ಮಂಗಳವಾರ, ಏಪ್ರಿಲ್ 20, 2021
29 °C

‘ದೇಹಾರೋಗ್ಯಕ್ಕೆ ದೇಶಿಯ ಆಹಾರ ತಿನ್ನಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತಿಪ್ಪಸಂದ್ರ(ಮಾಗಡಿ): ದೇಶಿಯ ಸಿರಿಧಾನ್ಯಗಳಾದ ಹಾರಕ, ನವಣೆ, ಕೊರಲೆ, ತಿಂದು ದೇಹಾರೋಗ್ಯ ಕಾಪಾಡಿಕೊಳ್ಳಲು ಮುಂದಾಗಬೇಕು ಎಂದು ಸರ್ಕಾರಿ ಆಸ್ಪತ್ರೆಯ ಆರೋಗ್ಯ ಶಿಕ್ಷಣಾಧಿಕಾರಿ ಆರ್‌. ರಂಗನಾಥ್‌ ಮನವಿ ಮಾಡಿದರು.

ಹೋಬಳಿಯ ತಾವರೆಕೆರೆ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ಕೇಂದ್ರದ ವತಿಯಿಂದ ಪೌಷ್ಟಿಕ ಆಹಾರ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.

ಪೂರ್ವಿಕರು ಕೊಟ್ಟಿಗೆ ಗೊಬ್ಬರ ಮತ್ತು ಕುರಿ ಮೇಕೆ ಗೊಬ್ಬರವನ್ನು ಭೂಮಿಗೆ ಹಾಕಿ ಬೆಳೆಗಳನ್ನು ಬೆಳೆಯುತ್ತಿದ್ದರು. ಬೆರಕೆ ಸೊಪ್ಪು, ರಾಗಿ, ಜೋಳ ತಿಂದು ನೂರಾರು ವರ್ಷಗಳ ಕಾಲ ಆರೋಗ್ಯಪೂರ್ಣ ಬದುಕು ಸಾಗಿಸಿ, ಕೂಡುಕುಟುಂಬದಲ್ಲಿ ನೆಮ್ಮದಿಯ ಜೀವನ ನಡೆಸಿದ್ದರು. ರಸಗೊಬ್ಬರ ಬಳಸುತ್ತಿರುವುದು ದೇಹಾರೋಗ್ಯ ನಶಿಸಲು ಮುಖ್ಯ ಕಾರಣವಾಗಿದೆ. ಬೇಕರಿ ತಿನಿಸು ಮಕ್ಕಳಿಗೆ ಕೊಡಬೇಡಿ. ಬೆರಕೆ ಸೊಪ್ಪು, ಮೇಕೆ ಹಾಲು ಬಳಸಿ ದೇಹಾರೋಗ್ಯ ಸುಧಾರಿಸಿಕೊಳ್ಳಲು ಮುಂದಾಗಬೇಕು ಎಂದರು.

ಜ್ಞಾನವಿಕಾಸ ಸಮನ್ವಯಾಧಿಕಾರಿ ಕವಿತಾ ಮಾತನಾಡಿ, ಸಕ್ಕರೆ, ಉಪ್ಪು ಕಡಿಮೆ ತಿನ್ನುವುದು ಆರೋಗ್ಯದ ಲಕ್ಷಣ. ಸರಳ ವ್ಯಾಯಾಮ ಮಾಡುವುದು ಅನನ್ಯವಾದುದು. ಮಹಿಳೆಯರು ಹೊಲದಲ್ಲಿ ದುಡಿಯುವುದರಿಂದ ಪೌಷ್ಟಿಕ ಆಹಾರ ಸೇವನೆ ಮಾಡುವುದನ್ನು ರೂಢಿಸಿಕೊಳ್ಳಬೇಕು ಎಂದರು.

ಸಂಯೋಜಕಿಯರಾದ ಕೆಂಪಮ್ಮ, ಸುನಂದ ಮಾತನಾಡಿದರು. ಸಂಪಿಗೆ ಕೇಂದ್ರದ ಸದಸ್ಯರುಗಳು ಇದ್ದರು. ಜ್ಞಾನ ವಿಕಾಸ ಕೇಂದ್ರದ 40 ಸದಸ್ಯರು ಮನೆಯಲ್ಲಿ ತಯಾರಿಸಿಕೊಂಡು ತಂದಿದ್ದ ಪೌಷ್ಟಿಕ ಆಹಾರವನ್ನು ಹಂಚಲಾಯಿತು. ಗುಣಮಟ್ಟದ ಪೌಷ್ಟಿಕ ಆಹಾರ ತಯಾರಿಸಿದ್ದವರಿಗೆ ಬಹುಮಾನ ನೀಡಿ ಗೌರವಿಸಲಾಯಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು