ ಈ ಬಗ್ಗೆ ಮಾತನಾಡುತ್ತಿಲ್ಲ. ಬಿಜೆಪಿ ಸರ್ಕಾರದಲ್ಲಿರುವ ಸಮುದಾಯದ ಸಚಿವರು ಈ ಬಗ್ಗೆ ಧ್ವನಿ ಎತ್ತಬೇಕು. ವಾರದ ಒಳಗೆ ತೀರ್ಮಾನ ಪ್ರಕಟಿಸದೇ ಇದ್ದರೆ ಮುಂದಿನ ಹೋರಾಟದ ಕುರಿತು ನಿರ್ಧಾರ ಮಾಡುತ್ತೇವೆ' ಎಂದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಚ್‌.ಎನ್‌. ಅಶೋಕ್‌ ಮಾತನಾಡಿ "ಜನಾಂಗ, ಸಮುದಾಯದ ವಿಚಾರ ಬಂದಾಗ ಪ್ರತಿಯೊಬ್ಬರೂ ಪಕ್ಷಬೇಧ ಮರೆತು ಒಗ್ಗೂಡಬೇಕು. ಮುಂದಿನ ಸಚಿವಸಂಪುಟ ಸಭೆಯಲ್ಲೇ ಈ ಬಗ್ಗೆ ತೀರ್ಮಾನ ಪ್ರಕಟಿಸಬೇಕು. ಇಲ್ಲವಾದಲ್ಲಿ ಪ್ರತಿಭಟನೆ ನಡೆಸಬೇಕಾಗುತ್ತದೆ' ಎಂದು ಎಚ್ಚರಿಸಿದರು.
ತಾಲ್ಲೂಕು ಪಂಚಾಯಿತಿ ಸದಸ್ಯ ಗಾಣಕಲ್‌ ನಟರಾಜು ಇದ್ದರು.

ಬಾಲಣ್ಣರನ್ನು ಹಿಂಬಾಲಿಸಿದೆ!
"ಜೆಡಿಎಸ್‌ ಚಿಹ್ನೆಯಿಂದ ಸ್ಪರ್ಧಿಸಿ ಜಿ.ಪಂ. ಸದಸ್ಯನಾಗಿ ಆಯ್ಕೆಯಾಗಿದ್ದೆ. ಆದರೆ ಸಹೋದರ ಎಚ್‌.ಸಿ. ಬಾಲಕೃಷ್ಣ ಕಾಂಗ್ರೆಸ್‌ ಸೇರಿದಾಗ ಅವರನ್ನು ಹಿಂಬಾಲಿಸಿದೆ. ಈಗ ಕಾಂಗ್ರೆಸ್ ಮುಖಂಡರು ನನಗೆ ಬಹುದೊಡ್ಡ ಜವಾಬ್ದಾರಿಯನ್ನೇ ನೀಡಿದ್ದಾರೆ' ಎಂದು ಎಚ್‌.ಎನ್‌. ಅಶೋಕ್‌ ತಮ್ಮ ಪಕ್ಷಾಂತರವನ್ನು ಸಮರ್ಥಿಸಿಕೊಂಡರು.

ಶಾಸಕರಿಗೆ ಅನ್ವಯಿಸುವ ಪಕ್ಷಾಂತರ ನಿಷೇಧ ಕಾಯ್ದೆ ಜಿ.ಪಂ. ಸದಸ್ಯರಿಗೆ ಏಕಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು "ಇದು ನಿಜಕ್ಕೂ ಚರ್ಚೆಯ ವಿಷಯ. ಇದನ್ನು ಕೆದಕುತ್ತಾ ಹೋದರೆ ಸಂವಿಧಾನಕ್ಕೇ ತಿದ್ದುಪಡಿ ತರಬೇಕು' ಎಂದು ಜಾರಿಕೊಂಡರು.

ಜಾತಿ ವ್ಯವಸ್ಥೆ ಹೋಗಲಾಡಿಸಲು ಯಾವ ರಾಜಕಾರಣಿಯೂ ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ. ಬರೀ ನಾಟಕ ಆಡಿಕೊಂಡೇ ಕಾಲ ಕಳೆದಿದ್ದಾರೆ
ಕೆ. ರಾಜು
ಮಾಜಿ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT